ಹಳಿಯಾಳ ಪಟ್ಟಣದ ಕೆಎಲ್ಎಸ್ ಪದವಿ ಮತ್ತು ಪದವಿಪೂರ್ವ ಕಾಲೇಜಿನಲ್ಲಿ ಮಾದಕ ವಸ್ತುಗಳ ನಿಷೇಧ ಕುರಿತು ಜಾಗೃತಿ "ಬೇಡಾ ಬ್ರೋ ಡ್ರಗ್ಸ್ " ಮತ್ತು "ಅಪರೇಶನ್ ರೈಸ್ " ಕಾರ್ಯಕ್ರಮ ನಡೆಯಿತು.
ಹಳಿಯಾಳ: ರಾಜ್ಯದಲ್ಲಿ ಮಾದಕ ವಸ್ತುಗಳ ಜಾಲವನ್ನು ಬುಡಸಮೇತ ಕಿತ್ತು ಹಾಕಲು ರಾಜ್ಯ ಸರ್ಕಾರ ಪಣತೊಟ್ಟಿದ್ದು, ಎರಡು ವರ್ಷದೊಳಗೆ "ಮಾದಕ ವಸ್ತು ಮುಕ್ತ ರಾಜ್ಯ "ವನ್ನಾಗಿಸಲು ಗುರಿ ಹೊಂದಲಾಗಿದೆ. ಸರ್ಕಾರ ಈ ಗುರಿ ತಲುಪಲು ಸಹಕರಿಸುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ ಎಂದು ಹಳಿಯಾಳ ಸಿಪಿಐ ಜಯಪಾಲ ಪಾಟೀಲ ಹೇಳಿದರು.
ಪಟ್ಟಣದ ಕೆಎಲ್ಎಸ್ ಪದವಿ ಮತ್ತು ಪದವಿಪೂರ್ವ ಕಾಲೇಜಿನಲ್ಲಿ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಹಳಿಯಾಳ ಪೊಲೀಸ್ ಠಾಣೆಯ ವತಿಯಿಂದ ಆಯೋಜಿಸಿದ ಮಾದಕ ವಸ್ತುಗಳ ನಿಷೇಧ ಕುರಿತು ಜಾಗೃತಿ ಕಾರ್ಯಕ್ರಮ "ಬೇಡಾ ಬ್ರೋ ಡ್ರಗ್ಸ್ " ಮತ್ತು "ಅಪರೇಶನ್ ರೈಸ್ " ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು. ವಿಶೇಷವಾಗಿ ಯುವಜನರು ಮಾದಕ ವಸ್ತುಗಳನ್ನು ಸಪೂರ್ಣವಾಗಿ ತಿರಸ್ಕರಿಸಿ, ಆರೋಗ್ಯಕರ ಹಾಗೂ ಜವಾಬ್ದಾರಿಯುತ ಜೀವನಶೈಲಿಯನ್ನು ಅಳವಡಿಸಿಕೊಳ್ಳುವಂತೆ ಈ ಅಭಿಯಾನ ಪ್ರೇರೇಪಿಸುತ್ತದೆ ಎಂದ ಅವರು, ಮಾದಕ ವಸ್ತುಗಳ ಸೇವನೆಯಿಂದ ಆಗುವ ಅನಾಹುತಗಳು, ಅದರ ಬಳಕೆ ಮತ್ತು ಮಾರಾಟಕ್ಕೆ ಇರುವ ಶಿಕ್ಷೆ, ವ್ಯಸನಮುಕ್ತ ಸಮಾಜ ನಿರ್ಮಾಣ ಮಾಡಲು ಸರ್ಕಾರಗಳು ತೆಗೆದುಕೊಂಡು ನಿಯಮ ಮತ್ತು ನಿರ್ಧಾರಗಳ ಬಗ್ಗೆ ಪಿಪಿಟಿ ಹಾಗೂ ವಿಡಿಯೋ ಮೂಲಕ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಿದರು.
ಕಾರ್ಯಕ್ರಮದ ಭಾಗವಾಗಿ ರಾಷ್ಟ್ರಮಟ್ಟದ ಸ್ಥಳೀಯ ಕುಸ್ತಿಪಟುಗಳಾದ ಶಾಲಿನಿ ಸಿದ್ದಿ ಮತ್ತು ಪ್ರಿನ್ಸಿಟಾ ಸಿದ್ದಿ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಶ್ರೀನಿವಾಸ ಪ್ರಭು ಮಾತನಾಡಿ, ಒಳ್ಳೆಯ ಹವ್ಯಾಸಗಳು ವಿದ್ಯಾರ್ಥಿಗಳ ಜೀವನವಾಗಬೇಕು. ಕೆಟ್ಟ ವ್ಯಸನಗಳು ಅಲ್ಲ ಎಂದು ಹೇಳಿದರು.
ಬೇಡಾ ಬ್ರೋ ಡ್ರಗ್ಸ್ ಕುರಿತು ಹಳಿಯಾಳ ಪಿಎಸ್‌ಐ ಕೆ.ಎನ್. ಅರಕೇರಿ ಅವರು ಪ್ರತಿಜ್ಞಾವಿಧಿ ಬೋಧಿಸಿದರು.
ಪಿಎಸ್ಐ ಮಹೇಶ ಮಾಳಿ, ಪಿಎಸ್ಐ ಎಂ.ಎಸ್. ಮೇಲಗೇರಿ ಇದ್ದರು. ಉಪನ್ಯಾಸಕ ಎಂ.ವಿ. ಕಿರಣಕುಮಾರ ಕಾರ್ಯಕ್ರಮ ಆಯೋಜಿಸಿದ್ದರು. ಕಾಲೇಜು ಎನ್ಎಸ್ಎಸ್ ಅಧಿಕಾರಿ ಶಾಂತಾರಾಮ ಚಿಬ್ಬುಲಕರ ಕಾರ್ಯಕ್ರಮ ನಿರ್ವಹಿಸಿದರು.
ಪೊಲೀಸ್ ಇಲಾಖೆ ಸಿಬ್ಬಂದಿ, ಕಾಲೇಜು ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಂದ "ಬೇಡಾ ಬ್ರೋ "ಫಲಕ ಮೇಲೆ ಸಹಿ ಸಂಗ್ರಹಿಸಲಾಯಿತು. ಸೆಲ್ಫಿ ಪಾಯಿಂಟ್ ಮೂಲಕ ಬೇಡಾ ಡ್ರಗ್ಸ್ ಬಗ್ಗೆ ಪ್ರಚಾರ ನೀಡಲಾಯಿತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.