ಕಾಂಗ್ರೆಸ್‌ ನಾಯಕರು ಜನರ ಮುಂದೆ ಕ್ಷಮೆ ಕೇಳಬೇಕು

KannadaprabhaNewsNetwork |  
Published : Jun 30, 2025, 12:34 AM IST
5 | Kannada Prabha

ಸಾರಾಂಶ

ತುರ್ತು ಪರಿಸ್ಥಿತಿಯನ್ನು ಬೆಂಬಲಿಸುತ್ತಾರೆಯೇ ಎಂದಾದರೂ ಸ್ಪಷ್ಟನೆ ನೀಡಲಿ. ಏನೂ ಹೇಳದೆ ಕಳ್ಳಾಟ ಆಡುವುದು ಸರಿಯಲ್ಲ

ಕನ್ನಡಪ್ರಭ ವಾರ್ತೆ ಮೈಸೂರು

ತುರ್ತು ಪರಿಸ್ಥಿತಿ ಹೇರಿದ್ದ ಕಾಂಗ್ರೆಸ್‌ ನಾಯಕರಿಗೆ ಸಂವಿಧಾನದ ಬಗ್ಗೆ ಗೌರವ ಇದ್ದರೆ ಜನರ ಮುಂದೆ ಕ್ಷಮೆ ಕೇಳಬೇಕು ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ್ ಆಗ್ರಹಿಸಿದರು.

ವಿಜಯನಗರದಲ್ಲಿರುವ ಗೋಲ್ಡನ್ ಟೈಮ್ ಫಂಕ್ಷನ್ ಹಾಲ್ ನಲ್ಲಿ ಬಿಜೆಪಿ ಆಯೋಜಿಸಿದ್ದ ತುರ್ತು ಪರಿಸ್ಥಿತಿ ಹೇರಿದೆ ಕಾಂಗ್ರೆಸ್ ಕರಾಳ ಇತಿಹಾಸಕ್ಕೆ 50 ವರ್ಷ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ತುರ್ತು ಪರಿಸ್ಥಿತಿಯಲ್ಲಿ ಲಕ್ಷಾಂತರ ಜನರನ್ನು ಜೈಲಿಗಟ್ಟಿದ್ದರು. ಜೈಲಿನಲ್ಲಿ ಅನೇಕ ಹೋರಾಟಗಾರರು ಸತ್ತಿದ್ದರು. ಇವ್ಯಾವುದಕ್ಕೂ ಕಾಂಗ್ರೆಸ್‌ ಈವರೆಗೆ ಉತ್ತರ ನೀಡಿಲ್ಲ ಎಂದು ಕಿಡಿಕಾರಿದರು.

ತುರ್ತು ಪರಿಸ್ಥಿತಿಯನ್ನು ಬೆಂಬಲಿಸುತ್ತಾರೆಯೇ ಎಂದಾದರೂ ಸ್ಪಷ್ಟನೆ ನೀಡಲಿ. ಏನೂ ಹೇಳದೆ ಕಳ್ಳಾಟ ಆಡುವುದು ಸರಿಯಲ್ಲ. ಈ 50 ವರ್ಷದಲ್ಲಿ ತುರ್ತು ಪರಿಸ್ಥಿತಿ ತಪ್ಪು ಎಂದು ಯಾವುದೇ ಕಾಂಗ್ರೆಸ್‌ ನಾಯಕರು ಹೇಳಿಲ್ಲ. ಇಂದಿರಾ ಗಾಂಧಿ ಚುನಾವಣೆಯಲ್ಲಿ ಮೋಸ ಮಾಡಿದ್ದಾರೆ ಎಂದು ಕೋರ್ಟ್‌ ನಲ್ಲಿ ತೀರ್ಪು ಬಂದು ಸದಸ್ಯತ್ವ ರದ್ದಾಗಿತ್ತು. ಅದಾದ ನಂತರ ಇಂದಿರಾ ಗಾಂಧಿ ಪ್ರಧಾನಿ ಸ್ಥಾನ ಉಳಿಸಿಕೊಳ್ಳಲು ತುರ್ತು ಪರಿಸ್ಥಿತಿ ಹೇರಿದರು ಎಂದರು.

