ಮಹಿಳೆಯರಿಗೆ ನ್ಯಾಯ ಸಿಗಲೆಂದು ಆಗ್ರಹಿಸಿ ತೆಂಗಿನಕಾಯಿ ಒಡೆದು ಪ್ರತಿಭಟನೆ

KannadaprabhaNewsNetwork |  
Published : Sep 10, 2025, 01:04 AM IST
ಕೊಟ್ಟೂರೇಶ್ವರ ದೇವಸ್ಥಾನದ ಮುಂದೆ ತೆಂಗಿನಕಾಯಿ ಒಡೆದು ಪ್ರತಿಭಟನೆ ನಡೆಸಲಾಯಿತು. | Kannada Prabha

ಸಾರಾಂಶ

ಧರ್ಮಸ್ಥಳ ಉಳಿಯಲಿ, ಅತ್ಯಾಚಾರಕ್ಕೆ ಈಡಾಗಿ ಕೊಲೆಯಾದ ಸೌಜನ್ಯ ಮತ್ತು ಇತರ ಮಹಿಳೆಯರಿಗೆ ನ್ಯಾಯ ಸಿಗಲಿ ಎಂದು ಆಗ್ರಹಿಸಿ ಪಟ್ಟಣದ ವಿವಿಧ ಸಂಘಟನೆಗಳ ಕಾರ್ಯಕರ್ತರು ಸೋಮವಾರ ಇಲ್ಲಿನ ಬಸ್ ನಿಲ್ದಾಣ ವೃತ್ತದಿಂದ ಕೊಟ್ಟೂರೇಶ್ವರ ಸ್ವಾಮಿ ದೇವಸ್ಥಾನದ ತನಕ ನೂರಾರು ತೆಂಗಿನಕಾಯಿ ಒಡೆದು ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಕೊಟ್ಟೂರು

ಧರ್ಮಸ್ಥಳ ಉಳಿಯಲಿ, ಅತ್ಯಾಚಾರಕ್ಕೆ ಈಡಾಗಿ ಕೊಲೆಯಾದ ಸೌಜನ್ಯ ಮತ್ತು ಇತರ ಮಹಿಳೆಯರಿಗೆ ನ್ಯಾಯ ಸಿಗಲಿ ಎಂದು ಆಗ್ರಹಿಸಿ ಪಟ್ಟಣದ ವಿವಿಧ ಸಂಘಟನೆಗಳ ಕಾರ್ಯಕರ್ತರು ಸೋಮವಾರ ಇಲ್ಲಿನ ಬಸ್ ನಿಲ್ದಾಣ ವೃತ್ತದಿಂದ ಕೊಟ್ಟೂರೇಶ್ವರ ಸ್ವಾಮಿ ದೇವಸ್ಥಾನದ ತನಕ ನೂರಾರು ತೆಂಗಿನಕಾಯಿ ಒಡೆದು ಪ್ರತಿಭಟನೆ ನಡೆಸಿದರು.

ಸೌಜನ್ಯ ಭಾವಚಿತ್ರ ಹಿಡಿದುಕೊಂಡ ಪ್ರತಿಭಟನಾಕಾರರು ಅತ್ಯಾಚಾರಿಗಳಿಗೆ ಶಿಕ್ಷೆಯಾಗಲಿ, ಧರ್ಮಸ್ಥಳ ರಕ್ಷಣೆಯಾಗಲಿ ಎಂದು ಕೂಗುತ್ತ ದೇವಸ್ಥಾನದವರೆಗೂ ಸಾಗಿದರು.

