ಪರಿಶುದ್ಧ ಭಕ್ತಿಯಿಂದ ಭಗವಂತನ ಒಲುಮೆ ಸಾಧ್ಯ: ಎಚ್‌.ಬಿ.ದೇವಣ್ಣ

KannadaprabhaNewsNetwork |  
Published : Sep 10, 2026, 01:15 AM IST
41 | Kannada Prabha

ಸಾರಾಂಶ

ಭಗವಂತ ಸರ್ವಾಂತರ್ಯಾಮಿ, ಜಗತ್ತಿನ ಪ್ರತಿ ಅಣುರೇಣುತೃಣಗಳಲ್ಲೂ ಅವನಿದ್ದಾನೆ. ಅವನನ್ನು ಕಾಣಲು ಜ್ಞಾನದ ಬೆಳಕು ಬೇಕು. ಸೂರ್ಯ ಹಗಲಿನಲ್ಲಿ ಬೆಳಗಿದರೆ. ಚಂದ್ರ ರಾತ್ರಿಯಲ್ಲಿ ಬೆಳಗುತ್ತಾನೆ. ಮೋಡದಿಂದ ಬೆಳಕು ಮಂಕಾಗಬಹುದು. ಸದ್ಗರುವಿನಿಂದ ಪಡೆದ ಜ್ಞಾನದ ಬೆಳಕನ್ನು ಮರೆಮಾಚಲು ಯಾವುದರಿಂದಲೂ ಸಾಧ್ಯವಿಲ್ಲ.

ಕನ್ನಡಪ್ರಭ ವಾರ್ತೆ ಸುತ್ತೂರು

ಪರಿಶುದ್ಧ ಭಕ್ತಿಯಿಂದ ಭಗವಂತನ ಒಲುಮೆ ಸಾಧ್ಯ ಎಂದು ಪ್ರಾಧ್ಯಾಪಕ ಎಚ್.ಬಿ. ದೇವಣ್ಣ ತಿಳಿಸಿದರು.

ಸುತ್ತೂರು ಶ್ರೀಕ್ಷೇತ್ರದಲ್ಲಿ ಶ್ರಾವಣಮಾಸದ 28ನೇ ದಿನದ ಪ್ರವಚನದಲ್ಲಿ ಅವರು ಮಾತನಾಡಿದರು.

ಭಗವಂತ ಸರ್ವಾಂತರ್ಯಾಮಿ, ಜಗತ್ತಿನ ಪ್ರತಿ ಅಣುರೇಣುತೃಣಗಳಲ್ಲೂ ಅವನಿದ್ದಾನೆ. ಅವನನ್ನು ಕಾಣಲು ಜ್ಞಾನದ ಬೆಳಕು ಬೇಕು. ಸೂರ್ಯ ಹಗಲಿನಲ್ಲಿ ಬೆಳಗಿದರೆ. ಚಂದ್ರ ರಾತ್ರಿಯಲ್ಲಿ ಬೆಳಗುತ್ತಾನೆ. ಮೋಡದಿಂದ ಬೆಳಕು ಮಂಕಾಗಬಹುದು. ಸದ್ಗರುವಿನಿಂದ ಪಡೆದ ಜ್ಞಾನದ ಬೆಳಕನ್ನು ಮರೆಮಾಚಲು ಯಾವುದರಿಂದಲೂ ಸಾಧ್ಯವಿಲ್ಲ. ಭೌತಿಕ ಬೆಳಕಿಗಿಂತ ಜ್ಞಾನದ ಬೆಳಕು ಹೃದಯವನ್ನು ಪರಿಶುದ್ಧಗೊಳಿಸಿ ಮುಕ್ತಿಯೆಡೆಗೆ ಸಾಗಲು ನೆರವಾಗುತ್ತದೆ.

ಕಲ್ಯಾಣದಲ್ಲಿ ಬಾಚರಸರೆಂಬ ಮಹಾಶರಣರಿದ್ದರು, ಮಹಾ ಶಿವಭಕ್ತರಾಗಿದ್ದರು. ಜಗತ್ತಿನಲ್ಲಿ ಶಿವನಲ್ಲದೆ ಬೇರೆ ದೈವವಿಲ್ಲ ಎಂದು ನಂಬಿ ಶಿವನ ಧ್ಯಾನದಲ್ಲಿ ಜೀವನ ಕಳೆಯುತ್ತಿದ್ದರು. ಅವರಿಗೆ ಶರಣರನ್ನು ಕಂಡರೆ ಬಹಳ ಪ್ರೀತಿ, ಬಸವಣ್ಣನೆಂದರೆ ಪ್ರಾಣ. ಅವರಲ್ಲಿ ನಂದೀಶ್ವರನ ತಿಳುವಳಿಕೆ, ಭೃಂಗೀಶ್ವರನ ಲಿಂಗನಿಷ್ಠೆ, ಗೌತಮ ಮುನಿಯ ತರ್ಕಶಾಸ್ತ್ರದ ಪ್ರಾವೀಣ್ಯತೆ ಇತ್ತು. ಬಿಜ್ಜಳ ಮಹಾರಾಜನ ಆಸ್ಥಾನದಲ್ಲಿ ಉಗ್ರಾಣದ ಧಾನ್ಯ ಅಳೆಯುವ ಕಾಯಕ ಮಾಡುತ್ತಿದ್ದರು. ಪ್ರತಿ ವರ್ಷ ಮಹಾಶಿವರಾತ್ರಿ ವೇಳೆ ಸೌರಾಷ್ಟ್ರಕ್ಕೆ ಹೋಗಿ ಜಾಗರಣೆ ಇದ್ದು, ಶಿವಪೂಜೆ ಮಾಡಿ ಬರುವುದು ಅವರ ವಾಡಿಕೆಯಾಗಿತ್ತು. ಒಂದು ಬಾರಿ ಬಿಜ್ಜಳನು ಶಿವರಾತ್ರಿಯ ಸಮಯದಲ್ಲಿ ತಾನು ನಿರ್ಮಿಸಿರುವ ವಿಷ್ಣು ದೇವಾಲಯದ ಉದ್ಘಾಟನೆಗೆ ಸಂಬಂಧಿಸಿದ ಸಭೆ ಕರೆದು ಬಾಚರಸರಿಗೆ ಈ ಬಾರಿ ಸೌರಾಷ್ಟ್ರಕ್ಕೆ ಹೋಗದಂತೆ ತಿಳಿಸಿದರು.

