ಸಾಮರಸ್ಯ ಕಾಪಾಡುವಂತ ಮೌಲ್ಯಯುತ ಶಿಕ್ಷಣ ನೀಡಿ

KannadaprabhaNewsNetwork |  
Published : Sep 10, 2024, 01:34 AM IST
ಸಿಕೆಬಿ-1 ಜಿಲ್ಲಾಡಳಿತ ಭವನದಲ್ಲಿ  ಜಿಲ್ಲಾಡಳಿತ ಆಯೋಜಿಸಿದ್ದ, ಶಿಕ್ಷಕರ ದಿನಾಚರಣೆಯನ್ನು ಸಚಿವ ಡಾ.ಎಂ.ಸಿ.ಸುಧಾಕರ್ ದೀಪ ಬೇಳಗುವ ಮೂಲಕ ಉದ್ಘಾಟಿಸಿದರು | Kannada Prabha

ಸಾರಾಂಶ

ಶಿಕ್ಷಣದಲ್ಲಿ ಕೇವಲ ಅಂಕಗಳಿಕೆಯೇ ಮುಖ್ಯವಲ್ಲ ಅದರ ಜೊತೆಗೆ ಮೌಲ್ಯಯುತ ಶಿಕ್ಷಣ ನೀಡಬೇಕು. ಶಿಕ್ಷಣ ಕ್ಷೇತ್ರ ಜಾಗತಿಕವಾಗಿ ಬಹಳ ಬದಲಾವಣೆ ಹೊಂದಿದೆ. ಅದಕ್ಕೆ ಹೊಂದಿಕೊಳ್ಳುವ ಜ್ಞಾನ ಬೆಳೆಸಿಕೊಳ್ಳಬೇಕು.ಪ್ರಸ್ತುತ ಇಂಗ್ಲೀಷ್ ಮಾಧ್ಯಮವನ್ನು ಕಡೆಗಣಿಸುವಂತಿಲ್ಲ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ದೇಶ ಮತ್ತು ಸಮಾಜ ಕಟ್ಟುವಂತಹ ಕೆಲಸ ಶಿಕ್ಷಕರ ಜವಾಬ್ದಾರಿಯಾಗಿದೆ. ಸಾಮಾಜಿಕ ಸಾಮರಸ್ಯವನ್ನು ಹಾಗೂ ಸಾಮಾಜಿಕ ಬದ್ಧತೆಯನ್ನು ಕಾಪಾಡುವಂತಹ ಮನೋಭಾವನೆಯನ್ನು ಮೈಗೂಡಿಸಿಕೊಳ್ಳುವಂತಹ ಮೌಲ್ಯಯುತ ಶಿಕ್ಷಣವನ್ನು ಶಿಕ್ಷಕರು ವಿದ್ಯಾರ್ಥಿಗಳಿಗೆ ನೀಡಬೇಕು ಎಂದು ಉನ್ನತ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ತಿಳಿಸಿದರು.

ನಗರ ಹೊರವಲಯದ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಸೋಮವಾರ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ ಚಿಕ್ಕಬಳ್ಳಾಪುರ ಇವರ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಡಾ. ಸರ್ವೆಪಲ್ಲಿ ರಾಧಾಕೃಷ್ಣನ್ ರವರ ಜನ್ಮದಿನೋತ್ಸವದ ಪ್ರಯುಕ್ತ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಶಿಕ್ಷಕ ವೃತ್ತಿಗೆ ಅಪಾರ ಗೌರವ

