ಕನ್ನಡಪ್ರಭ ವಾರ್ತೆ ಮಂಡ್ಯ
ಬಿಜೆಪಿಯವರು ಹಿಟ್ಲರ್ ವಂಶಸ್ಥರು, ಮನೆಮುರುಕರು, ದಲಿತ ವಿರೋಧಿಗಳು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಟೀಕಾಪ್ರಹಾರ ನಡೆಸಿದರು.ಶ್ರೀರಂಗಪಟ್ಟಣ ತಾಲೂಕಿನ ಕೃಷ್ಣರಾಜಸಾಗರ ಜಲಾಶಯದಲ್ಲಿ ಕಾವೇರಿ ಮಾತೆಗೆ ಪೂಜೆ ಮತ್ತು ಬಾಗಿನ ಸಲ್ಲಿಕೆ ಕಾರ್ಯಕ್ರಮದಲ್ಲಿ ಮಾತನಾಡಿ, ಬಿಜೆಪಿಯವರಿಗೆ ದಲಿತರು, ಹಿಂದುಳಿದವರ ಬಗ್ಗೆ ಮಾತನಾಡುವ ನೈತಿಕತೆಯೇ ಇಲ್ಲ. ಎಸ್‌ಸಿಎಸ್‌ಪಿ ಮತ್ತು ಟಿಎಎಸ್‌ಪಿ ಕಾಯಿದೆ ಇರುವುದು ಕರ್ನಾಟಕದಲ್ಲಿ ಮಾತ್ರ. ಬಿಜೆಪಿ ಅಧಿಕಾರದಲ್ಲಿರುವ ಯಾವ ರಾಜ್ಯದಲ್ಲೂ ಈ ಯೋಜನೆಯೇ ಇಲ್ಲ. ಅಂದ ಮೇಲೆ ದಲಿತರ ಬಗ್ಗೆ ಮಾತನಾಡುವ ಅಧಿಕಾರ ಇವರಿಗೆಲ್ಲಿದೆ ಎಂದು ಪ್ರಶ್ನಿಸಿದರು.
ನಾವು ಎಸ್‌ಸಿಎಸ್‌ಪಿ, ಟಿಎಸ್‌ಪಿ ಯೋಜನೆಯಡಿ ವಾರ್ಷಿಕ ೩೯ ಸಾವಿರ ಕೋಟಿ ರು. ಖರ್ಚು ಮಾಡುತ್ತಿದ್ದೇವೆ. ೪೮ ಲಕ್ಷ ಕೋಟಿ ರು. ಬಜೆಟ್ ಮಂಡಿಸುವ ಕೇಂದ್ರ ಸರ್ಕಾರ ದಲಿತರಿಗೆ ಕೇವಲ ೬೫ ಸಾವಿರ ಕೋಟಿ ರು. ಹಣ ಇಟ್ಟಿದ್ದಾರೆ. ದಲಿತರ ಅಭಿವೃದ್ಧಿಗೆ ನಾವು ಮಾಡಿರುವಷ್ಟು ಕೆಲಸವನ್ನು ಯಾರೂ ಮಾಡಿಲ್ಲ. ಇಂತಹವರಿಂದ ದಲಿತರ ಉದ್ಧಾರದ ಬಗ್ಗೆ ಪಾಠ ಕಲಿಯಬೇಕಿಲ್ಲ. ಎಲ್ಲ ಧರ್ಮ, ಜಾತಿಯ ಜನರಿಗೆ ಆರ್ಥಿಕ ಮತ್ತು ಸಾಮಾಜಿಕ ಶಕ್ತಿ ನೀಡಬೇಕೆಂಬ ಉದ್ದೇಶದಿಂದ ಗ್ಯಾರಂಟಿ ಯೋಜನೆ ಜಾರಿಗೆ ತಂದಿದ್ದೇವೆ. ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಿ ಎಂದು ಹೇಳುವ ತಾಕತ್ತು, ಧೈರ್ಯ ಬಿಜೆಪಿ-ಜೆಡಿಎಸ್‌ನವರಿಗಿಲ್ಲ. ಬಡವರ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆಂಬ ಕಾರಣಕ್ಕೆ ಗ್ಯಾರಂಟಿ ಯೋಜನೆಗಳಿಗೆ ಹಣ ಬಳಸುತ್ತಿದ್ದಾರೆಂದು ಹೇಳುತ್ತಿದ್ದಾರೆ ಎಂದು ಜರಿದರು.