ನಗರಸಭೆ ಆವರಣದಲ್ಲಿ ಜೆಡಿಎಸ್- ಕಾಂಗ್ರೆಸ್ ಮಾತಿನ ಚಕಮಕಿ

KannadaprabhaNewsNetwork |  
Published : Aug 29, 2024, 12:46 AM IST
28ಕೆಎಂಎನ್ ಡಿ16,17 | Kannada Prabha

ಸಾರಾಂಶ

ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಕೈ ಕಾರ್ಯಕರ್ತನೊಬ್ಬ ತಿರುಗಿಬಿದ್ದಿದ್ದರಿಂದ ಕುಮಾರಸ್ವಾಮಿ ಕೂಡ ಅವನತ್ತ ಧಾವಿಸಿ ಹೋದರು. ಆ ವೇಳೆಗೆ ಪೊಲೀಸರು ಆತನ ಕುತ್ತಿಗೆಪಟ್ಟಿ ಹಿಡಿದು ಎಳೆದೊಯ್ದರು. ನಂತರ ಎಚ್‌ಡಿಕೆ ಅಲ್ಲಿಂದ ಹಿಂತಿರುಗಿದರು.

ಎಚ್.ಡಿ. ಕುಮಾರಸ್ವಾಮಿ ವಿರುದ್ಧವೇ ತಿರುಗಿಬಿದ್ದ ಕೈ ಕಾರ್ಯಕರ್ತ । ಸದಸ್ಯರನ್ನು ವಾಹನದಿಂದ ಇಳಿಸುವ ವಿಚಾರವಾಗಿ ಗದ್ದಲ

ಕನ್ನಡಪ್ರಭ ವಾರ್ತೆ ಮಂಡ್ಯ

ನಗರಸಭೆ ಅಧ್ಯಕ್ಷ- ಉಪಾಧ್ಯಕ್ಷ ಚುನಾವಣೆಯಲ್ಲಿ ಭಾಗವಹಿಸುವುದಕ್ಕೆ ವಾಹನಗಳಲ್ಲಿ ಆಗಮಿಸಿದ ಸದಸ್ಯರನ್ನು ಇಳಿಸುವ ವಿಚಾರವಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರ ನಡುವೆ ಬಿರುಸಿನ ವಾಗ್ವಾದ, ಮಾತಿನ ಚಕಮಕಿ ನಡೆಯಿತು.

ವಾಹನದಿಂದ ಸದಸ್ಯರನ್ನು ಕರೆದೊಯ್ಯಲು ಬಂದ ಸಂಸದ ಎಚ್.ಡಿ. ಕುಮಾರಸ್ವಾಮಿ ವಿರುದ್ಧವೇ ಕೈ ಕಾರ್ಯಕರ್ತನೊಬ್ಬ ಮಾತಿನ ಚಕಮಕಿಗಿಳಿದ ಘಟನೆಯೂ ನಡೆಯಿತು. ಕೊನೆಗೆ ಪೊಲೀಸರು ಆತನನ್ನು ಹಿಡಿದು ದೂರಕ್ಕೆ ಎಳೆದೊಯ್ದರು.

ಚುನಾವಣೆ ಹಿನ್ನೆಲೆಯಲ್ಲಿ ಬುಧವಾರ ಬೆಳಗ್ಗೆ 11.40ರ ವೇಳೆಗೆ ಕಾಂಗ್ರೆಸ್ ಸದಸ್ಯರ ತಂಡ ಮೊದಲಿಗೆ ಮಿನಿ ಬಸ್‌ನಲ್ಲಿ ನಗರಸಭೆ ಆವರಣವನ್ನು ಪ್ರವೇಶಿಸಿತು. ಆ ಬಸ್‌ನಲ್ಲಿ ಕಾಂಗ್ರೆಸ್ ಸದಸ್ಯರ ಜೊತೆಗೆ ಜೆಡಿಎಸ್‌ನ ಭಾರತೀಶ್ ಮತ್ತು ಸಿ.ಕೆ. ರಜನಿ ಕೂಡ ಇದ್ದರು. ಅದರ ಹಿಂದೆಯೇ ಶಾಸಕ ಪಿ. ರವಿಕುಮಾರ್ ಹಾಗೂ ಅಧ್ಯಕ್ಷ ಸ್ಥಾನದ ಪ್ರಬಲ ಅಭ್ಯರ್ಥಿಯಾಗಿದ್ದ ಎಚ್.ಎಸ್. ಮಂಜು ಕೂಡ ನಗರಸಭೆ ಆವರಣಕ್ಕೆ ಬಂದಿಳಿದರು. ಈ ಸಮಯದಲ್ಲಿ ಕಾಂಗ್ರೆಸ್ ಸದಸ್ಯರಿದ್ದ ಬಸ್‌ನ್ನು ಪ್ರವೇಶದ್ವಾರದ ಗೇಟ್ ಬಳಿಯೇ ತಡೆದು ನಿಲ್ಲಿಸಲಾಯಿತು. ಅಲ್ಲಿಂದಲೇ ಸದಸ್ಯರು ಇಳಿದು ನಗರಸಭೆ ಒಳಗೆ ಪ್ರವೇಶಿಸಿದರು.

