ಪಿಯುಸಿ ವಿಜ್ಞಾನ ವಿಭಾಗ ಹಾಗೂ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ
ಕನ್ನಡಪ್ರಭ ವಾರ್ತೆ ಕೂಡ್ಲಿಗಿಇತ್ತೀಚೆಗೆ ವಸತಿ ಶಾಲೆಗಳಲ್ಲಿ ವಿದ್ಯಾರ್ಥಿನಿಯರು ಸುರಕ್ಷಿತವಾಗಿಲ್ಲ ಎಂಬ ಸುದ್ದಿ ಕೇಳಿ ನನಗೆ ಖೇದವೆನಿಸಿತು. ವಿದ್ಯಾರ್ಥಿನಿಯರಿಗೆ ಬರೀ ಶಿಕ್ಷಣ ನೀಡಿದರಷ್ಟೇ ಸಾಲದು ಅವರಿಗೆ ಆರೋಗ್ಯ ಹಾಗೂ ಸುರಕ್ಷತೆಯ ಬಗ್ಗೆಯೂ ಕಾಳಜಿ ವಹಿಸಬೇಕು ಎಂದು ಶಾಸಕ ಡಾ. ಎನ್.ಟಿ. ಶ್ರೀನಿವಾಸ್ ಹೇಳಿದರು.
ತಾಲೂಕಿನ ಹಿರೇಹೆಗ್ಡಾಳ್ ಕಿತ್ತೂರು ರಾಣಿ ಚನ್ನಮ್ಮವಸತಿ ಶಾಲೆಯಲ್ಲಿ ಸೋಮವಾರ ಆಯೋಜಿಸಿದ್ದ ಪಿಯುಸಿ ವಿಜ್ಞಾನ ವಿಭಾಗ ಹಾಗೂ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಉದ್ಘಾಟಿಸಿ ಮಾತನಾಡಿದರು.ಹಿರೇಹೆಗ್ಡಾಳ್ ಕಂದಾಯ ವ್ಯಾಪ್ತಿಯಲ್ಲಿ ನಿರ್ಮಾಣವಾದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಕಟ್ಟಡ ಕಾಮಗಾರಿ ಪ್ರಾರಂಭಿಸಲು ಹಲವಾರು ವಿಘ್ನ ಎದುರಾದವು. ಆದರೂ ಈ ಹಿಂದೆ ಶಾಸಕರಾಗಿದ್ದ ಎನ್.ವೈ. ಗೋಪಾಲಕೃಷ್ಣರ ಶ್ರಮ ಹಾಗೂ ಕಾಳಜಿಯಿಂದ ಸುಸಜ್ಜಿತ ಕಟ್ಟಡ ನಿರ್ಮಾಣವಾಗಿದೆ. ಈಗ ಇನ್ನೂ ಕಟ್ಟಡಗಳು ಬೇಕು, ಸಭಾಭವನಕ್ಕೆ ಸುಸಜ್ಜಿತ ಛಾವಣಿ ಸೇರಿದಂತೆ ಮೂಲಭೂತ ಸೌಕರ್ಯ ಕಲ್ಪಿಸಲು ನಾನು ಮುಂದಾಗುತ್ತೇನೆ ಎಂದರು.
ಹಿರೇಹೆಗ್ಡಾಳ್ ಗ್ರಾಮದ ಯುವಮುಖಂಡ ಅಕ್ಷಯ್ ಕುಮಾರ್ ಮಾತನಾಡಿದರು.ಈ ಸಂದರ್ಭ ಕೂಡ್ಲಿಗಿ ತಹಶೀಲ್ದಾರ್ ವಿ.ಕೆ. ನೇತ್ರಾವತಿ, ಕೂಡ್ಲಿಗಿ ಪಪಂ ಅಧ್ಯಕ್ಷ ಕಾವಲ್ಲಿ ಶಿವಪ್ಪ ನಾಯಕ, ಪಪಂ ಮಾಜಿ ಅಧ್ಯಕ್ಷ ಉದಯ ಎಸ್. ಜನ್ನು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಗುರುಸಿದ್ದನಗೌಡ, ಪ್ರಾಂಶುಪಾಲೆ ಶೋಭಾ, ತಾಲೂಕು ಸಮಾಜ ಕಲ್ಯಾಣಾಧಿಕಾರಿ ಜಗದೀಶ್ ದಿಡಗೂರು, ತಾಲೂಕು ಎಸ್ಟಿ ಅಧಿಕಾರಿ ಮೆಹಬೂಬ್ ಭಾಷಾ, ಟಿ.ಜಿ. ಮಲ್ಲಿಕಾರ್ಜುನಗೌಡ, ಮುಖಂಡರಾದ ಕಂದಗಲ್ಲು ಪರುಸಪ್ಪ, ಜಿಂಕಲ್ ನಾಗಮಣಿ, ಡಾಣಿ ರಾಘವೇಂದ್ರ, ಹಿರೇಹೆಗ್ಡಾಳ್ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ಪೋಷಕರಿದ್ದರು.