ಮಂಗಳೂರು: ಗೋವಾದ ಕಾಣಕೋಣದ ಸಮೀಪ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠ ಸ್ಥಾಪನೆಯಾಗಿ 550 ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಸಾರ್ಧ ಪಂಚ ಶತಮಾನೋತ್ಸವ ಕಾರ್ಯಕ್ರಮ ನ.27ರಿಂದ ಡಿ.7ರತನಕ ನಡೆಯಲಿದೆ. ನ.28ರಂದು ದಕ್ಷಿಣ ಭಾರತದಲ್ಲೇ ಅತಿ ಎತ್ತರದ (77 ಅಡಿ) ಶ್ರೀ ರಾಮನ ಕಂಚಿನ ಮೂರ್ತಿಯನ್ನು ಪ್ರಧಾನಿ ನರೇಂದ್ರ ಮೋದಿ ಅನಾವರಣಗೊಳಿಸಲಿದ್ದಾರೆ ಎಂದು ಸಂಘಟನಾ ಸಮಿತಿ ಸಂಚಾಲಕ ಪ್ರದೀಪ್ ಜಿ. ಪೈ ತಿಳಿಸಿದ್ದಾರೆ.
ಮಠದ ಪೀಠಾಧಿಪತಿ ಶ್ರೀಮದ್ ವಿದ್ಯಾಧೀಶತೀರ್ಥ ಶ್ರೀಪಾದ ವಡೇರ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ 11 ದಿನಗಳ ಈ ಮಹೋತ್ಸವ ಜರುಗಲಿದೆ. ನ.28ರಂದು ಬೆಳಗ್ಗೆ 11 ಗಂಟೆಗೆ ಶ್ರೀರಾಮನ ಮೂರ್ತಿಯ ಪ್ರಾಣಪ್ರತಿಷ್ಠಾ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ 3.30ಕ್ಕೆ ಪ್ರಧಾನಿ ಮೋದಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀರಾಮಾಯಣ ಥೀಮ್ ಪಾರ್ಕ್‌ನ 3ಡಿ ಪ್ರಾಜೆಕ್ಟ್ ಮ್ಯಾಪ್ ಅನಾವರಣಗೊಳಿಸಿ ಮಾತನಾಡಲಿದ್ದಾರೆ ಎಂದರು.ಉಡುಪಿಯ ಫಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಸ್ವಾಮೀಜಿ, ಶ್ರೀ ವಿದ್ಯಾರಾಜೇಶ್ವರ ತೀರ್ಥ ಸ್ವಾಮೀಜಿ, ಕಾಶಿ ಮಠದ ಶ್ರೀ ಸಂಯಮೀಂದ್ರತೀರ್ಥ ಸ್ವಾಮೀಜಿ, ಕವಳೆ ಮಠದ ಶ್ರೀ ಶಿವಾನಂದ ಸರಸ್ವತೀ ಸ್ವಾಮೀಜಿ ಹಾಗೂ ಚಿತ್ರಾಪುರ ಮಠದ ಶ್ರೀ ಸದ್ಯೋಜಾತ ಶಂಕರಾಶ್ರಮ ಸ್ವಾಮೀಜಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.ಗುಜರಾತ್‌ನಲ್ಲಿ ಏಕತಾ ಪ್ರತಿಮೆ ನಿರ್ಮಿಸಿದ ನೊಯ್ಡಾದ ರಾಮ್ ಸುತಾರ ಅವರು ಶ್ರೀರಾಮನ ಪ್ರತಿಮೆ ನಿರ್ಮಿಸಿದ್ದು, ಅಂದಾಜು 15 ಕೋಟಿ ರು. ವೆಚ್ಚವಾಗಿದೆ ಎಂದ ಅವರು, ಪ್ರಧಾನಿ ಮೋದಿ ಪಾಲ್ಗೊಳ್ಳಲಿರುವ ಕಾರ್ಯಕ್ರಮದಲ್ಲಿ ಸುಮಾರು 20ರಿಂದ 22 ಸಾವಿರ ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಉತ್ಸವ ನಡೆಯಲಿರುವ 11 ದಿನಗಳ ಕಾಲ ಮಠಕ್ಕೆ 1ರಿಂದ 1.20 ಲಕ್ಷಕ್ಕೂ ಅಧಿಕ ಭಕ್ತರು ಆಗಮಿಸುವರು ಎಂದರು. ಎರಡು ವರ್ಷಗಳಿಂದ ಪ್ರತಿಮೆ ನಿರ್ಮಾಣ ಕೆಲಸ ನಡೆದಿದೆ. ಜತೆಗೆ 1 ಲಕ್ಷ ಚದರ ಅಡಿ ಪ್ರದೇಶದಲ್ಲಿ ಗುರುಕುಲ ವಿದ್ಯಾಪೀಠ ನಿರ್ಮಾಣ ಮಾಡಲಾಗಿದೆ. ರಾಮಾಯಣ ಕಥೆ ಆಧಾರಿತ ಥೀಮ್ ಪಾರ್ಕ್, ೩ಡಿ ಪ್ರೊಜೆಕ್ಷನ್ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ ಎಂದು ಹೇಳಿದರು.ವಿದ್ಯಾಧೀಶ ಶ್ರೀಪಾದ ವಡೇರ ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮಕ್ಕೆ ಸಿದ್ಧತೆಗಳು ಭರದಿಂದ ಸಾಗಿವೆ. ಮಠದ ಜೀವೋತ್ತಮ ಸಭಾ ಮಂಟಪದಲ್ಲಿ ನ.27ರ ಸಂಜೆ 4.30ಕ್ಕೆ ಉತ್ಸವಕ್ಕೆ ಚಾಲನೆ ದೊರೆಯಲಿದೆ. ಪ್ರತಿನಿತ್ಯ ಧಾರ್ಮಿಕ ಕಾರ್ಯಕ್ರಮಗಳ ಜತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳೂ ನಡೆಯಲಿವೆ. ನ.30ರಂದು ಖ್ಯಾತ ಗಾಯಕ ಶಂಕರ್ ಮಹಾದೇವನ್, ಡಿ.6ರಂದು ಮೈಥಿಲಿ ಠಾಕೂರ್, ಡಿ.7ರಂದು ಮಹೇಶ್ ಕಾಳೆ ಅವರು ಸಂಗೀತ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ ಎಂದು ಪ್ರದೀಪ್ ಜಿ.ಪೈ ತಿಳಿಸಿದರು.
ಸಹ ಸಂಚಾಲಕ ಮುಕುಂದ ಕಾಮತ್, ಜಂಟಿ ಕಾರ್ಯದರ್ಶಿ ಅಮ್ಮೆಂಬಳ ನಾಗೇಶ್ ಕಾಮತ್, ಮಂಗಳೂರು ಸಮಿತಿ ಅಧ್ಯಕ್ಷ ಬಸ್ತಿ ಶ್ರೀಪಾದ ಶೆಣೈ ಉಪಾಧ್ಯಕ್ಷ ಎಸ್. ಪಾಂಡುರಂಗ ಆಚಾರ್ಯ ಇದ್ದರು.