ಆದರೆ, ಕಾಂಗ್ರೆಸ್‌ ನಾಯಕರು ಇಂಡಿಯಾ ಎಂದರೆ ಇಂದಿರಾ ಎನ್ನುವಂತಹ ಪರಿಸ್ಥಿತಿಯನ್ನು ತಂದಿದ್ದರು. ನಮ್ಮಲ್ಲಿ ಸಂವಿಧಾನಕ್ಕಿಂತ ಬೇರಾವುದೂ ದೊಡ್ಡದಲ್ಲ ಎಂದು ಗೊತ್ತಾದಾಗ ಇಂದಿರಾ ಗಾಂಧಿ ಇಂತಹ ಕೆಲಸ ಮಾಡಿದರು. ಅದಕ್ಕಾಗಿ ಸಂವಿಧಾನ ತಿದ್ದುಪಡಿಯನ್ನೂ ಮಾಡಿಬಿಟ್ಟರು ಎಂದು ಅವರು ದೂರಿದರು.

ಆ ಸಮಯದಲ್ಲಿ ಅಟಲ್‌ ಬಿಹಾರಿ ವಾಜಪೇಯಿ, ಎಲ್‌.ಕೆ. ಅಡ್ವಾಣಿ ಮೊದಲಾದ ನಾಯಕರನ್ನು ಜೈಲಿಗೆ ಹಾಕಲಾಗಿತ್ತು. ತುರ್ತು ಪರಿಸ್ಥಿತಿ ಹೇರಿದ್ದ ಕಾಂಗ್ರೆಸ್ ವಾಕ್ ಸ್ವಾತಂತ್ರ್ಯವನ್ನು ಕಸಿದುಕೊಂಡಿತ್ತು. ಇಂದು ಮುಕ್ತ ವಾತಾವರಣ ಇದಿಯೇ ಹೊರತು ಭಯದ ಸನ್ನಿವೇಶ ಇಲ್ಲ. ಕಾಂಗ್ರೆಸ್ ತುಘಲಕ್ ಆಡಳಿತ ನಡೆಸಿದ್ದನ್ನು ಎಂದಿಗೂ ಜನರು ಮರೆಯಲ್ಲ ಎಂದು ಅವರು ಹೇಳಿದರು.

ಸಿಎಂ ಈಗಾ ಮಾತನಾಡಲಿ

ದೇಶಪ್ರೇಮಿ ಎಂದು ಹೇಳಿಕೊಳ್ಳುವ ಸಿಎಂ ಸಿದ್ದರಾಮಯ್ಯ ಈ ಬಗ್ಗೆ ಮಾತನಾಡಬೇಕು. ಆಗ ಪ್ರಗತಿಪರರು ಏನು ಮಾಡುತ್ತಿದ್ದರು ಎಂದು ಉತ್ತರಿಸಬೇಕು. ನಾವು ಸ್ವಾತಂತ್ರ್ಯ ಹೋರಾಟ ಮಾಡಿದ್ದೇವೆಂದು ಹೇಳಿಕೊಳ್ಳುವ ಇವರು ಯಾರೂ ಹೋರಾಟ ಮಾಡಿಲ್ಲ. ಆಗಿನ ಕಾಂಗ್ರೆಸ್ಸೇ ಬೇರೆ, ಈಗಿನ ಕಾಂಗ್ರೆಸ್ಸೇ ಬೇರೆ. ಈಗಿನದ್ದು ನಕಲಿ ಕಾಂಗ್ರೆಸ್‌. ಇವರೆಲ್ಲರೂ ಒಂದು ಕುಟುಂಬಕ್ಕೆ ನಿಷ್ಠರಾಗಿದ್ದಾರೆ. ಆ ವಂಶಕ್ಕೆ ಸಲಾಂ ಹೊಡೆಯುವುದು ಈಗಿನ ನಾಯಕರಿಗೆ ರೂಢಿಯಾಗಿದೆ ಎಂದು ಅವರು ವಾಗ್ದಾಳಿ ನಡೆಸಿದರು.