ಎಲ್ಲಾ ವೃತ್ತಿಗಿಂತ ಶಿಕ್ಷಕರ ವೃತ್ತಿಗೆ ಸಮಾಜದಲ್ಲಿ ಅಪಾರವಾದ ಗೌರವವಿದೆ. ಆ ಗೌರವ, ವೃತ್ತಿ ಧರ್ಮ, ಗುರು ಸಂಹಿತೆಯನ್ನು ಪಾಲಿಸುವಂತಹ ಶಿಕ್ಷಕರು, ಉಪನ್ಯಾಸಕರು ನೀವಾಗಬೇಕು. ಮಕ್ಕಳಿಗೆ ತಂದೆ ತಾಯಿಯ ನಂತರದ ಸ್ಥಾನದಲ್ಲಿ ಶಿಕ್ಷಕರರಾಗಿರುತ್ತಾರೆ. ಮಾಜಿ ರಾಷ್ಟ್ರಪತಿ ಹಾಗೂ ತತ್ವಶಾಸ್ತ್ರಜ್ಞ ಸರ್ವೆಪಲ್ಲಿ ರಾಧಾಕೃಷ್ಣನ್ ಮತ್ತು ಪ್ರಥಮ ಮಹಿಳಾ ಶಿಕ್ಷಕಿ ಸಾವಿತ್ರಿ ಬಾಯಿ ಪುಲೆ ಅವರ ಸಾಧನೆಯ ವಿವರವನ್ನು ಮಕ್ಕಳಿಗೆ ತಿಳಿಸಿಕೊಡುವ ಕೆಲಸವನ್ನು ಶಿಕ್ಷಕರು ಮಾಡಬೇಕು ಎಂದರು.

ಶಿಕ್ಷಣದಲ್ಲಿ ಕೇವಲ ಅಂಕಗಳಿಕೆಯೇ ಮುಖ್ಯವಲ್ಲ ಅದರ ಜೊತೆಗೆ ಮೌಲ್ಯಯುತ ಶಿಕ್ಷಣ ನೀಡಬೇಕು. ಶಿಕ್ಷಣ ಕ್ಷೇತ್ರ ಜಾಗತಿಕವಾಗಿ ಬಹಳ ಬದಲಾವಣೆ ಹೊಂದಿದೆ. ಅದಕ್ಕೆ ಹೊಂದಿಕೊಳ್ಳುವ ಜ್ಞಾನ ಬೆಳೆಸಿಕೊಳ್ಳಬೇಕು.ಪ್ರಸ್ತುತ ಇಂಗ್ಲೀಷ್ ಮಾಧ್ಯಮವನ್ನು ಕಡೆಗಣಿಸುವಂತಿಲ್ಲ. ಮಾತೃ ಭಾಷೆಗೆ ಒತ್ತು ನೀಡಿ ಇತರ ಭಾಷೆಗಳನ್ನು ಕಲಿಯಬೇಕು. ದೊಡ್ಡ ಮಟ್ಟದಲ್ಲಿ ಶೈಕ್ಷಣಿಕವಾಗಿ ಮಹಿಳೆಯರು ಮುಂದಿದ್ದಾರೆ. ಇದು ಮಹಿಳಾ ಸಬಲೀಕರಣಕ್ಕೆ ಸಹಾಯಕವಾಗಿದೆ ಎಂದರು.ಎಸ್ಸೆಸ್ಸೆಲ್ಸಿ ಫಲಿತಾಂಶ ಉತ್ತಮಪಡಿಸಿ

ಜಿಲ್ಲೆಯಲ್ಲಿ 2023-24ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆ ಫಲಿತಾಂಶ ಕುಸಿದಿದೆ. ಆದ್ದದರಿಂದ ಶಿಕ್ಷಕರು ಫಲಿತಾಂಶವನ್ನು ಉತ್ತಮಪಡಿಸಲು ಹೆಚ್ಚು ಶ್ರಮವಹಿಸಬೇಕು. ಅನುದಾನಿತ ಶಾಲೆಗಳಿಗೆ ಖಾಲಿ ಇರುವ ಹುದ್ದೆಗಳನ್ನು ಭರ್ತಿಮಾಡಲು ಕ್ರಮ ಕೈಗೊಳ್ಳಲಾಗಿದೆ. 7ನೇ ವೇತನ ಆಯೋಗ ಅನುಷ್ಠಾನ ಮಾಡಲಾಗಿದೆ. ವೃತ್ತಿ ಧರ್ಮ ಪಾಲಿಸಿ ತಮ್ಮ ವೃತ್ತಿಯ ಬಗ್ಗೆ ಹೆಮ್ಮೆಪಡಬೇಕು ಎಂದರು.

