ಕನ್ನಡಪ್ರಭ ವಾರ್ತೆ ಚಾಮರಾಜನಗರ
ವಿದ್ಯಾರ್ಥಿಗಳು ಶ್ರದ್ಧೆಯಿಂದ ಓದುವ ಜತೆಗೆ ಸತತ ಅಭ್ಯಾಸ, ಕಠಿಣ ಪರಿಶ್ರಮದಿಂದ ತಮ್ಮ ಗುರಿಯನ್ನು ಮುಟ್ಟಲು ಸಾಧ್ಯವಿದೆ ಎಂದು ಚಾಮರಾಜನಗರ ಜಿಲ್ಲಾ ನೆಟ್‌ಬಾಲ್ ಅಸೋಸಿಯೇಷನ್‌ನ ಗೌರವಾಧ್ಯಕ್ಷೆ ನರ್ಗೀಸ್‌ಬಾನು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.ತಿ.ನರಸೀಪುರ ತಾಲೂಕಿನ ಮೇದಿನಿ ಗ್ರಾಮದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಚಾಮರಾಜನಗರ ಜಿಲ್ಲಾ ನೆಟ್‌ಬಾಲ್ ಅಸೋಸಿಯೇಷನ್ ಹಾಗೂ ಅಮೆಚೂರ್ ನೆಟ್‌ಬಾಲ್ ಅಸೋಸಿಯೇಷನ್ ಆಫ್ ಕರ್ನಾಟಕದ ೩೬ನೇ ಜೂನಿಯರ್ ರಾಷ್ಟ್ರೀಯ ನೆಟ್‌ಬಾಲ್ ಚಾಂಪಿಯನ್ ಶಿಪ್ ಹಾಗೂ ೨ನೇ ಜೂನಿಯರ್ ರಾಷ್ಟ್ರೀಯ ಫಾಸ್ಟ್-೫ ನೆಟ್‌ಬಾಲ್ ಚಾಂಪಿಯನ್ ಶಿಪ್‌ನ ಬಾಲಕರ ವಿಭಾಗದ ಕರ್ನಾಟಕ ತಂಡದ ತರಬೇತಿ ಶಿಬಿರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಮಧ್ಯಪ್ರದೇಶ ರಾಜ್ಯದ ಕಾಸರವಾಡ ಜಿಲ್ಲೆಯ ವಿದ್ಯಾ ವಿಹಾರದಲ್ಲಿರುವ ಜವಾಹರಲಾಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನಲ್ಲಿ ಜ.೨೫ರಿಂದ ೨೮ರವರೆಗೆ ನಡೆಯಲಿರುವ ೩೬ನೇ ಜೂನಿಯರ್ ರಾಷ್ಟ್ರೀಯ ನೆಟ್‌ಬಾಲ್ ಚಾಂಪಿಯನ್ ಶಿಪ್ ಹಾಗೂ ೨೮ರಿಂದ ೩೧ರವರೆಗೆ ನಡೆಯಲಿರುವ ೨ನೇ ಜೂನಿಯರ್ ರಾಷ್ಟ್ರೀಯ ಫಾಸ್ಟ್-೫ ನೆಟ್‌ಬಾಲ್ ಚಾಂಪಿಯನ್ ಶಿಪ್ ಪಂದ್ಯಾವಳಿಗಾಗಿ ಮೇದಿನಿ ಗ್ರಾಮದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ತರಬೇತಿ ಶಿಬಿರವು ಯಶಸ್ವಿಯಾಗಲಿ ಎಂದು ಹಾರೈಸಿದರು.
ಮೇದಿನಿ ಗ್ರಾಮದ ಕ್ರೀಡಾಪಟುಗಳು ಕರ್ನಾಟಕ ತಂಡದಲ್ಲಿ ಸ್ಥಾನ ಪಡೆದಿರುವುದು ಹೆಮ್ಮೆಯ ವಿಚಾರ. ಈ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ತಮ್ಮ ಜೀವನದಲ್ಲಿ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಿ. ತಮ್ಮ ಪ್ರತಿಭೆ, ಕೌಶಲ್ಯಗಳ ಜೊತೆಗೆ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಿ ಎಂದರು.ನೆಟ್‌ಬಾಲ್ ಅಸೋಸಿಯೇಷನ್‌ನ ಅಧ್ಯಕ್ಷ ವಿ. ಶ್ರೀನಿವಾಸಪ್ರಸಾದ್ ಮಾತನಾಡಿ, ವಿವಿಧ ಜಿಲ್ಲೆಗಳಿಂದ ಶಿಬಿರದಲ್ಲಿ ಭಾಗವಹಿಸಿರುವ ಕ್ರೀಡಾಪಟುಗಳು ಶಿಸ್ತು, ಸಂಯಮ, ಕ್ರೀಡಾ ಮನೋಭಾವದಿಂದ ತಮ್ಮಲ್ಲಿರುವ ಅಮೂಲ್ಯ ಪ್ರತಿಭೆಯನ್ನು ಪಂದ್ಯಾವಳಿಯಲ್ಲಿ ಪ್ರದರ್ಶನ ಮಾಡಿ ರಾಜ್ಯ ಮತ್ತು ರಾಷ್ಟ್ರಕ್ಕೆ ಕೀರ್ತಿಯನ್ನು ತನ್ನಿ ಎಂದರು.ರಾಜ್ಯ ನೆಟ್‌ಬಾಲ್ ಅಸೋಸಿಯೇಷನ್‌ನ ಖಜಾಂಚಿ ವಿಶ್ವನಾಥ್ ಮಾತನಾಡಿ, ಗ್ರಾಮೀಣ ಪ್ರತಿಭೆಗಳನ್ನು ಗುರುತಿಸುವ ಕೆಲಸವಾಗಬೇಕು. ಇದಕ್ಕೆ ರಾಜ್ಯ ನೆಟ್‌ಬಾಲ್ ಸಂಸ್ಥೆಯಿಂದ ಸಂಪೂರ್ಣ ಸಹಕಾರ ನೀಡುತ್ತೇವೆ ಎಂದರು.ಜಿಲ್ಲಾ ನೆಟ್‌ಬಾಲ್ ಪ್ರಧಾನ ಕಾರ್ಯದರ್ಶಿ ಹಾಗೂ ತರಬೇತಿ ಶಿಬಿರದ ಮುಖ್ಯ ತರಬೇತುದಾರರಾದ ಮಹದೇವಪ್ರಸಾದ್, ಮೇದಿನಿ ಶಾಲೆಯ ಮಾಜಿ ಎಸ್‌ಡಿಎಂಸಿ ಅಧ್ಯಕ್ಷ ರಾಚನಾಯ್ಕ, ನೆಟ್‌ಬಾಲ್ ಸಮಿತಿ ಸದಸ್ಯರಾದ ನಾಗೇಂದ್ರ ಹಾಗೂ ಕೆಎಂಫ್‌ನ ಗುಣ ಮತ್ತು ಭರವಸೆ ವಿಭಾಗದ ತಾಂತ್ರಿಕ ಅಧಿಕಾರಿ ಆಲಿಖಾನ್ ಸಾಹೇಬ್, ಹಿರಿಯ ನ್ಯಾಷನಲ್ ಕ್ರೀಡಾಪಟುಗಳು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.