ಪ್ರಧಾನಿ ಮೋದಿ ಸರ್ವಾಧಿಕಾರಿ ಎಂದು ಹೇಳುತ್ತಾರೆ. ಆದರೆ, ಇದೇ ಕಾಂಗ್ರೆಸ್‌ ನವರು ತುರ್ತು ಪರಿಸ್ಥಿತಿ ಹೇರಿದ್ದರು. ಆಗಿನಂತೆ ಈಗ ಯಾವ ಪತ್ರಿಕೆ ಮುಚ್ಚಿದ್ದಾರೆ, ನ್ಯಾಯಾಂಗದ ಮೇಲೆ ಎಲ್ಲಿ ಒತ್ತಡ ಹೇರಿದ್ದಾರೆ, ಯಾವಾಗ ಚುನಾವಣೆ ಮುಂದೂಡಿದ್ದಾರೆಂದು ತಿಳಿಸಲಿ ಎಂದರು.

ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದೆ ಎಂದು ಸಿಎಂ ಸಿದ್ದರಾಮಯ್ಯ ಹೇಳುತ್ತಾರೆ. ಇವರು ಮಕ್ಕಳು ಚುನಾವಣೆಯಲ್ಲಿ ನಿಲ್ಲುವುದನ್ನು ಯಾರೂ ತಡೆದಿಲ್ಲ. ವಿದೇಶಕ್ಕೆ ಹೋಗಿ ದೇಶದ ಬಗ್ಗೆ ಕೆಟ್ಟದಾಗಿ ಮಾತಾಡುವುದನ್ನೂ ಯಾರೂ ತಡೆದಿಲ್ಲ. ಪತ್ರಿಕೆಯಲ್ಲಿ ಏನು ಬರೆಯಬೇಕೆಂದು ಆಗ ಪೊಲೀಸರು ತೀರ್ಮಾನ ಮಾಡುತ್ತಿದ್ದರು. ಈಗ ಅಂತಹ ಯಾವುದೇ ಪರಿಸ್ಥಿತಿ ಇಲ್ಲ ಎಂದು ಅವರು ಹೇಳಿದರು.

ಬಿಜೆಪಿಯಿಂದ ಸಂವಿಧಾನ ಬದಲಾಗುತ್ತದೆ ಎಂದು ಟೀಕಿಸುತ್ತಾರೆ. ಆದರೆ, ತುರ್ತು ಪರಿಸ್ಥಿತಿಗಾಗಿ ಕಾಂಗ್ರೆಸ್‌ ನವರೇ ಸಂವಿಧಾನ ತಿದ್ದುಪಡಿ ಮಾಡಿದ್ದರು. ಡಾ.ಬಿ.ಆರ್‌. ಅಂಬೇಡ್ಕರ್‌ ಕಾಂಗ್ರೆಸ್‌ ನವರ ಮನೆ ಆಸ್ತಿ ಎಂದುಕೊಂಡಿದ್ದಾರೆ. ಅಂಬೇಡ್ಕರ್‌ ಸತ್ತಾಗ ಅವರ ಸಮಾಧಿಗೆ ಜಾಗ ನೀಡಲಿಲ್ಲ. ಇಂದಿರಾ ಗಾಂಧಿ ಕುಟುಂಬದವರು ಸತ್ತಾಗ ಮಾತ್ರ ಸಮಾಧಿಗೆ ಜಾಗ ನೀಡಿದ್ದರು. ಮೊದಲ ಬಾರಿಗೆ ಬಿಜೆಪಿ ಅಧಿಕಾರಕ್ಕೆ ಬಂದಾಗ ಅಂಬೇಡ್ಕರ್‌ ಗೆ ಭಾರತರತ್ನ ನೀಡಲಾಯಿತು. ಈ ಎಲ್ಲ ವಿಷಯಗಳನ್ನು ಜನರಿಗೆ ತಿಳಿಸಬೇಕು ಎಂದರು.

ಇದೇ ವೇಳೆ ತುರ್ತು ಪರಿಸ್ಥಿತಿ ವಿರೋಧಿಸಿ ಹೋರಾಟ ನಡೆಸಿದ ಬಿಜೆಪಿ ಮತ್ತು ಆರ್‌ ಎಸ್‌ಎಸ್ ಮುಖಂಡರನ್ನು ಸನ್ಮಾನಿಸಲಾಯಿತು.