ದೇವಸ್ಥಾನದ ಮುಂಭಾಗದಲ್ಲಿ ಮಾತನಾಡಿದ ಹಿರಿಯ ಪತ್ರಕರ್ತ ಉಜ್ಜಯನಿ ರುದ್ರಪ್ಪ, ಧರ್ಮಸ್ಥಳ ಮಂಜುನಾಥ ಸ್ವಾಮಿಗೆ ಕಳಂಕ ಬರಬಾರದು. ಈ ಕಾರಣಕ್ಕಾಗಿ ಧರ್ಮದ ಹೆಸರಿನಲ್ಲಿ ನುಣುಚಿಕೊಳ್ಳುತ್ತಿರುವ ಆರೋಪಿಗಳಿಗೆ ಕೊಟ್ಟೂರೇಶ್ವರ ಸ್ವಾಮಿ ಶಿಕ್ಷೆ ನೀಡಲಿ ಎನ್ನುವ ಕಾರಣಕ್ಕಾಗಿ ನೂರಾರು ಕಾಯಿಗಳನ್ನು ಒಡೆದು ಪ್ರಾರ್ಥಿಸುತ್ತಿರುವುದಾಗಿ ಹೇಳಿದರು.

ಸಂವಿಧಾನ ರಕ್ಷಣೆ ಮಾಡಬೇಕಾದ ಜನ ನಾಯಕರು ಇದೀಗ ಧರ್ಮಾಧಿಕಾರಿ ಮತ್ತು ಅವರ ಸಹೋದರ ಮಾಡುವ ಎಲ್ಲಾ ಬಗೆಯ ದುಷ್ಕೃತ್ಯಗಳನ್ನು ರಕ್ಷಿಸಲು ಮುಂದಾಗುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದರಲ್ಲದೆ, ಧರ್ಮಾಧಿಕಾರಿ ವಿರುದ್ಧ 300 ಕೇಸ್ ದಾಖಲಾಗಿದ್ದರೂ ಅವರನ್ನು ಬಂಧಿಸದೆ ಪೊಲೀಸರು ಕೆಲವರನ್ನು ಮಾತ್ರ ಬಂಧಿಸಲು ಕೂಡಲೇ ಮುಂದಾಗುತ್ತಾರೆ ಎಂದು ಆರೋಪಿಸಿದರು.

ಡಿಎಸ್ಎಸ್ ಮುಖಂಡ ಬದ್ದಿ ದುರ್ಗೇಶ್ ಮಾತನಾಡಿ, ಮಂಜುನಾಥ ಸ್ವಾಮಿಯ ಮೇಲೆ ನಮಗೆ ಅಪಾರ ಭಕ್ತಿ ಇದೆ. ಆತನ ಹೆಸರನ್ನು ಮುಂದು ಮಾಡಿಕೊಂಡು ಧರ್ಮಾಧಿಕಾರಿ ಮತ್ತು ಕುಟುಂಬದವರು ರಕ್ಷಣೆ ಪಡೆದು ದೇವರನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ದೂರಿದರು. ಅಲಬೂರಿನ ಮಂಜಣ್ಣ, ರೈತ ಸಂಘದ ಎಂ. ಮಲ್ಲಿಕಾರ್ಜುನ, ಜಯಪ್ರಕಾಶ್ ನಾಯಕ್ ಮಾತನಾಡಿದರು.

ಪತ್ರಕರ್ತರಾದ ಬದ್ದಿ ಮಂಜುನಾಥ, ಉತ್ತಂಗಿ ಕೊಟ್ರೇಶ್, ಕಾಳಪುರ ಗ್ರಾಪಂ ಸದಸ್ಯ ನಾಗರಾಜಗೌಡ, ಶಿವರಾಜ, ಪುನೀತ್ ಅಭಿಮಾನಿ ರಾಂಪುರ ಪ್ರಕಾಶ್ ಮತ್ತಿತರರು ಇದ್ದರು.

PREV

Recommended Stories

ಫಾರಿನ್‌ಗೆ ಅನ್ನಭಾಗ್ಯ ಅಕ್ಕಿ 2 ರೈಸ್‌ಮಿಲ್‌ ಜಫ್ತಿ: ಕೇಸು
ಮುಂದೇಕೆ, ಈಗ್ಲೆ ಮುಸ್ಲಿಂ ಆಗ್ಬಿಡಿ : ಬಿಜೆಪಿಗರ ಕಿಡಿ