ಹಾನಗಲ್ಲ: ನಗರದಲ್ಲಿ ಹಂದಿ ನಾಯಿ ಹಾವಳಿ, ಟ್ರಾಫಿಕ್ ಸಮಸ್ಯೆಗೆ ಪರಿಹಾರವಿಲ್ಲ, ವಿದ್ಯುತ್ ಕಡಿತದಿಂದ ಪಟ್ಟಣದ ಕುಡಿಯುವ ನೀರಿನ ಜಲಾಗಾರಕ್ಕೆ ನೀರು ತುಂಬಿಸುವ ತೊಂದರೆ, ಸಿಸಿ ಕ್ಯಾಮೆರಾ ಹಾಕುವುದು ಯಾವಾಗ, ಮುಖ್ಯ ರಸ್ತೆ ಒಡೆದು ಹೋಗಿದ್ದರೂ ನೋಡುವವರಿಲ್ಲ, ಆನಿಕರೆ ಬಳಿ ಕುಡುಕರ ಹಾವಳಿ ಈ ಎಲ್ಲ ವಿಷಯಗಳ ಬಗ್ಗೆ ಗಂಭೀರ ಚರ್ಚೆ ಪುರಸಭೆ ಸಾಮಾನ್ಯ ಸಭೆಯಲ್ಲಿ ನಡೆಯಿತಾದರೂ ಪರಿಹಾರಕ್ಕೆ ಮಾತ್ರ ಕಾಲ ನಿಗದಿಯಾಗಿಲ್ಲ.
ಹಾನಗಲ್ಲ ಪುರಸಭೆಯ ಹೊಸ ಅಧ್ಯಕ್ಷ, ಉಪಾಧ್ಯಕ್ಷರ ಮೊದಲ ಸಾಮಾನ್ಯ ಸಭೆ ಅತ್ಯಂತ ಉತ್ಸಾಹದಿಂದ ಆರಂಭವಾಯಿತಾದರೂ ಸಮಸ್ಯೆಗಳ ಪರಿಹಾರಕ್ಕೆ ಚರ್ಚೆ ನಡೆದವೇ ಹೊರತು ಕಾಲ ಮಿತಿಯಲ್ಲಿ ಸಮಸ್ಯೆಗಳ ಪರಿಹಾರಕ್ಕೆ ನಿಗದಿತ ಯೋಜನೆ ರೂಪಿಸಲಾಗಿಲ್ಲ. ಪಟ್ಟಣದಲ್ಲಿ ಹಂದಿ ಹಾವಳಿಗೆ ರೋಗ ಹೆಚ್ಚುತ್ತಿವೆ, ಬಿಡಾಡಿ ನಾಯಿಗಳು ಶಾಲಾ ಮಕ್ಕಳಾದಿಯಾಗಿ ಸಾರ್ವಜನಿಕರಿಗೆ ಕಚ್ಚುತ್ತಿವೆ. ಇವನ್ನು ಹೊರಗೆ ಹಾಕಲು ಪ್ರತಿ ಸಭೆಯಲ್ಲಿ ಚರ್ಚೆಯಾಗುತ್ತದೆ. ಪರಿಹಾರ ಮಾತ್ರ ಆಗುತ್ತಿಲ್ಲ ಎಂದು ಪುರಸಭೆ ಮಾಜಿ ಅಧ್ಯಕ್ಷೆ ಹಸಿನಾಬಿ ನಾಯಕನವರ ಸಭೆಯ ಗಮನ ಸೆಳೆದರು. ಸಭೆಯಲ್ಲಿದ್ದ ಎಲ್ಲ ಸದಸ್ಯರು ಕೂಡಲೇ ಕ್ರಮ ಜರುಗಿಸಲು ಮುಖ್ಯಾಧಿಕಾರಿಗಳಿಗೆ ಅನುಮತಿ ನೀಡಿದರು. ಆದರೆ ಮುಖ್ಯಾಧಿಕಾರಿಗಳು ಸಮಸ್ಯೆ ಪರಿಹಾರಕ್ಕೆ ಕಾಲ ಮಿತಿ ಬಗ್ಗೆ ಮಾತನಾಡಲೇ ಇಲ್ಲ.