ಇನ್ನು ಮುಂದೆ ದೇವರ ಕೆಲಸ: ಅಬ್ದುಲ್‌ ರಶೀದ್‌

KannadaprabhaNewsNetwork | Published : Mar 1, 2025 1:01 AM

ಸಾರಾಂಶ

ಮುಖ್ಯಮಂತ್ರಿ ಆಗಿದ್ದ ಕೆಂಗಲ್‌ ಹನುಮಂತಯ್ಯ ಅವರು ಬೆಂಗಳೂರಿನಲ್ಲಿ ಕಟ್ಟಿಸಿದ ವಿಧಾನಸೌಧದ ಮುಖ್ಯ ದ್ವಾರದಲ್ಲಿ ‘ಸರ್ಕಾರದ ಕೆಲಸ ದೇವರ ಕೆಲಸ’ ಎಂದು ಬರೆಯಲಾಗಿದೆ. ಇವತ್ತು (ಫೆ.28) ಸರ್ಕಾರಿ ಸೇವೆಯಿಂದ ನಿವೃತ್ತರಾದ ಮೈಸೂರು ಆಕಾಶವಾಣಿಯ ಸಹಾಯಕ ಕಾರ್ಯಕ್ರಮ ನಿರ್ದೇಶಕ ಅಬ್ದುಲ್‌ ರಶೀದ್‌ ಅವರು ಸಾಮಾಜಿಕ ಜಾಲತಾಣದಲ್ಲಿ ‘ಇನ್ನು ಮುಂದೆ ದೇವರ ಕೆಲಸ’ ಎಂದು ಮಾರ್ಮಿಕವಾಗಿ ಬರೆದುಕೊಂಡಿದ್ದಾರೆ.

ಕನ್ನಡಪ್ರಭ ವಾರ್ತೆ ಮೈಸೂರು

ಮುಖ್ಯಮಂತ್ರಿ ಆಗಿದ್ದ ಕೆಂಗಲ್‌ ಹನುಮಂತಯ್ಯ ಅವರು ಬೆಂಗಳೂರಿನಲ್ಲಿ ಕಟ್ಟಿಸಿದ ವಿಧಾನಸೌಧದ ಮುಖ್ಯ ದ್ವಾರದಲ್ಲಿ ‘ಸರ್ಕಾರದ ಕೆಲಸ ದೇವರ ಕೆಲಸ’ ಎಂದು ಬರೆಯಲಾಗಿದೆ. ಇವತ್ತು (ಫೆ.28) ಸರ್ಕಾರಿ ಸೇವೆಯಿಂದ ನಿವೃತ್ತರಾದ ಮೈಸೂರು ಆಕಾಶವಾಣಿಯ ಸಹಾಯಕ ಕಾರ್ಯಕ್ರಮ ನಿರ್ದೇಶಕ ಅಬ್ದುಲ್‌ ರಶೀದ್‌ ಅವರು ಸಾಮಾಜಿಕ ಜಾಲತಾಣದಲ್ಲಿ ‘ಇನ್ನು ಮುಂದೆ ದೇವರ ಕೆಲಸ’ ಎಂದು ಮಾರ್ಮಿಕವಾಗಿ ಬರೆದುಕೊಂಡಿದ್ದರೆ ಚಾಮರಾಜನಗರ ತಾ.ಹರವೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಮಹೇಶ್‌ ಹರವೆ ಅವರು ಇನ್ನು ಮುಂದೆ ಪುಸ್ತಕದ ಕೆಲಸ ಎಂದು ಬರೆದುಕೊಂಡಿದ್ದಾರೆ.ಮೂಲತಃ ಕೊಡಗಿನ ಸುಂಟಿಕೊಪ್ಪದವರಾದ ಅಬ್ದುಲ್‌ ರಶೀದ್‌ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪದವಿ, ಮಾನಸ ಗಂಗೋತ್ರಿಯಲ್ಲಿ ಇಂಗ್ಲಿಷ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದವರು. ನಂತರ ಆಕಾಶವಾಣಿ ಸೇರಿ ಮೈಸೂರು, ಮಡಿಕೇರಿ, ಅಂಡಮಾನ್‌ ಸೇರಿದಂತೆ ವಿವಿಧೆಡೆ ಕಾರ್ಯನಿರ್ವಹಿಸಿದ್ದಾರೆ.

