ಸೂಕ್ತ ಸಂವಿಧಾನ ರಚನೆಯಿಂದ ಉತ್ತಮ ಆಡಳಿತ ಸಾಧ್ಯ

KannadaprabhaNewsNetwork | Published : Aug 29, 2024 12:46 AM

ಸಾರಾಂಶ

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಚಿಕ್ಕಮಗಳೂರಿನ ಜಿಪಂ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಡಿಸಿ ಮೀನಾ ನಾಗರಾಜ್‌ ಮಾತನಾಡಿದರು. ಜಿಪಂ ಸಿಇಒ ಕೀರ್ತನಾ, ಸಮಾಜ ಕಲ್ಯಾಣಾಧಿಕಾರಿ ಯೋಗೀಶ್‌ ಇದ್ದರು.

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಸೆಪ್ಟೆಂಬರ್‌ 15ರಂದು ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಆಚರಿಸಲಾಗುವುದು ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಹೇಳಿದರು.

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಜಿಲ್ಲಾ ಪಂಚಾಯಿತಿಯ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಬುಧವಾರ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸ್ವತಂತ್ರ ರಾಷ್ಟ್ರದಲ್ಲಿ ಸೂಕ್ತ ಸಂವಿಧಾನ ರಚಿಸಿಕೊಂಡಾಗ ಮಾತ್ರ ಉತ್ತಮ ಆಡಳಿತ ನಡೆಸಲು ಸಾಧ್ಯ ಮತ್ತು ಪ್ರಜೆಗಳೇ ಪ್ರಭುಗಳಾದಾಗ ಸ್ವಾತಂತ್ರ್ಯದ ಮಹತ್ವ ತಿಳಿಯಲು ಸಾಧ್ಯ. ನಮ್ಮ ಸಂವಿಧಾನವು ಭಾರತದ ನಾಗರೀಕರಿಗೆ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ನ್ಯಾಯವನ್ನು ವಿಚಾರ, ಅಭಿವ್ಯಕ್ತಿ, ಧರ್ಮದ ಸ್ವಾತಂತ್ರ್ಯದ ಜೊತೆಗೆ ಸ್ಥಾನಮಾನ ಮತ್ತು ಅವಕಾಶಗಳ ಸಮಾನತೆಯನ್ನು ದೊರಕಿಸಿಕೊಟ್ಟಿದೆ ಎಂದು ಹೇಳಿದರು.

ಸಂವಿಧಾನ ತಿಳಿದವರು ತಮ್ಮ ಹಕ್ಕು ಕರ್ತವ್ಯಗಳ ಬಗ್ಗೆ ಅರಿತು ಉತ್ತಮ ನಾಗರೀಕರಾಗಲು ಸಾಧ್ಯ. ಸಂವಿಧಾನವು ಯಾವುದೇ ಒಂದು ವರ್ಗಕ್ಕೆ ಸೀಮಿತವಾಗದೆ ಭಾರತದ ಕಟ್ಟಕಡೆಯ ವ್ಯಕ್ತಿಯ ಸ್ವಾತಂತ್ರ್ಯ, ನ್ಯಾಯ, ಸಮಾನತೆಯನ್ನು ಸಾರುತ್ತದೆ ಎಂದರು.