ವಿದ್ಯುತ್ ಕಡಿತದಿಂದಾಗಿ ಕುಡಿಯುವ ನೀರು ಜಲಾಗಾರಕ್ಕೆ ನೀರು ತುಂಬಿಸಲು ಸಮಸ್ಯೆಯಾಗಿದೆ ಎಂದು ಸದಸ್ಯರು ಆರೋಪಿಸಿದರು. ಸಭೆಯಲ್ಲಿದ್ದ ಹೆಸ್ಕಾಂ ಅಧಿಕಾರಿ ಆನಂದ ಕೂಡಲೆ ಸಮಸ್ಯೆ ಪರಿಹರಿಸುವ ಭರವಸೆ ನೀಡಿ ಹೋದರು. ಪಟ್ಟಣದಲ್ಲಿ ಟ್ರಾಫಿಕ್ ಸಮಸ್ಯೆಗೆ ಪರಿಹಾರ ನೀಡಲು ಪೊಲೀಸ್ ಇಲಾಖೆ ಪಿಎಸ್‌ಐ ಸಂಪತ್ ಆನಿಕಿವಿ ಅವರಿಗೆ ಸದಸ್ಯರು ಮನವಿ ಮಾಡಿದರು. ಮಹಾತ್ಮಾ ಗಾಂಧಿ ವೃತ್ತ ಹಾಗೂ ಮುಖ್ಯ ರಸ್ತೆಯಲ್ಲಿ ಟ್ರಾಫಿಕ್, ವಾಹನ ನಿಲುಗಡೆ ಸಮಸ್ಯೆ ಪರಿಹಾರಕ್ಕೆ ಒತ್ತಾಯಿಸಿದರು. ಪಟ್ಟಣದ ಮುಖ್ಯ ರಸ್ತೆ ಎಲ್ಲೆಂದರಲ್ಲಿ ಒಡೆದು ವಾಹನ ಓಡಾಟಕ್ಕೆ ಸಮಸ್ಯೆಯಾಗಿದೆ. ದುರಸ್ತಿ ಕಾರ್ಯ ಮಾತ್ರ ಕಾಣುತ್ತಿಲ್ಲ. ಈ ನಿರ್ಲಕ್ಷ್ಯಕ್ಕೆ ಕಾರಣ ತಿಳಿಯುತ್ತಿಲ್ಲ ಎಂದು ಸದಸ್ಯರು ಲೋಕೋಪಯೋಗಿ ಇಲಾಖೆಯ ಅಧಿಕಾರಿ ಮಾಲತೇಶ ಅವರಿಗೆ ಕೇಳಿದ ಪ್ರಶ್ನೆಗೆ ಉತ್ತರ ಮಾತ್ರ ಶೀಘ್ರ ಎಂದು ಸಿಗಲಿಲ್ಲ. ಪಟ್ಟಣಕ್ಕೆ ಕುಡಿಯುವ ನೀರಿನ ಜಲಮೂಲವಾದ ಆನಿಕೆರೆ ಏರಿಯ ರಸ್ತೆ ಹಾಗೂ ಅದರ ಸುತ್ತಮುತ್ತ ಕುಡುಕರ ಹಾವಳಿ ಹೆಚ್ಚಾಗಿದೆ. ಇದನ್ನು ನಿಯಂತ್ರಿಸಲು ಮುಂದಾಗಿ ಎಂದು ಮುಖ್ಯಾಧಿಕಾರಿಗಳಿಗೆ ಸೂಚಿಸಿದರು. ಪುರಸಭೆಯ ೨೮ ಮಳಿಗೆಗಳು ಖಾಲಿ ಇವೆ. ಹರಾಜು ಕರೆದರೂ ಯಾರೂ ಸರಿಯಾದ ಬಾಡಿಗೆ ಕೇಳುತ್ತಿಲ್ಲ. ಜಿಲ್ಲಾಧಿಕಾರಿಗಳ ಪರವಾನಗಿ ಪಡೆದು ರಿಯಾಯಿತಿ ಬಾಡಿಗೆಯಲ್ಲಿ ಹರಾಜು ಮಾಡುವ ಯೋಚನೆ ಇದೆ. ಇದಕ್ಕೆ ಸಭೆ ಅನುಮತಿಸಬೇಕು