ಒಂಟೆ ಮಾಲೀಕರ ಕಾಯಕ ಕಸಿದ ಗೋಕರ್ಣ ಗ್ರಾಮ ಪಂಚಾಯಿತಿ

KannadaprabhaNewsNetwork |  
Published : Oct 27, 2024, 02:18 AM IST
ಕಡಲತೀರದಲ್ಲಿ ಬಿಡು ಬಿಟ್ಟರುವ ಒಂಟೆ  | Kannada Prabha

ಸಾರಾಂಶ

ತಿಂಗಳಿಗೆ ₹೧೫ ಸಾವಿರ ಪಂಚಾಯಿತಿಗೆ ನೀಡುವಂತೆಯೂ ಗ್ರಾಪಂ ಅಧಿಕಾರಿಗಳು ಕೇಳಿದ್ದಾರೆ ಎನ್ನಲಾಗಿದ್ದು, ಬಿಸಿಲಿನಲ್ಲಿ ಬೆವರು ಸುರಿಸಿ ದುಡಿಯುವ ಇವರಿಗೆ ಯಾವುದೇ ಸೌಲಭ್ಯ ನೀಡದೆ ಹಣ ಕೀಳುವುದು ಎಷ್ಟು ಸರಿ ಎಂದು ಜನಸಾಮಾನ್ಯರು ಕೇಳುತ್ತಿದ್ದಾರೆ.

ಗೋಕರ್ಣ:

ಇಲ್ಲಿನ ಮುಖ್ಯ ಕಡಲತೀರದಲ್ಲಿ ಪ್ರವಾಸಿಗರನ್ನು ಒಂಟಿಯ ಮೇಲೆ ಹತ್ತಿಸಿ ತಿರುಗಾಡಿಸುತ್ತಿದ್ದ ಉತ್ತರ ಭಾರತದವರಿಗೆ ಈ ವರ್ಷ ಗ್ರಾಮ ಪಂಚಾಯಿತಿ ಅನುಮತಿ ನೀಡದ ಕಾರಣ ದಿಕ್ಕು ತೋಚದಂತಾಗಿದೆ.

ಹಲವು ವರ್ಷಗಳಿಂದ ಕಡಲತೀರದಲ್ಲೇ ಒಂಟೆಯ ಜೊತೆ ಜೀವನ ಕಟ್ಟಿಕೊಂಡಿದ್ದ ಇವರು, ಕಡಲ ತಟದಲ್ಲಿ ಮಕ್ಕಳನ್ನು ಒಂಟೆ ಮೇಲೆ ತಿರುಗಾಡಿಸುತ್ತಿದ್ದರು. ಅಲ್ಲದೇ ದೊಡ್ಡವರೂ ಒಂಟೆಯ ಮೇಲೆ ಅತ್ತಿತ್ತ ಓಡಾಡಿ ಸಂಭ್ರಮಿಸುತ್ತಿದ್ದರು. ದೂರದೂರಿನಿಂದ ಹೊಟ್ಟೆಪಾಡಿಗೆ ಬಂದ ಇವರ ಕಾಯಕ ಕಸಿದ ಬಗ್ಗೆ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅನಧಿಕೃತವಾಗಿ ಹಲವಾರು ಚಟುವಟಿಕೆಗಳು ಇಲ್ಲಿ ನಡೆಯುತ್ತಿದ್ದರೂ ಅದಕ್ಕೆ ಕಡಿವಾಣ ಹಾಕದೇ ಕೇವಲ ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರದಂತೆ ಇವರಿಗೆ ಅನುಮತಿ ನಿರಾಕರಿಸಿದ್ದು ಏಕೆ ಎಂದು ಜನರು ಪ್ರಶ್ನಿಸುತ್ತಿದ್ದಾರೆ.

ಇಲ್ಲಿನ ನ್ಯಾಯವಾದಿ ವೀರೇಂದ್ರ ನಾಯಕ ಮಾತನಾಡಿ, ಭಾರತದಲ್ಲಿನ ಯಾವುದೇ ಸ್ಥಳದಲ್ಲಿ ಉದ್ಯೋಗ, ವ್ಯಾಪಾರ ನಡೆಸುವ ಹಕ್ಕು ಈ ದೇಶದ ಪ್ರಜೆಗೆ ಇದೆ. ಈ ಸ್ವಾತಂತ್ರ್ಯವನ್ನು ಕಸಿಯುತ್ತಿರುವುದು ತಪ್ಪಾಗಿದ್ದು, ಈ ಬಗ್ಗೆ ನ್ಯಾಯಾಲಯದಲ್ಲಿ ದಾವೆ ಹೂಡಿ ನ್ಯಾಯ ಒದಗಿಸಿಕೊಡಲು ಸಿದ್ಧನಿದ್ದೇನೆ ಎಂದಿದ್ದಾರೆ.

