ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸುವ ಉದ್ದೇಶದಿಂದ ಈ ಯೋಜನೆ ಜಾರಿಗೆ ತರಲಾಗಿದೆ ಎಂದು ಹಿರೇಮಠ ಸಂಸ್ಥಾನ ವಿದ್ಯಾಪೀಠ ಟ್ರಸ್ಟ್ ಅಧ್ಯಕ್ಷರು ಹೇಳಿದರು. ಪ್ರಸ್ತುತ ಎಸ್ಸೆಸ್ಸೆಲ್ಸಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಪರೀಕ್ಷೆಗೆ ಅರ್ಹರು. 21, 27 ಮತ್ತು 28ರಂದು ಪ್ರವೇಶ ಪರೀಕ್ಷೆ ನಡೆಯಲಿದೆ.
ಕನ್ನಡಪ್ರಭ ವಾರ್ತೆ ಭಾಲ್ಕಿ
ಗ್ರಾಮೀಣ ಭಾಗದ ಮತ್ತು ಬಡ ಪ್ರತಿಭಾನ್ವಿತ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕಾಗಿ ಹಿರೇಮಠ ಸಂಸ್ಥಾನ ವಿದ್ಯಾಪೀಠ ಟ್ರಸ್ಟ್‌ನ ವತಿಯಿಂದ ಗುರುಕುಲ ಗೋಲ್ಡನ್ ಸ್ಕಾಲರ್‌ಶಿಪ್ ಯೋಜನೆ ರೂಪಿಸಲಾಗಿದೆ ಎಂದು ಹಿರೇಮಠ ಸಂಸ್ಥಾನ ವಿದ್ಯಾಪೀಠ ಟ್ರಸ್ಟ್ ಅಧ್ಯಕ್ಷ ಡಾ. ಬಸವಲಿಂಗ ಪಟ್ಟದ್ದೇವರು ಹೇಳಿದರು.
ಪಟ್ಟಣದ ಹಿರೇಮಠ ಸಂಸ್ಥಾನದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬಡ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಮತ್ತು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸುವ ಉದ್ದೇಶದಿಂದ ಈ ಯೋಜನೆ ಜಾರಿಗೆ ತರಲಾಗಿದೆ. ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಈ ಗುರುಕುಲ ಗೋಲ್ಡನ್ ಸ್ಕಾಲರಶಿಪ್ ಪ್ರವೇಶ ಪರೀಕ್ಷೆ ಬರೆಯಬಹುದಾಗಿದೆ ಎಂದರು.
ಕರಡ್ಯಾಳ ಚನ್ನಬಸವೇಶ್ವರ ವಸತಿ ವಿಜ್ಞಾನ ಪದವಿಪೂರ್ವ ಕಾಲೇಜಿನಲ್ಲಿ ಜ. 21, 27 ಮತ್ತು 28ರಂದು ಪ್ರವೇಶ ಪರೀಕ್ಷೆ ಏರ್ಪಡಿಸಲಾಗುತ್ತಿದೆ. ಇದರಲ್ಲಿ ಉತ್ತಮ ಅಂಕ ಪಡೆಯುವ ನೂರು ವಿದ್ಯಾರ್ಥಿಗಳಿಗೆ ಮುಂದಿನ ಎರಡು ವರ್ಷ ಪಿಯುಸಿ ಶಿಕ್ಷಣ ಉಚಿತ ನೀಡಲಾಗುತ್ತದೆ ಎಂದರು.
ಕ್ರಮವಾಗಿ ಅತ್ಯುತ್ತಮವಾಗಿ ಅಂಕ ಗಳಿಸುವ 25 ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ, ವಸತಿ, ಕೋಚಿಂಗ್ ನೀಡಲಾಗುತ್ತದೆ. ನಂತರದಲ್ಲಿ ಅಂಕ ಪಡೆಯುವ ಉಳಿದ 75 ವಿದ್ಯಾರ್ಥಿಗಳಿಗೆ ವಸತಿ ರಹಿತ ಶಿಕ್ಷಣ ಮತ್ತು ಕೋಚಿಂಗ್ ನೀಡಲಾಗುತ್ತದೆ ಎಂದು ವಿವರಿಸಿದರು.
ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಮಾತನಾಡಿ, ಕಲ್ಯಾಣ ಕರ್ನಾಟಕ ಭಾಗದ ಮಕ್ಕಳ ಪ್ರಗತಿ ದೃಷ್ಟಿಯಿಂದ ಪಟ್ಟದ್ದೇವರು ಶೈಕ್ಷಣಿಕ ಕೇಂದ್ರ ತೆರೆದು ಬಡ ಮತ್ತು ಪ್ರತಿಭಾನ್ವಿತ ಮಕ್ಕಳಿಗೆ ನೆರವು ನೀಡುತ್ತಿದ್ದಾರೆ. ಗುರುಕುಲದಲ್ಲಿ ಕಲಿತ ಸಾವಿರಾರು ವಿದ್ಯಾರ್ಥಿಗಳು ರಾಜ್ಯ ಸೇರಿ ರಾಷ್ಟ್ರಮಟ್ಟದಲ್ಲಿ ಉತ್ತಮ ಸಾಧನೆ ತೋರುತ್ತಿದ್ದಾರೆ. ಬಡ ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಗುರುಕುಲ ಸ್ಕಾಲರಶಿಪ್ ಯೋಜನೆ ರೂಪಿಸಲಾಗಿದೆ. ಪ್ರವೇಶ ಪರೀಕ್ಷೆ ದಿನದಂದು ಬರುವ ಎಲ್ಲ ಮಕ್ಕಳು ಸೇರಿ ಪಾಲಕರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗುತ್ತಿದೆ. ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳು, ಪ್ರತಿಭಾನ್ವಿತರು ಸ್ಕಾಲರಶಿಪ್ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಪ್ರಾಚಾರ್ಯ ಬಸವರಾಜ ಮೊಳಕೀರೆ ಮಾತನಾಡಿ, ಗುರುಕುಲ ಗೋಲ್ಡನ್ ಸ್ಕಾಲರಶಿಪ್ ಪ್ರವೇಶ ಪರೀಕ್ಷೆಗೆ ಈಗಾಗಲೇ 6 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ನೋಂದಣಿ ಮಾಡಿಸಿದ್ದಾರೆ ಈ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ಕಳೆದ ಆರು ವರ್ಷಗಳಿಂದ ವಿದ್ಯಾರ್ಥಿ ವೇತನ ಪರೀಕ್ಷೆ ನಡೆಸಲಾಗುತ್ತಿದೆ. ಅದರಲ್ಲಿ ಈ ಯೋಜನೆಯಡಿ ಸದುಪಯೋಗ ಪಡೆದ ಶೇ. 99ರಷ್ಟು ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆದು ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಎಂದರು.
ಎಸ್ಸೆಸ್ಸೆಲ್ಸಿ ಪಠ್ಯಕ್ರಮಕ್ಕೆ ಸಂಬಂಧಿಸಿದಂತೆ ನೂರು ಪ್ರಶ್ನೆಗಳಿದ್ದು ಬರೆಯಲು 100ನಿಮಿಷ ಕಾಲಾವಕಾಶ ಇರುತ್ತದೆ. ಜ. 21, 27 ಮತ್ತು 28ರಂದು ಪ್ರವೇಶ ಪರೀಕ್ಷೆ ನಡೆಯುವ ದಿನದಂದು ಬೆಳಗ್ಗೆ 9ಗಂಟೆಯೊಳಗೆ ನೋಂದಣಿ ಮಾಡಿಕೊಳ್ಳಬೇಕು. 10ಕ್ಕೆ ಪ್ರವೇಶ ಪರೀಕ್ಷೆ ನಡೆಯಲಿದೆ. ಈ ಪರೀಕ್ಷೆ ಅತ್ಯಂತ ಪಾರದರ್ಶಕವಾಗಿ ನಡೆಯಲಿದೆ ಎಂದು ತಿಳಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.