ಶಾಸಕ ಪ್ರದೀಪ್ ಈಶ್ವರ್ ಮಾತನಾಡಿ, ತಾವು ಸಹ ಶಿಕ್ಷಕ ವೃತ್ತಿಯಿಂದಲೇ ಜೀವನವನ್ನು ವೃದ್ಧಿಸಿಕೊಂಡವನು. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಪೋಷಕರು ಹೆಚ್ಚು ಶ್ರಮವಹಿಸುತ್ತಾರೆ. ಶಿಕ್ಷಕರು ಮಕ್ಕಳಲ್ಲಿ ಜ್ಞಾನವನ್ನು ಗುರುತಿಸುವ ಕಾರ್ಯ ಮಾಡಬೇಕು. ಸರ್ಕಾರಿ ಶಾಲೆಯ ಮಕ್ಕಳಿಗೆ 8ನೇ ತರಗತಿಯಿಂದ 10ನೇ ತರಗತಿವರೆಗೆ ಇಂಗ್ಲಿಷ್ ಬೋಧಿಸಬೇಕು ಎಂದರು.

ಶಿಕ್ಷಕರಿಗೆ ಸನ್ಮಾನ

ಕಾರ್ಯಕ್ರಮದಲ್ಲಿ ಮಾಜಿ ರಾಷ್ಟ್ರಪತಿ ಸರ್ವೆಪಲ್ಲಿ ರಾಧಾಕೃಷ್ಣನ್ ರವರ ಭಾವ ಚಿತ್ರ ಅನಾವರಣಗೊಳಿಸಿ, ಪುಷ್ಪನಮನ ಸಲ್ಲಿಸಿ, ಗೌರವ ಸಲ್ಲಿಸಲಾಯಿತು.ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಅತ್ಯುತ್ತಮ ಪ್ರಶಸ್ತಿ ಪುರಸ್ಕೃತ ಶಿಕ್ಷಕರಿಗೆ ಹಾಗೂ 34 ಮಂದಿ ನಿವೃತ್ತ ಶಿಕ್ಷಕರಿಗೆ ಸನ್ಮಾನಿಸಲಾಯಿತು. ಕ್ರೀಡೆಗಳಲ್ಲಿ ವಿಜೇತ ಶಿಕ್ಷಕರಿಗೆ ಬಹುಮಾನ ನೀಡಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ, ಜಿಪಂ ಸಿಇಒ ಪ್ರಕಾಶ್.ಜಿ.ಟಿ.ನಿಟ್ಟಾಲಿ, ಅಪರ ಡೀಸಿ ಡಾ.ಎನ್.ಭಾಸ್ಕರ್, ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬೈಲಾಂಜಿನಪ್ಪ, ಉಪನಿರ್ದೇಶಕ ಮುನಿಕೆಂಪೇಗೌಡ, ಬಿಇಒ ನರೇಂದ್ರಕುಮಾರ್, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಟಿ.ಶಶಿಧರ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎ.ನಾರಾಯಣಸ್ವಾಮಿ,ರೋಟರಿ ಕ್ಲಬ್ ನ ಗೌರ್ನರ್ ಮಹದೇವ ಪ್ರಸಾದ್, ಸುಂದರ್, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಜಿ.ಹರೀಶ್, ತಾಪಂ ಇಒ ಮಂಜುನಾಥ್, ವಿವಿಧ ಸಂಘಗಳ ಪದಾಧಿಕಾರಿಗಳು, ಅಧಿಕಾರಿಗಳು ಹಾಜರಿದ್ದರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...