ರಶೀದ್‌ ಅವರು ಕಥೆ, ಕವನ ಸೇರಿದಂತೆ ಹಲವಾರು ಕೃತಿಗಳನ್ನು ಪ್ರಕಟಿಸಿದ್ದು, ಕೇಂದ್ರ ಸಾಹಿತ್ಯ ಅಕಾಡೆಮಿಯ ಸುವರ್ಣ ಮಹೋತ್ಸವ ವಿಶೇಷ ಪ್ರಶಸ್ತಿ, ರಾಜ್ಯ ಸಾಹಿತ್ಯ ಅಕಾಡೆಮಿಯ ಸಾಹಿತ್ಯಶ್ರೀ ಪುರಸ್ಕೃತರು, ಪತ್ರಿಕೆಗಳಲ್ಲಿ ಅಂಕಣಗಳನ್ನು ಕೂಡ ಬರೆದಿದ್ದಾರೆ. ಕೆಂಡಸಂಪಿಗೆ ಬ್ಲಾಗ್‌ನ ಸಂಪಾದಕರು. ಸಾಹಿತ್ಯದ ಜೊತೆ ಜೊತೆಗೆ ಕೃಷಿಯ ಬಗ್ಗೆ ಕೂಡ ಆಸಕ್ತರು. ಆಕಾಶವಾಣಿಯಲ್ಲಿ ಅವರ ‘ಹಾದಿಯಲ್ಲಿ ಕಂಡಮುಖ’ ಬಲು ಜನಪ್ರಿಯ ಕಾರ್ಯಕ್ರಮ. ರಶೀದ್‌ ಪ್ರವಾಸ ಪ್ರಿಯರು. ಬಿಡುವು ಸಿಕ್ಕಾಗೆಲ್ಲಾ ಮೋಟಾರ್‌ ಬೈಕ್‌, ಜೀಪು- ಹೀಗೆ ಸಿಕ್ಕ ವಾಹನ ತೆಗೆದುಕೊಂಡು ಪ್ರವಾಸಕ್ಕೆ ಹೊರಟುಬಿಡುತ್ತಾರೆ. ಸಾಹಿತ್ಯ, ಪ್ರವಾಸ, ಕೃಷಿ, ತಿರುಗಾಟ ಅವರಿಗೆ ದೇವರ ಕೆಲಸ ಎನಿಸಿರಬಹುದು!.

ಇತ್ತೀಚೆಗೆ ಸಾಹಿತ್ಯಶ್ರೀ ಪ್ರಶಸ್ತಿಗೆ ಭಾಜನಾಗಿರುವ ಮಹೇಶ್‌ ಹರವೆ ಅವರು ಪುಸ್ತಕಪ್ರಿಯರು. ಅವರು ಮೈಸೂರಿನ ಆರ್‌.ಟಿ. ನಗರದ ಪತ್ರಕರ್ತರ ಬಡಾವಣೆಯಲ್ಲಿ ನಿರ್ಮಿಸಿರುವ ಮನೆ ‘ಕೆಂದಾವರೆ’ ತುಂಬೆಲ್ಲಾ ಪುಸ್ತಕಗಳ ರಾಶಿ. ಕಾಲೇಜಿನಿಂದ ಬಂದಕೂಡಲೇ ಅವರು ಕಾಣಿಸಿಕೊಳ್ಳುತ್ತಿದ್ದುದು ನಿವಾಸದಲ್ಲಿರುವ ಪುಸ್ತಕಗಳ ಕೊಠಡಿಯಲ್ಲಿಯೇ. ಮೈಸೂರಿಗೆ ಯಾರೇ ಬಂದರೂ ತಮ್ಮ ಮನೆಗೆ ಆಹ್ವಾನಿಸಿ, ಪುಸ್ತಕಗಳ ಬಗ್ಗೆ ಮಾತನಾಡುತ್ತಾರೆ. ಮೊನ್ನೆಯಷ್ಟೇ ಪ್ರೊ.ರೆಹಮತ್‌ ತರೀಕೆರೆ ಅವರು ಭೇಟಿ ನೀಡಿದ್ದರು. ಹಳಗನ್ನಡದ ಬಗ್ಗೆ ಸೊಗಸಾಗಿ ಮಾತನಾಡಬಲ್ಲರು. ಪಿಯು ಕಾಲೇಜಿನ ಉಪನ್ಯಾಸಕರಾಗಿ ವಿವಿಧೆಡೆ ಸೇವೆ ಸಲ್ಲಿಸಿ, ಹುಟ್ಟೂರಿನಲ್ಲಿಯೇ ಪ್ರಾಂಶುಪಾಲರಾಗಿ ಸೇವಾ ನಿವೃತ್ತಿ ಹೊಂದಿರುವುದು ವಿಶೇಷ.

Share this article