ಬ್ಯಾಡಗಿ: ಕಬಡ್ಡಿಗೆ ಇದೀಗ ಜಾಗತಿಕ ಮನ್ನಣೆ ದೊರೆಯುತ್ತಿದ್ದು, ಕಬಡ್ಡಿ ಹಳ್ಳಿಯಿಂದ ಜಾಗತಿಕ, ವೃತ್ತಿಪರ ಮತ್ತು ಆಕರ್ಷಕ ಕ್ರೀಡೆಯಾಗಿ ರೂಪಾಂತರಗೊಂಡಿದೆ. ವಿದ್ಯಾರ್ಥಿ ದೆಸೆಯಲ್ಲಿ ಕಬಡ್ಡಿ ಆಡಿ ಕೈಬಿಡದೇ ವೃತ್ತಿಪರ ಕ್ರೀಡಾಪಟುಗಳಾಗಿ ಹೊರಹೊಮ್ಮುವ ಮೂಲಕ ಭವಿಷ್ಯ ರೂಪಿಸಿಕೊಳ್ಳುವಂತೆ ಪ್ರೊ ಕಬಡ್ಡಿ ಪಾಟ್ನಾ ಪೈರೇಟ್ಸ್ ಮಾಜಿ ಕೋಚ್ ಹಾಗೂ ಪ್ರಸ್ತುತ ಥೈಲ್ಯಾಂಡ್ ಕಬಡ್ಡಿ ತಂಡದ ಹೆಡ್ ಕೋಚ್ ರವೀಂದ್ರ ಶೆಟ್ಟಿ ತಿಳಿಸಿದರು.
ಪಟ್ಟಣದ ಎಸ್‌ಜೆಜೆಎಂ ತಾಲೂಕು ಕ್ರೀಡಾಂಗಣದಲ್ಲಿ ತಾಲೂಕು ಮಟ್ಟದ ಪ್ರಾಥಮಿಕ, ಪ್ರೌಢಶಾಲಾ ಕ್ರೀಡಾಕೂಟದ ವಿಜೇತ ಕ್ರೀಡಾಪಟುಗಳಿಗೆ ಬಹುಮಾನ ವಿತರಿಸಿ ಮಾತನಾಡಿ, ಕ್ರೀಡೆಗಳು ಜೀವನದಲ್ಲಿ ಬಹಳ ಮುಖ್ಯವಾದ ಪಾತ್ರ ವಹಿಸುತ್ತವೆ. ವಿವಿಧ ಆಯಾಮಗಳಿಂದ ಅವುಗಳ ಮಹತ್ವ ಅರ್ಥೈಸಿಕೊಳ್ಳಬೇಕು. ಪ್ರಥಮವಾಗಿ ದೈಹಿಕ, ಮಾನಸಿಕ ಆರೋಗ್ಯ, ಒತ್ತಡ ಮತ್ತು ಆತಂಕ ಕಡಿಮೆ ಮಾಡುವ ಮೂಲಕ ಆತ್ಮವಿಶ್ವಾಸ ಸಹಿಷ್ಣುತೆ ವೃದ್ಧಿಸಲಿದೆ. ಕ್ರೀಡಾಪಟುಗಳು ಶಿಸ್ತು, ತಾಳ್ಮೆ ಮತ್ತು ಸಮರ್ಪಣಾ ಮನೋಭಾವದೊಂದಿಗೆ ಕ್ರೀಡೆಗಳಲ್ಲಿ ತೊಡಗುವಂತೆ ಕೋರಿದರು.ಸಾಮಾಜಿಕವಾಗಿ ಪ್ರಾಮುಖ್ಯ: ಕ್ರೀಡಾ ಮನೋಭಾವ ಅತ್ಯಂತ ಶ್ರೇಷ್ಠವಾಗಿದ್ದು, ನಾಯಕತ್ವದ ಗುಣಗಳನ್ನು ವೃದ್ಧಿಸುತ್ತದೆ. ಕ್ರೀಡೆಗಳು ಜಾತಿ, ಧರ್ಮ ಅಥವಾ ಸಂಸ್ಕೃತಿ ಲೆಕ್ಕಿಸದೇ ಜನರನ್ನು ಒಟ್ಟುಗೂಡಿಸುತ್ತವೆ. ಸಾಮಾಜಿಕವಾಗಿ ಏಕತೆ, ಸಹಕಾರ ಮತ್ತು ಸಾಮರಸ್ಯವನ್ನು ಪ್ರೋತ್ಸಾಹಿಸುತ್ತದೆ. ಜನರಿಗೆ ಮನರಂಜನೆ ನೀಡುವ ಮೂಲಕ ರಾಷ್ಟ್ರೀಯ ಮಟ್ಟದಲ್ಲಿ ದೇಶದ ಹೆಮ್ಮೆ ಹೆಚ್ಚಿಸುವಂತೆ ಮಾಡಲಿವೆ ಎಂದರು.
ಇದೇ ಸಂದರ್ಭದಲ್ಲಿ ವಿಜೇತ ಕ್ರೀಡಾಪಟುಗಳಿಗೆ ಪ್ರಶಸ್ತಿಗಳನ್ನು ವಿತರಿಸಿದರು. ದೈಹಿಕ ಶಿಕ್ಷಣ ಪರಿವೀಕ್ಷಕ ಪಮ್ಮಾರ, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಮಾಜಿ ಆಧ್ಯಕ್ಷ ಎಸ್.ಜಿ. ಕೋರಿ, ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಮಹದೇವ ಕರಿಯಣ್ಣನವರ, ತೀರ್ಪುಗಾರರಾದ ಕೆ.ಸಿ. ಇಟ್ಟಿಗುಡಿ, ಮಲ್ಲಿಕಾರ್ಜುನ ಕೋಡಿಹಳ್ಳಿ, ಬಸವರಾಜಪ್ಪ, ಎ.ಟಿ. ಪೀಠದ, ಬಸವರಾಜ ಬಸಪ್ಪನವರ, ಎಂ.ಎಸ್. ಕರ್ಜಗಿ, ದಾನಪ್ಪ ಲಮಾಣಿ, ಎಸ್.ಆರ್. ಬಡ್ಡಿ, ಜಗದೀಶ ಗಾಡದ, ಶಿವರಾಜ ಕರ್ಜಗಿ, ಕೋಚ್ ಮಂಜುಳ ಭಜಂತ್ರಿ, ಈರಣ್ಣ ಬಣಕಾರ, ಶಿವಯೋಗಿ ಶಿರೂರ, ಪ್ರಕಾಶ ತಾವರಗಿ, ಜಿತೇಂದ್ರ ಸುಣಗಾರ ಇತರರಿದ್ದರು.