ಬಿಜೆಪಿ-ಜೆಡಿಎಸ್ ಇಬ್ಬರೂ ಮನೆಮುರುಕರು. ಅವರು ಈಗ ಒಂದಾಗಿದ್ದಾರೆ. ಏನಾದರೂ ನಡೆದರೆ ಸಾಕು ಸಿಬಿಐಗೆ ಕೊಡಿ ಎನ್ನುತ್ತಾರೆ. ಹಿಂದೆ ಸಿಬಿಐನ್ನು ಬಿಜೆಪಿಯವರು ಚೋರ್ ಬಚಾವ್ ಇನ್ವೆಸ್ಟಿಗೇಷನ್ ಎನ್ನುತ್ತಿದ್ದರು. ಈಗ ಇದ್ದಕ್ಕಿದ್ದಂತೆ ಸಿಬಿಐ ಮೇಲೆ ಪ್ರೀತಿ ಉಕ್ಕಿ ಹರಿಯುತ್ತಿದೆ ಎಂದು ಲೇವಡಿ ಮಾಡಿದರು.
ರಾಜ್ಯದ ಅಭಿವೃದ್ಧಿ ವಿಚಾರ, ಪ್ರವಾಹ, ಕೇಂದ್ರದಿಂದ ಬರಬೇಕಿರುವ ಅನುದಾನದ ಬಗ್ಗೆ ಚರ್ಚೆ ಮಾಡಬೇಕಾದ ಅಧಿವೇಶನದಲ್ಲಿ ಜನರಿಗೆ ಬೇಡವಾದ ಅನವಶ್ಯಕ ವಿಚಾರಗಳನ್ನು ಪ್ರಸ್ತಾಪಿಸಿ ಕಾಲಹರಣ ಮಾಡಿದರು. ಮೇಕೆದಾಟು, ಮಹದಾಯಿ, ಕೃಷ್ಣ ಮೇಲ್ದಂಡೆ ಯೋಜನೆ, ಪ್ರವಾಹ ಪರಿಸ್ಥಿತಿಯ ಬಗ್ಗೆ ಯಾರೂ ಮಾತನಾಡುವುದಿಲ್ಲ. ಸುಳ್ಳು ಹೇಳುವುದನ್ನು ಕಾಯಕ ಮಾಡಿಕೊಂಡು ಅದನ್ನು ಜನರೆದುರು ಸತ್ಯ ಮಾಡುವುದಕ್ಕೆ ಹೊರಟಿದ್ದಾರೆ. ನಾವು ಜನರ ಆಶೀರ್ವಾದದಿಂದ ೧೩೬ ಸ್ಥಾನಗಳಲ್ಲಿ ಗೆದ್ದು ಅಧಿಕಾರಕ್ಕೆ ಬಂದಿದ್ದೇವೆ. ಬಿಜೆಪಿ-ಜೆಡಿಎಸ್‌ನವರ ಆಶೀರ್ವಾದದಿಂದ ಗೆದ್ದು ಬಂದಿಲ್ಲ. ಸರ್ಕಾರವನ್ನು ಅಸ್ಥಿರ ಮತ್ತು ದುರ್ಬಲಗೊಳಿಸುವುದನ್ನೇ ಗುರಿಯಾಗಿಸಿಕೊಂಡಿದ್ದಾರೆ. ಜನರು ಇವರ ಸುಳ್ಳು ಮಾತುಗಳಿಗೆ ಮಾರಿಹೋಗುವವರಲ್ಲ ಎಂದು ದೃಢವಾಗಿ ಹೇಳಿದರು.