ಎಂದು ಮುಖ್ಯಾಧಿಕಾರಿಗಳು ಮನವಿ ಮಾಡಿದರು. ಸಭೆ ಒಪ್ಪಿಗೆ ನೀಡಿತು. ಎಸ್‌ಬಿಐ ಬಳಿ ಇರುವ ಗೂಡಂಗಡಿಗಳಿಂದಾಗಿ ಸಾರ್ವಜನಿಕರಿಗೆ ತೊಂದರೆಯಾಗಿದೆ. ಅವನ್ನು ತೆರವುಗೊಳಿಸಲು ಸದಸ್ಯರು ಸೂಚಿಸಿದರು. ಹಾನಗಲ್ಲ ಪುರಸಭೆಗೆ ತೆರಿಗೆ ವಸೂಲಿಯದೇ ತಲೆನೋವಾಗಿದೆ. ೭೦ ಲಕ್ಷ ರು.ಗಳಷ್ಟು ತೆರಿಗೆ ಬಾಕಿ ಇದೆ. ಇದರ ವಸೂಲಿಗಾಗಿ ಸ್ತ್ರೀಶಕ್ತಿ ಗುಂಪುಗಳಿಗೆ ಜವಾಬ್ದಾರಿ ನೀಡಿ ಕಮೀಶನ್ ಆಧಾರದಲ್ಲಿ ವಸೂಲಿಗೆ ಸಭೆ ಅನುಮತಿ ನೀಡಿತು. ಇದಕ್ಕೆ ಸಂಬಂಧಿಸಿದ ಕಾನೂನು ಕ್ರಮಗಳನ್ನು ಅನುಸರಿಸಿ ಅನುಮತಿಸಬೇಕು ಎಂದು ಮನವಿ ಮಾಡಿದರು. ನಾಲ್ಕಾರು ತಿಂಗಳಿಗೊಮ್ಮೆಯಾದರೂ ಪಟ್ಟಣದ ಚರಂಡಿಗಳನ್ನು ಸ್ವಚ್ಛಗೊಳಿಸಲು ಕ್ರಮ ಜರುಗಿಸಿ ಎಂದು ಸದಸ್ಯರು ಮುಖ್ಯಾಧಿಕಾರಿಗಗಳಿಗೆ ಸೂಚಿಸಿದರು.ನೂತನ ಪುರಸಭಾಧ್ಯಕ್ಷೆ ಮಮತಾ ಆರೆಗೊಪ್ಪ ಅವರ ಅಧ್ಯಕ್ಷತೆಯಲ್ಲಿ, ಉಪಾಧ್ಯಕ್ಷೆ ವೀಣಾ ಗುಡಿ ಅವರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಮುಖ್ಯಾಧಿಕಾರಿ ವಾಯ್.ಕೆ.ಜಗದೀಶ ಇದ್ದರು. ಪುರಸಭೆ ಮಾಜಿ ಅಧ್ಯಕ್ಷರಾದ ನಾಗಪ್ಪ ಸವದತ್ತಿ, ಎಸ್.ಕೆ.ಪೀರಜಾದೆ, ಖುರ್ಷಿದ ಅಹಮ್ಮದ ಹುಲ್ಲತ್ತಿ, ಸದಸ್ಯರಾದ ಮಹೇಶ ಪವಾಡಿ, ಶೋಭಾ ಉಗ್ರಣ್ಣನವರ, ರಾಧಿಕಾ ದೇಶಪಾಂಡೆ, ವಿರುಪಾಕ್ಷಪ್ಪ ಕಡಬಗೇರಿ, ಮೇಕಾಜಿ ಕಲಾಲ, ಗನಿ ಪಾಳಾ, ಶಂಶಿಯಾಬಾನು ಬಾಳೂರ ಮೊದಲಾದವರು ಚರ್ಚೆಯಲ್ಲಿ ಪಾಲ್ಗೊಂಡಿದ್ದರು.