ಶ್ರೀಶೈಲ ಮಠದ
ಬೆಳಗಾವಿ ರಾಜಕೀಯದಲ್ಲಿ ಕುತೂಹಲ ತಾರಕಕ್ಕೇರಿಸಿದ್ದ ಪಾಲಿಕೆಯ ಮೇಯರ್ ಹಾಗೂ ಉಪಮೇಯರ್ ಚುನಾವಣೆ ಮುಗಿದಿದ್ದು, ಅಂತಿಮವಾಗಿ ನಿರೀಕ್ಷೆಯಂತೆಯೇ ನೇಕಾರ(ದೇವಾಂಗ) ಸಮುದಾಯದ ಪ್ರೀತಿ ಕಾಮಕರ ಅವರಿಗೆ ಮೇಯರ್ ಸ್ಥಾನ ಲಭಿಸಿದೆ. ಈ ಬಾರಿ ಕೊನೆ ಕ್ಷಣದವರೆಗೂ ಯಾರು ಮೇಯರ್ ಆಗುತ್ತಾರೆ ಎಂಬ ಚರ್ಚೆಗಳು ಜೋರಾಗಿತ್ತು.
ಈ ಬಾರಿ ಮೇಯರ್ ಸ್ಥಾನವನ್ನು ಬೆಳಗಾವಿ ಉತ್ತರ ಕ್ಷೇತ್ರದ ಲಿಂಗಾಯತ ಸಮುದಾಯಕ್ಕೆ ನೀಡಬೇಕು ಎಂಬ ಒತ್ತಾಯ ಆಡಳಿತಾರೂಢ ಬಿಜೆಪಿಯೊಳಗೆ ಕೇಳಿ ಬಂದಿತ್ತು. ಉತ್ತರ ಕ್ಷೇತ್ರದ ನಾಯಕರು ಹಾಗೂ ಕಾರ್ಯಕರ್ತರು ಮೇಯರ್ ಸ್ಥಾನ ತಮ್ಮ ಪಾಲಿಗೆ ಬರಬೇಕೆಂದು ತೀವ್ರ ಲಾಬಿ ನಡೆಸಿದ್ದರು. ಆದರೆ ಪಕ್ಷದ ಹೈಕಮಾಂಡ್ ಸಾಮಾಜಿಕ ಸಮತೋಲನ ಹಾಗೂ ಸಮುದಾಯದ ಪ್ರತಿನಿಧಿತ್ವವನ್ನು ಗಮನದಲ್ಲಿಟ್ಟುಕೊಂಡು ನೇಕಾರ ಸಮುದಾಯಕ್ಕೆ ಅವಕಾಶ ನೀಡಿದೆ.ದಕ್ಷಿಣ ಕ್ಷೇತ್ರದ ಪ್ರಾಬಲ್ಯ ಮುಂದುವರಿಕೆ:
ಪ್ರೀತಿ ಕಾಮಕರ ಅವರ ಆಯ್ಕೆ ಮೂಲಕ ನೇಕಾರ ಸಮುದಾಯಕ್ಕೆ ಮೊದಲ ಬಾರಿ ಮೇಯರ್ ಸ್ಥಾನ ಸಿಕ್ಕಿರುವುದು ವಿಶೇಷವಾಗಿದ್ದು, ಇದನ್ನು ಪಕ್ಷವು ಸಾಮಾಜಿಕ ಸಂದೇಶವಾಗಿ ಬಳಸಿಕೊಳ್ಳಲು ಯತ್ನಿಸಿದೆ ಎಂಬ ವಿಶ್ಲೇಷಣೆ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.