ಮೇಕೆದಾಟು ನಮ್ಮ ಹಕ್ಕು. ಆ ಯೋಜನೆ ಅನುಷ್ಠಾನಗೊಂಡರೆ ೬೫ ಟಿಎಂಸಿ ನೀರನ್ನು ಸಂಗ್ರಹಿಸಿಡಬಹುದು. ಬಿಜೆಪಿ-ಜೆಡಿಎಸ್ ಸಂಸದರು ಕರ್ನಾಟಕಕ್ಕೆ ಆಗಿರುವ ಅನ್ಯಾಯದ ಬಗ್ಗೆ ಕೇಂದ್ರದ ಬಳಿ ಮಾತನಾಡಲಿ. ಕೇಂದ್ರ ಬಜೆಟ್‌ನಲ್ಲಿ ರಾಜ್ಯಕ್ಕೆ ೧ ರುಪಾಯಿ ಕೊಟ್ಟಿಲ್ಲ. ಅದರ ಬಗ್ಗೆ ಮಾತನಾಡಲಿ. ಅದನ್ನು ಬಿಟ್ಟು ರಾಜ್ಯಕ್ಕೆ ಯಾವ ಅನ್ಯಾಯವಾಗಿಲ್ಲವೆಂದು ಹೇಳುತ್ತಾ ಜನರ ದಿಕ್ಕುತಪ್ಪಿಸುವ, ತಪ್ಪು ಮಾಹಿತಿ ನೀಡುವ ಕೆಲಸ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಸಚಿವರಾದ ಎನ್.ಚಲುವರಾಯಸ್ವಾಮಿ, ಡಾ.ಎಚ್.ಸಿ ಮಹದೇವಪ್ಪ, ಕೆ.ವೆಂಕಟೇಶ್, ಶಾಸಕರಾದ ಪಿ.ರವಿಕುಮಾರ್, ಪಿ.ಎಂ.ನರೇಂದ್ರಸ್ವಾಮಿ, ಕೆ.ಎಂ.ಉದಯ್, ತನ್ವೀರ್‌ಸೇಠ್, ಜಿ.ಡಿ.ಹರೀಶ್‌ಗೌಡ, ದರ್ಶನ್ ಧ್ರುವನಾರಾಯಣ, ಮಧು ಜಿ ಮಾದೇಗೌಡ, ದಿನೇಶ್ ಗೂಳಿಗೌಡ, ಕೆ.ವಿವೇಕಾನಂದ, ಮಂಡ್ಯ ಮುಡಾ ಅಧ್ಯಕ್ಷ ನಯೀಮ್, ಮೈಷುಗರ್ ಕಂಪನಿ ಅಧ್ಯಕ್ಷ ಸಿ.ಡಿ ಗಂಗಾಧರ್, ಕಾವೇರಿ ಅಚ್ಚುಕಟ್ಟು ಪ್ರಾಧಿಕಾರದ ಅಧ್ಯಕ್ಷ ಮರಿಸ್ವಾಮಿ, ಕೆ.ಆರ್.ಎಸ್ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರುತಿ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಕೆ.ಮರೀಗೌಡ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ, ಡಾ.ಎಸ್.ಸೆಲ್ವಕುಮಾರ್, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ವಿ.ಅನ್ಬುಕುಮಾರ್, ಮೈಸೂರು ಪ್ರಾದೇಶಿಕ ಆಯಕ್ತ ಡಾ.ಜಿ.ಸಿ. ಪ್ರಕಾಶ್, ಮಂಡ್ಯ ಜಿಲ್ಲಾಧಿಕಾರಿ ಡಾ.ಕುಮಾರ, ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ್ ಬಾಲದಂಡಿ ಹಾಗೂ ಜಿಲ್ಲಾ ಪಂಚಾಯತ್ ಸಿಇಒ ಶೇಖ್ ತನ್ವೀರ್ ಆಸೀಫ್ ಭಾಗವಹಿಸಿದ್ದರು.