ಕಾಂಗ್ರೆಸ್ ಸದಸ್ಯರು ಆಗಮನವಾದ ಐದೇ ನಿಮಿಷದಲ್ಲಿ ಜೆಡಿಎಸ್ ಸದಸ್ಯರಿದ್ದ ಬಸ್ ಕೂಡ ನಗರಸಭೆ ಪ್ರವೇಶದ್ವಾರಕ್ಕೆ ಬಂದಿತು. ಈ ವೇಳೆ ಬಸ್ ಆವರಣ ಪ್ರವೇಶಿಸಲು ಮುಂದಾದಾಗ ಕಾಂಗ್ರೆಸ್ ಕಾರ್ಯಕರ್ತರು, ನಮ್ಮ ಸದಸ್ಯರಿದ್ದ ಬಸ್‌ನ್ನು ಪ್ರವೇಶದ್ವಾರದಲ್ಲೇ ನಿಲ್ಲಿಸಿದ್ದೀರಿ. ಅವರನ್ನೂ ಅಲ್ಲೇ ಇಳಿಸುವಂತೆ ಒತ್ತಾಯಿಸಿದರು. ಅದೇ ವೇಳೆಗೆ ಸಂಸದ ಎಚ್.ಡಿ. ಕುಮಾರಸ್ವಾಮಿ ಅವರ ಕಾರು ನಗರಸಭೆ ಆವರಣ ಪ್ರವೇಶಿಸಿತು. ಅವರು ಕಾರಿನಿಂದ ಇಳಿದುಹೋಗಿ ಸದಸ್ಯರನ್ನು ಕರೆತರುವುದಕ್ಕೆ ಮುಂದಾದರು.

ಈ ವೇಳೆ ಎರಡೂ ಪಕ್ಷಗಳ ಕಾರ್ಯಕರ್ತರ ನಡುವೆ ವಾಕ್ಸಮರ ಜೋರಾಯಿತು. ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಕೈ ಕಾರ್ಯಕರ್ತನೊಬ್ಬ ತಿರುಗಿಬಿದ್ದಿದ್ದರಿಂದ ಕುಮಾರಸ್ವಾಮಿ ಕೂಡ ಅವನತ್ತ ಧಾವಿಸಿ ಹೋದರು. ಆ ವೇಳೆಗೆ ಪೊಲೀಸರು ಆತನ ಕುತ್ತಿಗೆಪಟ್ಟಿ ಹಿಡಿದು ಎಳೆದೊಯ್ದರು. ನಂತರ ಎಚ್‌ಡಿಕೆ ಅಲ್ಲಿಂದ ಹಿಂತಿರುಗಿದರು.

ಜೆಡಿಎಸ್ ಸದಸ್ಯರಿದ್ದ ಬಸ್ಸು ನಗರಸಭೆ ಆವರಣ ಪ್ರವೇಶಿಸಿ ಎಲ್ಲರೂ ಇಳಿದುಹೋದರು. ಅದರಲ್ಲಿ ಟಿ.ಕೆ.ರಾಮಲಿಂಗು ಮಾತ್ರ ಕಾಣಲಿಲ್ಲ. ಅವರು ಕುಮಾರಸ್ವಾಮಿ ಇದ್ದ ಕಾರಿನಲ್ಲೇ ಕುಳಿತಿದ್ದರು. ಆದರೆ, ಕಾಂಗ್ರೆಸ್‌ನವರು ಬಸ್‌ನಲ್ಲಿರಬಹುದೆಂದು ಭಾವಿಸಿ ಅಲ್ಲಿ ಅವರನ್ನು ಕರೆದೊಯ್ಯುವುದಕ್ಕೆ ಸುತ್ತುವರಿದಿದ್ದರು. ನಂತರ ಎಚ್.ಡಿ.ಕುಮಾರಸ್ವಾಮಿ ಮತ್ತಿತರರು ಟಿ.ಕೆ.ರಾಮಲಿಂಗು ಕಾಂಗ್ರೆಸ್ಸಿಗರು ಮಾತನಾಡುವುದಕ್ಕೂ ಅವಕಾಶವಾಗದಂತೆ ಅವರನ್ನು ರಕ್ಷಿಸಿಕೊಂಡು ಚುನಾವಣೆ ನಡೆಯಲಿದ್ದ ಧರಣಪ್ಪ ಸಭಾಂಗಣದತ್ತ ಕರೆದೊಯ್ಯುವಲ್ಲಿ ಯಶಸ್ವಿಯಾದರು.

ಆರು ತಿಂಗಳು ಅಧಿಕಾರ ಹಂಚಿಕೆ:

ಕನ್ನಡಪ್ರಭ ವಾರ್ತೆ, ಮಂಡ್ಯ

ನಗರಸಭೆ ಎರಡನೇ ಅವಧಿಗೆ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನವನ್ನು ಆರು ತಿಂಗಳ ಹಂಚಿಕೆ ಸೂತ್ರದ ಮೇಲೆ ನೀಡಲಾಗಿದೆ. ಮೊದಲ ಆರು ತಿಂಗಳ ಅವಧಿಗೆ ನಾಗೇಶ್ ಮತ್ತು ಉಳಿದ ಆರು ತಿಂಗಳ ಅವಧಿಗೆ ವಿದ್ಯಾ ಮಂಜುನಾಥ್ ಅವರಿಗೆ ನೀಡುವಂತೆ ಮಾತುಕತೆ ನಡೆಸಿರುವುದಾಗಿ ತಿಳಿದುಬಂದಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಇನ್ಫೋಸಿಸ್ ಮಾರಿದ್ದ ಜಮೀನು ನೋಂದಣಿ ಮಾಡಿಕೊಟ್ಟ ಸಬ್ ರಿಜಿಸ್ಟ್ರಾರ್ ಅಮಾನತು
ಬಳ್ಳಾರಿ ಗನ್‌ಮ್ಯಾನ್‌ ಸೇರಿ ಕೈ, ಬಿಜೆಪಿಯ 26 ಜನ ಸೆರೆ