ಮೇಯರ್ ಸ್ಥಾನ ಕೈ ತಪ್ಪಿದ ಹಿನ್ನೆಲೆಯಲ್ಲಿ ಉತ್ತರ ಕ್ಷೇತ್ರದ ಅಸಮಾಧಾನ ತಣಿಸಲು ಉಪಮೇಯರ್ ಸ್ಥಾನವನ್ನು ಲಿಂಗಾಯತ ಸಮುದಾಯದ ಹನುಮಂತ ಕೊಂಗಾಲಿ ಅವರಿಗೆ ನೀಡಲಾಗಿದೆ. ಇದರಿಂದ ಒಂದು ಮಟ್ಟಿಗೆ ಉತ್ತರ ಕ್ಷೇತ್ರವನ್ನು ತೃಪ್ತಿಪಡಿಸುವ ಪ್ರಯತ್ನ ನಡೆದಿದೆ ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ.
ಈ ಬಾರಿಯ ಮೇಯರ್ ಚುನಾವಣೆಯು ಬೆಳಗಾವಿ ರಾಜಕೀಯದಲ್ಲಿ ಸಮುದಾಯ ಹಾಗೂ ಪ್ರದೇಶದ ಸಮೀಕರಣಗಳು ಇನ್ನಷ್ಟು ಪ್ರಭಾವ ಬೀರುತ್ತಿರುವುದು ಮತ್ತೊಮ್ಮೆ ಸ್ಪಷ್ಟವಾಗಿದೆ.
ಬೆಳಗಾವಿ ಮಹಾನಗರ ಪಾಲಿಕೆ ಮೇಯರ್ ಹಾಗೂ ಉಪ ಮೇಯರ್ ಆಯ್ಕೆಯನ್ನು ಪಕ್ಷದ ಪದಾಧಿಕಾರಿಗಳ ಸಹಮತದೊಂದಿಗೆ, ಸಮಾಜದ ಸರ್ವ ವರ್ಗಗಳ ವಿಶ್ವಾಸ ಗಳಿಸುವ ನಿಟ್ಟಿನಲ್ಲಿ ಮಾಡಲಾಗಿದೆ. ಈ ನಿರ್ಧಾರಕ್ಕೆ ಪಕ್ಷದ ಎಲ್ಲಾ ನಗರ ಸೇವಕರ ಒಪ್ಪಿಗೆಯೂ ಇದೆ.
-------
ಮುಂದಿನ ಸವಾಲುಗಳೇನು...?
ಇದೀಗ ನೂತನ ಮೇಯರ್ ಪ್ರೀತಿ ಕಾಮಕರ ಹಾಗೂ ಉಪಮೇಯರ್ ಹನುಮಂತ ಕೊಂಗಾಲಿ ಅವರ ಮುಂದೆ ನಗರದ ಮೂಲಭೂತ ಸೌಕರ್ಯಗಳ ಅಭಿವೃದ್ಧಿ, ಸ್ವಚ್ಛತೆ, ಕುಡಿಯುವ ನೀರು ಸೇರಿದಂತೆ ಹಲವು ಸವಾಲುಗಳಿವೆ. ರಾಜಕೀಯ ಸಮತೋಲನದ ಮಧ್ಯೆ ಅಭಿವೃದ್ಧಿ ಕಾರ್ಯಗಳನ್ನು ಸಮರ್ಥವಾಗಿ ನಡೆಸುವುದು ಇವರಿಗೆ ದೊಡ್ಡ ಪರೀಕ್ಷೆಯಾಗಲಿದೆ. ಉಪ ಮೇಯರ್ ಸ್ಥಾನಕ್ಕೆ ಪ್ರಬಲ ಆಕಾಂಕ್ಷಿಯಾಗಿದ್ದ ವಾರ್ಡ್ ಸಂಖ್ಯೆ 6ರ ನಗರ ಸೇವಕ ಸಂತೋಷ್ ಪೇಡನೇಕರ ಅವರನ್ನು ಪಾಲಿಕೆಯ ಆಡಳಿತ ಪಕ್ಷದ ನಾಯಕರನ್ನಾಗಿ ನೇಮಕ ಮಾಡಲಾಗಿದೆ. ಈ ಮೂಲಕ ಮರಾಠ ಸಮುದಾಯಕ್ಕೂ ಆದ್ಯತೆ ನೀಡಲಾಗಿದೆ.