ಯಾರ್‍ಯಾರಿಗೋ ತದಡಿಯಲ್ಲಿ ಬೋಟಿಂಗ್ ಮಾಡಲು, ಬೆಟ್ಟ-ಗುಡ್ಡಗಳಲ್ಲಿ ದೇಶ-ವಿದೇಶದವರು ಕಟ್ಟಡ ಕಟ್ಟಿ ವ್ಯವಹಾರ ಮಾಡಲು, ಅದೆಷ್ಟೋ ಆಹಾರ ಮಳಿಗೆಗಳು ಯಾವುದೇ ಅನುಮತಿ ಇಲ್ಲದೆ ರಸ್ತೆ ಬದಿಯಲ್ಲೇ ವ್ಯಾಪಾರ ಮಾಡಲು ಅವಕಾಶವಿದೆ. ವಿದೇಶಿಗರ ಅಂಗಡಿ ವ್ಯಾಪಾರ ನಡೆಯುತ್ತಿದೆ. ಆದರೆ, ಈ ಒಂಟೆಯವರು ಕೈಬಿಸಿ ಮಾಡಿಲ್ಲವೇ ಎನ್ನುವ ಗುಮಾನಿ ಮಾತ್ರ ಜನರಲ್ಲಿ ಕಾಡುತ್ತಿದೆ. ಇನ್ನು ಕಡಲತೀರದಲ್ಲಿ ಬೋಟಿಂಗ್‌ ನಡೆಸಲು ಅನುಮತಿ ನೀಡುವ ಇಲಾಖೆ ಇವರಿಗೆ ಏಕೆ ನಿರ್ಬಂಧ ಹೇರಿದೆ ಎಂಬುವುದೇ ನಿಗೂಢವಾಗಿದೆ.

ತಿಂಗಳಿಗೆ ₹೧೫ ಸಾವಿರ ಪಂಚಾಯಿತಿಗೆ ನೀಡುವಂತೆಯೂ ಗ್ರಾಪಂ ಅಧಿಕಾರಿಗಳು ಕೇಳಿದ್ದಾರೆ ಎನ್ನಲಾಗಿದ್ದು, ಬಿಸಿಲಿನಲ್ಲಿ ಬೆವರು ಸುರಿಸಿ ದುಡಿಯುವ ಇವರಿಗೆ ಯಾವುದೇ ಸೌಲಭ್ಯ ನೀಡದೆ ಹಣ ಕೀಳುವುದು ಎಷ್ಟು ಸರಿ ಎಂದು ಜನಸಾಮಾನ್ಯರು ಕೇಳುತ್ತಿದ್ದಾರೆ. ಒಂಟೆ ಮಾಲಕರು ನಮ್ಮ ಕಚೇರಿಗೆ ಬಂದು ಅನುಮತಿಗೆ ಕೋರಿದ್ದು, ಪ್ರಾಣಿಗೆ ತೊಂದರೆಯಾಗದ ರೀತಿ ಸೇರಿದಂತೆ ಹಲವು ನಿಬಂಧನೆಗೆ ಒಳಪಟ್ಟು ಅನುಮತಿ ನೀಡುತ್ತೇವೆ. ಜೀವನೋಪಾಯಕ್ಕಾಗಿ ನಿಯಮಾನುಸಾರ ಇವರ ವೃತ್ತಿ ನಡೆಸಬಹುದು ಎಂದು ಪ್ರವಾಸೋದ್ಯಮ ಇಲಾಖೆಯ ಜಿಲ್ಲಾ ನಿರ್ದೇಶಕ ಜಯಂತ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಾಗಲಕೋಟೆ, ದಾವಣಗೆರೆ ಕ್ಷೇತ್ರಕ್ಕೆ ಏ.9ಕ್ಕೆ ಉಪಸಮರ
ರೈಲ್ವೇಲಿ ಕನ್ನಡಕ್ಕೆ ಅನ್ಯಾಯ: ಪರೀಕ್ಷೆ ಬಹಿಷ್ಕಾರ ನಿರ್ಧಾರ?