ಜಿಲ್ಲೆಯಲ್ಲಿ ಮಾಗಡಿ ಕೈಮರದಿಂದ ಚಿಕ್ಕಮಗಳೂರು, ಕಡೂರು, ಅಜ್ಜಂಪುರ ಹಾಗೂ ತರೀಕೆರೆ ಮಾರ್ಗವಾಗಿ ಜಿಲ್ಲೆಯ ಗಡಿ ಭಾಗವಾದ ಎಂಸಿ ಹಳ್ಳಿವರೆಗೆ 4 ತಾಲೂಕುಗಳ ರಾಜ್ಯ ಹೆದ್ದಾರಿಯಲ್ಲಿ ಸಂವಿಧಾನದ ಮಹತ್ವ ಸಾರುವ ವಿಶೇಷ ಮಾನವ ಸರಪಳಿ ರಚಿಸಿ ಅರಿವು ಮೂಡಿಸಲು ಪ್ರತಿ ಜಿಲ್ಲಾ, ತಾಲೂಕು, ಗ್ರಾಪಂ ಮಟ್ಟದಲ್ಲಿ ತಂಡವನ್ನು ರಚಿಸಿ ಸಂಘ, ಸಂಸ್ಥೆಗಳು ಹಾಗೂ ಸಾರ್ವಜನಿಕರ ಸಲಹೆ ಸೂಚನೆ ಮತ್ತು ಸಹಕಾರದೊಂದಿಗೆ ಅಗತ್ಯ ಸಿದ್ದತೆ ಮಾಡಿಕೊಳ್ಳಬೇಕು. ಸಂವಿಧಾನದ ಮಹತ್ವ ಸಾರುವ ಜಾಗೃತಿ ಕಾರ್ಯಕ್ರಮದಲ್ಲಿ ಎಲ್ಲಾ ಅಧಿಕಾರಿಗಳು ಸಂಘ, ಸಂಸ್ಥೆಗಳ ಮುಖಂಡರುಗಳು, ಶಾಲಾ ಕಾಲೇಜು, ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸ್ವಯಂ ಪ್ರೇರಿತವಾಗಿ ಭಾಗವಹಿಸಿ ಪ್ರಜಾಪ್ರಭುತ್ವದ ದಿನವನ್ನು ಹಬ್ಬವಾಗಿ ಆಚರಿಸಲು ಪ್ರತಿಯೊಬ್ಬರು ಕೈಜೋಡಿಸಬೇಕು ಎಂದರು.

ಸಭೆಯಲ್ಲಿ ಸಂಘ, ಸಂಸ್ಥೆಗಳ ಮುಖಂಡರು ಕಾರ್ಯಕ್ರಮವನ್ನು ವಿಶೇಷವಾಗಿ ಆಚರಿಸಲು ಸಲಹೆ ಸೂಚನೆಗಳನ್ನು ನೀಡಿದರು.

ಈ ವೇಳೆ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್.ಎಸ್.ಕೀರ್ತನಾ, ತರೀಕೆರೆ ಉಪ ವಿಭಾಗಾಧಿಕಾರಿ ಡಾ. ಕಾಂತರಾಜ್, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಯೋಗೀಶ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳು ಹಾಗೂ ವಿವಿಧ ಸಂಘ ಸಂಸ್ಥೆಗಳ ಮುಖಂಡರು, ಪದಾಧಿಕಾರಿಗಳು ಹಾಜರಿದ್ದರು.

ಜಾಗೃತಿ ಕಾರ್ಯಕ್ರಮ ಆಯೋಜನೆ: ಸ್ವಾತಂತ್ರ್ಯ ರಾಷ್ಟ್ರದಲ್ಲಿ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮಹತ್ವ ತಿಳಿಸಲು ರಾಜ್ಯ ಸರ್ಕಾರವು ಸೆಪ್ಟೆಂಬರ್ 15 ಪ್ರಜಾಪ್ರಭುತ್ವ ದಿನದಂದು ರಾಜ್ಯಾದ್ಯಂತ ಬೀದರ್‌ನಿಂದ-ಚಾಮರಾಜನಗರದವರೆಗೆ ಏಕಕಾಲದಲ್ಲಿ ಮಾನವ ಸರಪಳಿ ರಚಿಸಿ ಸಂವಿಧಾನದ ಪೀಠಿಕೆ ಬೋಧಿಸುವ ಮೂಲಕ ಜಾಗೃತಿ ಕಾರ್ಯಕ್ರಮ ಆಯೋಜಿಸಿದೆ ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ತಿಳಿಸಿದರು.

Share this article