ಅದರಿಂದ ಮನನೊಂದ ಬಾಚರಸರು ಸೌರಾಷ್ಟ್ರಕ್ಕೆ ಹೋಗಲು ಅನುಮತಿ ನೀಡಬೇಕಾಗಿ ಬಿಜ್ಜಳನನ್ನು ಕೇಳಿಕೊಂಡರು. ಕೋಪಗೊಂಡ ಬಿಜ್ಜಳನು ನೀವು ನಿಜವಾದ ಶಿವಭಕ್ತರೇ ಆಗಿದ್ದರೆ ಸೌರಾಷ್ಟ್ರೇಶ್ವರನ್ನು ಶಿವರಾತ್ರಿಯ ದಿನ ಕಲ್ಯಾಣಕ್ಕೆ ಕರೆಸಿ ಎನ್ನುತ್ತಾನೆ. ಆ ಸಂದರ್ಭದಲ್ಲಿ ವೃಷಭ ಧ್ವಜ ಹಾಗೂ ಓಲೆ ಹಿಡಿದ ಒಬ್ಬ ವ್ಯಕ್ತಿಯು ಕಾಯಕ ಮಾಡುತ್ತಿದ್ದ ಬಾಚರಸರ ಬಳಿ ಬಂದು ಓಲೆಯನ್ನು ನೀಡುತ್ತಾನೆ. ಅದರಲ್ಲಿ ಸೌರಾಷ್ಟ್ರೇಶ್ವರರು ಶಿವರಾತ್ರಿಯ ದಿನ ಕಲ್ಯಾಣಕ್ಕೆ ಬರುತ್ತಾರೆ, ಸಿದ್ಧತೆ ಮಾಡಿಕೊಳ್ಳಬೇಕೆಂದು ಬರೆದಿರುತ್ತದೆ. ಆ ವಿಷಯವನ್ನು ಬಾಚರಸರಯ್ಯನವರು ಬಸವಣ್ಣರವರಿಗೆ ತಿಳಿಸಿದಾಗ ಅವರು ಸಂತೋಷಗೊಂಡು ಕಲ್ಯಾಣದ ಬೀದಿಗಳನ್ನು ಸ್ವಚ್ಛಗೊಳಿಸಿ ತಳಿರು ತೋರಣಗಳಿಂದ ಶೃಂಗರಿಸುವಂತೆ ಭಕ್ತರಿಗೆ ತಿಳಿಸುತ್ತಾರೆ.

ಆಗ ಬಾಚರಸರಯ್ಯ ಅವರು ಕಾಯಕ ಮಾಡುತ್ತಿದ್ದ ಕಣಜದಲ್ಲಿ ಲಿಂಗ ಒಡೆದು ಮೂಡುತ್ತದೆ. ಅದರ ಪ್ರಖರತೆಯನ್ನು ನೋಡಿ ಬಿಜ್ಜಳ ಬೆರಗಾಗುತ್ತಾನೆ. ಭಕ್ತನ ಶಕ್ತಿಯನ್ನು ಕಂಡು ಬಾಚರಸರಯ್ಯ ಅವರಿಗೆ ನಮಿಸುವುದಾಗಿ ಅವರು ಹೇಳಿದರು.

ಸಂಪತ್ತು, ಡಿ.ವಿ. ಹೊನ್ನಪ್ಪ, ಗೌರಮ್ಮ ಮತ್ತು ಪಿ.ರಾಚಪ್ಪ, ಪಿ.ರವಿಕುಮಾರ್, ಎಚ್.ಎನ್.ಶೈಲಾ, ಪ್ರೊ.ಬಿ. ಸಿದ್ದರಾಮಪ್ಪ, ಜಿ.ಎಂ. ಗಾಯಿತ್ರಿ ಮತ್ತು ಜಿ.ಎಸ್. ಮಲ್ಲಣ್ಣ ಅವರು ಸೇವಾರ್ಥ ನೆರವೇರಿಸಿದರು.

ಸಾಮೂಹಿಕ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಭಕ್ತಾಧಿಗಳು ಮತ್ತು ಆಧ್ಯಾತ್ಮಿಕ ಜಿಜ್ಞಾಸುಗಳು ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆತ್ರೇಯ ಕಾಲೇಜು ಲಾಕ್‌ಡೌನ್‌: 2ನೇ ದಿನಕ್ಕೆ ಕಾಲಿಟ್ಟ ಧರಣಿ
ಈಶ್ವರ ಖಂಡ್ರೆ ಭೇಟಿ ಬೆನ್ನಲ್ಲೇ ಹಿರೇಹಳ್ಳಿ ಕೆರೆ ಒತ್ತುವರಿ ತೆರವು