ವಿಧಾನಪರಿಷತ್ತು ಮಾಜಿ ಸದಸ್ಯರಾದ ತೋಂಟದಾರ್ಯ, ಗೋ. ಮಧುಸೂದನ್, ಬಿಜೆಪಿ ರಾಜ್ಯ ಉಪಾಧ್ಯಕ್ಷ ಎಂ. ರಾಜೇಂದ್ರ, ರಾಜ್ಯ ಅಲ್ಪಸಂಖ್ಯಾತರ ಮೋರ್ಚಾ ಅಧ್ಯಕ್ಷ ಡಾ. ಅನಿಲ್ ಥಾಮಸ್, ನಗರಾಧ್ಯಕ್ಷ ಎಲ್. ನಾಗೇಂದ್ರ, ಉಪಾಧ್ಯಕ್ಷೆ ಹೇಮಾ ನಂದೀಶ್, ಪ್ರಧಾನ ಕಾರ್ಯದರ್ಶಿ ಎಚ್.ಜಿ. ಗಿರಿಧರ್, ಕೇಬಲ್ ಮಹೇಶ್, ಮಾಜಿ ಉಪ ಮೇಯರ್ ಶೈಲೇಂದ್ರ ಮೊದಲಾದವರು ಇದ್ದರು.

ಕೆಲ ಪ್ರಗತಿಪರರು ಪ್ರಜಾಪ್ರಭುತ್ವ ಮತ್ತು ಸಂವಿಧಾನ ರಕ್ಷಣೆಗೆ ನಮ್ಮ ಹೋರಾಟವೆಂದು ಬೊಬ್ಬೆ ಹೊಡೆಯುತ್ತಾರೆ. ಮೈಸೂರಿನಲ್ಲಿ ಸಾಕಷ್ಟು ಮಂದಿ ಪ್ರಗತಿಪರರು ಇದ್ದಾರೆ. ಬೆಂಗಳೂರಿನಲ್ಲಂತೂ ತುಂಬಾ ಜನ ಇದ್ದಾರೆ. ಈಗ ಸಂವಿಧಾನ ರಕ್ಷಣೆ ಆಗಬೇಕು ಎಂದು ಹೇಳುತ್ತಿರುವ ಪ್ರಗತಿಪರರು ತುರ್ತು ಪರಿಸ್ಥಿತಿ ವೇಳೆ ಎಲ್ಲಿ ಹೋಗಿದ್ದರು? ಏಕೆ ದನಿ ಎತ್ತಲಿಲ್ಲ? ಏನು ಮಣ್ಣು ತಿನ್ನುತ್ತಿದ್ದರೇ?

- ಆರ್. ಅಶೋಕ್, ಪ್ರತಿಪಕ್ಷ ನಾಯಕ

ದೇಶದಲ್ಲಿ ಅಂದು ತುರ್ತು ಪರಿಸ್ಥಿತಿ ಇದ್ದಿದ್ದು ಇಂದಿರಾ ಗಾಂಧಿಗೆ ಹೊರತು ದೇಶಕ್ಕಲ್ಲ. ಇಂದಿರಾ ಗಾಂಧಿ ವಿಪಕ್ಷ ನಾಯಕರನ್ನು ಜೈಲಿಗೆ ಕಳುಹಿಸಿದರು. ಮೈಸೂರಿನಲ್ಲೂ ಹಲವರು ಜೈಲು ಪಾಲಾಗಿದ್ದರು. ಪತ್ರಿಕಾ ಸ್ವಾತಂತ್ರ್ಯದ ಹರಣ ಆಗಿತ್ತು. ಸರ್ವಾಧಿಕಾರಿ ಆಡಳಿತ ಮಾಡಿದರು. ನ್ಯಾಯಾಲಯಕ್ಕೂ ಗೌರವ ಸಿಗದಂತೆ ಮಾಡಿದರು. ಇಂದಿರಾ ಹೇಳಿದ್ದೇ ಶಾಸನ ಎಂಬಂತೆ ಆಗಿತ್ತು. ಅದರ ವಿರುದ್ಧ ದೇಶಾದ್ಯಂತ ಹೋರಾಟ ನಡೆಯಿತು.

- ಗೋ. ಮಧುಸೂಧನ್, ವಿಧಾನಪರಿಷತ್ ಮಾಜಿ ಸದಸ್ಯ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