ಕನ್ನಡಪ್ರಭ ವಾರ್ತೆ ಬೆಳಗಾವಿ
ಬೆಳಗಾವಿ ನಗರದ ಪ್ರಭಾಕರ ಶೆಟ್ಟಿ ಅವರ ಮಾನವೀಯ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಶ್ರೀ ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ತೆರಳುವ ನೀಲಿಮಲೆ ಬೆಟ್ಟದಲ್ಲಿ ಈ ಘಟನೆ ನಡೆದಿದ್ದು, ಸ್ವಯಂ ಮಾಲಾಧಾರಿಯಾಗಿರುವ ಪ್ರಭಾಕರ ಶೆಟ್ಟಿ ಅವರು ತಮ್ಮ ಇರುಮುಡಿಯನ್ನು ಬೇರೆಯವರ ಕೈಯಲ್ಲಿ ಕೊಟ್ಟು ತುರ್ತು ಚಿಕಿತ್ಸೆ ನೀಡಿರುವುದು ಹಾಗೂ ಅವರ ಸಮಯ ಪ್ರಜ್ಞೆ ಮೆರೆದಿರುವ ವಿಡಿಯೋ ಭಾರಿ ವೈರಲ್ ಆಗಿದೆ. ಪ್ರಭಾಕರ ಶೆಟ್ಟಿಯವರಿಗೆ ಈ ಕಾರ್ಯಕ್ಕೆ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ. ಏನಿದು ಘಟನೆ?:
ಅಯ್ಯಪ್ಪಸ್ವಾಮಿ ದರ್ಶನಕ್ಕಾಗಿ ಕೇರಳದ ನೀಲಿಮಲೆ ಬೆಟ್ಟ ಏರುವ ಸಂದರ್ಭದಲ್ಲಿ ಚೆನ್ನೈ ಮೂಲದ ಅಯ್ಯಪ್ಪ ಮಾಲಾಧಾರಿಯೊಬ್ಬರು ಎದೆಬಡಿತ ಹೆಚ್ಚಾಗಿ ತೀವ್ರ ಅಸ್ವಸ್ಥಗೊಂಡು ಪ್ರಜ್ಞಾಹೀನರಾಗಿದ್ದರು. ಈ ಸಂದರ್ಭದಲ್ಲಿ ಅವರ ನೆರವಿಗೆ ಯಾರೂ ಬಾರದೇ ಮುಂದೆ ಹೋಗುತ್ತಿದ್ದರು. ಅಲ್ಲಿಯೇ ಇದ್ದ ಮಾಲಾಧಾರಿಯಾಗಿದ್ದ ಪ್ರಭಾಕರ ಶೆಟ್ಟಿ ಅವರು ತಮ್ಮ ಇರುಮುಡಿಯನ್ನು ಬೇರೆಯವರ ಕೈಯಲ್ಲಿ ಕೊಟ್ಟು ಅಸ್ವಸ್ಥಗೊಂಡ ಮಾಲಾಧಾರಿ ಸ್ವಾಮಿಯ ಎದೆ ಮೇಲೆ ತಮ್ಮ ಕೈಯಿಂದ ಪಂಪ್ ಮಾಡಿ ಹೃದಯ ಕಂಪನವಾದಾಗ ನೀಡಬೇಕಾದ ಪ್ರಥಮ ಚಿಕಿತ್ಸೆ ನೀಡಿದ್ದಾರೆ. ಆಗ ಅಸ್ವಸ್ಥ ಮಾಲಾಧಾರಿಗೆ ಜೀವದಾನ ಸಿಕ್ಕಿದೆ. ಕೆಲ ಸಮಯದ ನಂತರ ಅಸ್ವಸ್ಥಗೊಂಡ ಮಾಲಾಧಾರಿ ಪ್ರಜ್ಞೆ ಬಂದಿದೆ. ತದನಂತರ ಅಲ್ಲಿಯೇ ಇದ್ದ ಪೊಲೀಸರು ಹಾಗೂ ಸ್ಥಳೀಯರ ನೆರವಿನಿಂದ ಆ್ಯಂಬುಲೆನ್ಸ್‌ನಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸಲಾಗಿದೆ.-----------
ಕೋಟ್.....ಚಳಿ ಹಾಗೂ ತಂಪಿಗೆ ಹೃದಯಾಘಾತ ಹೆಚ್ಚಾಗುತ್ತದೆಂದು ನನಗೆ ಅಲ್ಪಸ್ವಲ್ಪ ಗೊತ್ತಿತ್ತು. ಹೀಗಾಗಿ ಅವರು ಅಸ್ವಸ್ಥಗೊಂಡಾಗ ಇದು ಹೃದಯಾಘತವೆಂದು ತಿಳಿದು ಎದೆ ಮೇಲೆ ನನ್ನ ಕೈಗಳನ್ನು ಇಟ್ಟು ಪಂಪ್ ಮಾಡಿದೆ. ಸ್ವಲ್ಪ ಹೊತ್ತಿಗೆ ಅವರಿಗೆ ಪ್ರಜ್ಞೆ ಬಂತು. ನಿಜವಾಗಿಯೂ ಆ ಅಯ್ಯಪ್ಪನೇ ಇವರನ್ನು ಉಳಿಸಿದನು, ಅದು ನನ್ನ ಕೈಯಿಂದ ಇಂತಹ ಒಳ್ಳೆಯ ಕೆಲಸ ಮಾಡಿಸಿದ್ದಾನೆಂದು ಭಾವುಕನಾದೆ. ಅನಾರೋಗ್ಯಗೊಂಡ ಅಯ್ಯಪ್ಪ ಮಾಲಧಾರಿ ಶೀಘ್ರದಲ್ಲಿ ಚೇತರಿಸಿಕೊಂಡು ಗುಣಮುಖರಾಗಲೆಂದು ಅಯ್ಯಪ್ಪ ಸ್ವಾಮಿಯಲ್ಲಿ ಸನ್ನಿಧಾನದಲ್ಲಿ ಪ್ರಾರ್ಥಿಸಿದ್ದೇನೆ.
-ಪ್ರಭಾಕರ ಶೆಟ್ಟಿ, ಬೆಳಗಾವಿ ಹೋಟೆಲ್ ಉದ್ಯಮಿ.