ಮೈಸೂರು ಅರಮನೆ ಅಂಗಳದಲ್ಲಿ ಹಾಡಿ ಮಕ್ಕಳ ಕಲರವ...

KannadaprabhaNewsNetwork |  
Published : Sep 10, 2026, 01:15 AM IST
37 | Kannada Prabha

ಸಾರಾಂಶ

ಈಗಾಗಲೇ ಹಾಡಿಯ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳಿಗೆ ಮುಂದಿನ ಪಠ್ಯಕ್ರಮಗಳ ಬೋಧನೆ ನಡೆಯುತ್ತಿದೆ. ಉಳಿದಂತೆ ಚಿಕ್ಕಮಕ್ಕಳಿಗೆ ಅಗತ್ಯವಿರುವ ಆರಂಭಿಕ ಅಕ್ಷರಭ್ಯಾಸ, ಕೌಶಲ್ಯಗಳ ಬೋಧನೆ, ಹಾಡು ಹೇಳುವುದು, ನೃತ್ಯ ಹಾಗೂ ಚಿತ್ರ ಬಿಡಿಸುವುದನ್ನು ಕಲಿಸಲಾಗುತ್ತಿದೆ.

ಮಹೇಂದ್ರ ದೇವನೂರು

ಕನ್ನಡಪ್ರಭ ವಾರ್ತೆ ಮೈಸೂರು

ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ಅರಮನೆಗೆ ಆಗಮಿಸಿರುವ ಗಜಪಡೆಯ ಮಾವುತರು ಮತ್ತು ಕವಾಡಿಗಳ ಮಕ್ಕಳಿಗಾಗಿ ತಾತ್ಕಾಲಿಕ ಶಾಲೆ ಆರಂಭವಾಗಿದೆ.

ಹತ್ತು ದಿನಗಳಿಂದ ಆಟವಾಡಿಕೊಂಡು ಕಾಲ ಕಳೆಯುತ್ತಿದ್ದ ಮಾವುತರು ಮತ್ತು ಕವಾಡಿಗಳ ಮಕ್ಕಳು ಮಂಗಳವಾರದಿಂದ ಶಾಲೆಗೆ ತೆರಳುತ್ತಿದ್ದಾರೆ. ಮೊದಲ ಹಂತದಲ್ಲಿ ಆಗಮಿಸಿರುವ ಆನೆಗಳ ಪಾಲಕರ ಮಕ್ಕಳಿಗಾಗಿ ಈ ಶಾಲೆಯನ್ನು ಆರಂಭಿಸಲಾಗಿದೆ.

ಪ್ರತಿದಿನ ಮಕ್ಕಳಿಗೆ ಆರಂಭಿಕ ಅಕ್ಷರಾಭ್ಯಾಸ, ಚಿತ್ರಬಿಡಿಸುವುದು, ಇಂಗ್ಲಿಷ್‌ ಕಲಿಗೆಗೆ ಆದ್ಯತೆ ನೀಡಲಾಗಿದೆ. ಬುಧವಾರ ಮಕ್ಕಳು ಹೂವಿನ ಚಿತ್ರಕ್ಕೆ ಸಂಭ್ರಮದಿಂದ ಬಣ್ಣ ಹಚ್ಚಿದರು.

ಸರ್ಕಾರದಿಂದಲೇ ಆ ಎಲ್ಲಾ ಮಕ್ಕಳಿಗೆ ಅಗತ್ಯವಿರುವ ಪುಸ್ತಕ ಮತ್ತು ಇತರ ಪರಿಕರಗಳನ್ನು ಪೂರೈಸಿದ್ದು, ಅವುಗಳ ಸದ್ಭಳಕೆಯಲ್ಲಿ ತೊಡಗಿರುವ ಮಕ್ಕಳು ಸಂಭ್ರದಿಂದ ಅಕ್ಷರಾಭ್ಯಾಸ ಮಾಡಿದರು.

