ಗೋಕರ್ಣ: ಸಹಸ್ರಾರು ಭಕ್ತರ ಜಯಘೋಷದೊಂದಿಗೆ ವಿಜೃಂಭಣೆಯಿಂದ ಇಲ್ಲಿನ ಮಹಾಬಲೇಶ್ವರ ಮಂದಿರದ ಶಿವರಾತ್ರಿ ಮಹೋತ್ಸವದ ಮಹಾರಥೋತ್ಸವ ಬುಧವಾರ ಸಂಜೆ ನಡೆಯಿತು.
ಜಯಘೋಷ, ಕೇಸರಿ ಧ್ವಜ: ಸ್ಥಳೀಯರು ಹಾಗೂ ಪ್ರವಾಸಿಗರು ಸೇರಿ ರಥ ಎಳೆಯುವ ವೇಳೆ ಹರ, ಹರ ಶಂಕರ, ಮತ್ತಿತರ ಶಿವ ನಾಮ ಸ್ಮರಣೆ ಜಯಘೋಷ ಮುಗಿಲು ಮುಟ್ಟಿತ್ತು. ಜನರ ಮಧ್ಯದಲ್ಲಿ ಬೃಹತ್ ಕೇಸರಿ ಧ್ವಜ ಹಿಡಿದು ಸಾಗುತ್ತಿರುವುದು ವಿಶೇಷವಾಗಿತ್ತು. ಒಂದು ತಾಸಿನಷ್ಟು ಅವಧಿಯಲ್ಲಿ ರಾಜ ಮಾರ್ಗ ರಥಬೀದಿ ಶಿವನ ನಾಮಸ್ಮರಣೆ, ಜಾತ್ರೆಯ ಸಂಭ್ರಮ ಮೆರುಗು ತಂದಿತ್ತು.
ಬಾಳೆಹಣ್ಣು , ಕಡ್ಲೆ ಹರಕೆ: ಎತ್ತರದ ಬೃಹತ್ ರಥ ವಿವಿಧ ಬಣ್ಣದ ಪತಾಕೆಗಳಿಂದ ಶೃಂಗರಿಸಿ ಎಲ್ಲರ ಗಮನ ಸೆಳೆಯುತ್ತಿದ್ದರೆ, ಈ ರಥಕ್ಕೆ ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಗೆ ಪ್ರಾರ್ಥಿಸಿ ಬಾಳೆಹಣ್ಣು, ಕಡಲೆ ಎಸೆದರು. ಹಲವರು ತನ್ನ ಗೆಳೆಯನಿಗೆ ಮದುವೆಗೆ ಹೆಣ್ಣು ಹುಡುಕಿ ಕೊಡು, ಕ್ರಿಕೆಟ್‌ನಲ್ಲಿ ತಮ್ಮ, ನೆಚ್ಚಿನ ತಂಡ ಗೆಲ್ಲಲಿ ಮತ್ತಿತರ ಬೇಡಿಕೆಯನ್ನು ಬಾಳೆಹಣ್ಣಿನ ಮೇಲೆ ಬರೆದು ಭಗವಂತನಿಗೆ ಲಿಖಿತ ಮನವಿ ನೀಡಿದ್ದು ಕಂಡುಬಂತು.ಪೊಲೀಸ್ ಬಂದೋಬಸ್ತ್: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಾರ್ಗದರ್ಶನದಲ್ಲಿ ಪಿಐ ಶ್ರೀಧರ ಎಸ್.ಆರ್. ನೇತೃತ್ವದಲ್ಲಿ ಯಾವುದೇ ತೊಂದರೆಯಾಗದ ರೀತಿಯಲ್ಲಿ ಸೂಕ್ತ ಬಂದೋಬಸ್ತ್ ಕಲ್ಪಿಸಲಾಗಿತ್ತು. ಕುಮಟಾ, ಮುರುಡೇಶ್ವರ ಹಾಗೂ ಪೊಲೀಸ್ ಕಂಟ್ರೋಲ್ ರೂಮ್‌ನ ಇನ್‌ಸ್ಪೆಕ್ಟರ್ ಹಾಗೂ ವಿವಿಧ ಕಡೆಯ ಪಿಎಸ್‌ಐಗಳು, ೨೦೦ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿತ್ತು. ರಥ ಎಳೆಯುವ ಸಮಯದಲ್ಲಿ 20 ಸಾವಿರಕ್ಕೂ ಹೆಚ್ಚು ಜನರು ಸೇರಿದ್ದು, ರಥೋತ್ಸವದ ಬಳಿಕ ಮತ್ತಷ್ಟು ಜನರು ಬಂದಿದರು. ಒಟ್ಟು ೪೦ ಸಾವಿರಕ್ಕೂ ಜನರು ಆಗಮಿಸಿದ್ದರು ಎಂದು ಅಂದಾಜಿಸಲಾಗಿದೆ.
ವಿದೇಶಿಗರು ಭಾಗಿ: ಶಿವರಾತ್ರಿಯ ಮಹಾರಥೋತ್ಸವಕ್ಕೆ ಹಲವು ವಿದೇಶಿ ಪ್ರವಾಸಿಗರು ಪ್ರತಿ ವರ್ಷ ಆಗಮಿಸುತ್ತಾರೆ. ಅದರಂತೆ ಈ ವರ್ಷ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಹಲವರು ರಥ ಎಳೆದು ಸಂಭ್ರಮಿಸಿದರೆ, ಇನ್ನು ಕೆಲವರು ಎತ್ತರದ ಕಟ್ಟಡದ ಮೇಲೆ ನಿಂತು ಕುಣಿದು ಸಂಭ್ರಮಿಸಿದರು.