ಈಗಾಗಲೇ ಹಾಡಿಯ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳಿಗೆ ಮುಂದಿನ ಪಠ್ಯಕ್ರಮಗಳ ಬೋಧನೆ ನಡೆಯುತ್ತಿದೆ. ಉಳಿದಂತೆ ಚಿಕ್ಕಮಕ್ಕಳಿಗೆ ಅಗತ್ಯವಿರುವ ಆರಂಭಿಕ ಅಕ್ಷರಭ್ಯಾಸ, ಕೌಶಲ್ಯಗಳ ಬೋಧನೆ, ಹಾಡು ಹೇಳುವುದು, ನೃತ್ಯ ಹಾಗೂ ಚಿತ್ರ ಬಿಡಿಸುವುದನ್ನು ಕಲಿಸಲಾಗುತ್ತಿದೆ.

ಗಜಪಡೆಯ ಮಾವುತರು ಮತ್ತು ಕಾವಾಡಿಗಳ ಮಕ್ಕಳಿಗೆ ಕಲಿಕೆಯ ಅಂತರವನ್ನು ನಿವಾರಿಸಲು ಮತ್ತು ಕುಟುಂಬದೊಂದಿಗೆ ಬಂದ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಅರಮನೆ ಆವರಣದಲ್ಲಿ ತಾತ್ಕಾಲಿಕ ಶಾಲೆಯನ್ನು ಅಧಿಕೃತವಾಗಿ ಡಿಡಿಪಿಐ ಡಿ. ಉದಯ ಕುಮಾರ್ ಚಾಲನೆ ನೀಡಿದರು.

ಮಕ್ಕಳಿಗೆ ಬರವಣಿಗೆ ಸಾಮಾಗ್ರಿಗಳು ಮತ್ತು ಸಿಹಿ ಹಂಚಿ ಶಾಲೆಗೆ ನಿರಂತರವಾಗಿ ಬರುವಂತೆ ಕರೆ ನೀಡಲಾಗಿದೆ. ದಸರ ಮುಗಿಸಿ ಗಜಪಯಣ ಹಿಂತಿರುಗುವರೆಗೂ ಪ್ರತಿ ನಿತ್ಯ ಶಾಲೆ ಇರುತ್ತದೆ ಮತ್ತು ಅಕ್ಷಯ ಪಾತ್ರೆ ಫೌಂಡೇಷನ್ ವತಿಯಿಂದ ಮಧ್ಯಾಹ್ನದ ಬಿಸಿಯೂಟದ ವ್ಯವಸ್ಥೆ ಮಾಡಲಾಗಿದೆ.

ಮೊದಲ ತಂಡದಲ್ಲಿ ಆಗಮಿಸಿರುವ 18 ಮಕ್ಕಳು ಈಗ ಶಾಲೆಗೆ ಬರುತ್ತಿದ್ದು, ಎರಡನೇ ತಂಡದ ಆನೆಯ ಮಾವುತರು ಮತ್ತು ಕವಾಡಿಗಳ ಮಕ್ಕಳೂ ಮುಂದಿನ ದಿನಗಳಲ್ಲಿ ಸೇರ್ಪಡೆಗೊಳ್ಳುವರು.

ಶಾಲೆಗೆ ಚಾಲನೆ ಸಂದರ್ಭದಲ್ಲಿ ಡಿವೈಪಿಸಿ ಶೋಭಾ, ದಕ್ಷಿಣ ವಲಯ ಬಿಇಒ ಕೃಷ್ಣ, ಬಿಆರ್‌.ಸಿ ಎಂ.ಬಿ. ಶ್ರೀಕಂಠಸ್ವಾಮಿ, ಡಿಸಿಎಫ್‌ ಪ್ರಭುಗೌಡ, ಆರ್‌.ಎಫ್‌ ರೇಷ್ಮ ಮತ್ತು ವಲಯದ ಅನುಪಾಲನಾಧಿಕಾರಿಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆತ್ರೇಯ ಕಾಲೇಜು ಲಾಕ್‌ಡೌನ್‌: 2ನೇ ದಿನಕ್ಕೆ ಕಾಲಿಟ್ಟ ಧರಣಿ
ಈಶ್ವರ ಖಂಡ್ರೆ ಭೇಟಿ ಬೆನ್ನಲ್ಲೇ ಹಿರೇಹಳ್ಳಿ ಕೆರೆ ಒತ್ತುವರಿ ತೆರವು