ಕನ್ನಡಪ್ರಭ ವಾರ್ತೆ ತುಮಕೂರುಸಂವಿಧಾನದ ಆಶಯದಂತೆ ಕಾರ್ಯಾಂಗ, ನ್ಯಾಯಾಂಗ ಮತ್ತು ಶಾಸಕಾಂಗದ ಮೂಲಕ ಸಾರ್ವಜನಿಕರಿಗೆ ಸಿಗಬೇಕಾದ ಹಕ್ಕುಗಳನ್ನು ಪ್ರಾಮಾಣಿಕವಾಗಿ ತಲುಪಿಸುವುದೇ ನಿಜವಾದ ಉತ್ತಮ ಆಡಳಿತ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು ಹೇಳಿದರು. ಮಂಗಳವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಉತ್ತಮ ಆಡಳಿತ ವಾರ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ ತಕ್ಷಣ ಸ್ಪಂದಿಸಬೇಕು. ಅರ್ಹ ಫಲಾನುಭವಿಗಳಿಗೆ ಸರ್ಕಾರದ ಸೌಲಭ್ಯಗಳನ್ನು ಮತ್ತು ಮಾಹಿತಿಯನ್ನು ಅತಿ ವೇಗವಾಗಿ ತಲುಪಿಸುವುದೇ ಅತ್ಯುತ್ತಮ ಸೇವೆ ಎಂದು ಹೇಳಿದರು. ಜಿಲ್ಲೆಯಲ್ಲಿ ಕಳೆದ ಎರಡು ವರ್ಷಗಳಲ್ಲಿ ಒಟ್ಟು 1,110 ಕಂದಾಯ ಗ್ರಾಮಗಳನ್ನು ಗುರುತಿಸಲಾಗಿದ್ದು, ಇದರ ಪ್ರಯೋಜನ ಸುಮಾರು 18 ಸಾವಿರ ಕುಟುಂಬಗಳಿಗೆ ಲಭ್ಯವಾಗಲಿದೆ. ಅಲ್ಲದೆ ಜಿಲ್ಲೆಯು ಅತಿ ಹೆಚ್ಚು ಹಕ್ಕು ಪತ್ರಗಳನ್ನು ವಿತರಿಸುವ ಮೂಲಕ ರಾಜ್ಯದಲ್ಲೇ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಹೇಳಿದರು.ಜಿಲ್ಲೆಯ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ವೇಗ ನೀಡಲಾಗುತ್ತಿದ್ದು, ತುಮಕೂರು-ರಾಯದುರ್ಗ ರೈಲ್ವೆ 2009ರ ಕೇಂದ್ರ ಬಜೆಟ್‌ನಲ್ಲಿ ಅನುಮೋದನೆಯಾಗಿದ್ದು, ಈ ಕಾಮಗಾರಿಗೆ ಸಂಬಂಧಿಸಿದ ಭೂಸ್ವಾಧೀನ ಪ್ರಕ್ರಿಯೆಯು ಸಚಿವರ ನಿರ್ದೇಶನದಂತೆ ಈಗ ಅತ್ಯಂತ ವೇಗವಾಗಿ ನಡೆಯುತ್ತಿದೆ. ರೈಲ್ವೆ ಹಾಗೂ ಎತ್ತಿನಹೊಳೆ ಯೋಜನೆಗೆ ಭೂಮಿ ನೀಡಿದ ರೈತರಿಗೆ ಪರಿಹಾರದ ಹಣವನ್ನು ಅವರ ಖಾತೆಗಳಿಗೆ ನೇರವಾಗಿ ಜಮಾ ಮಾಡುವ ಪ್ರಕ್ರಿಯೆಯನ್ನು ಒಂದು ಆಂದೋಲನದಂತೆ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.ಜನಸಂಪರ್ಕ ಸಭೆಗಳಲ್ಲಿ ಹೆಚ್ಚಾಗಿ ಕಂಡುಬಂದ ಪಡಿತರ ಚೀಟಿ ಸಮಸ್ಯೆಗಳನ್ನು ಪರಿಹರಿಸಲು ಜಿಲ್ಲೆಯ ೫೦ ಹೋಬಳಿಗಳಲ್ಲಿ ''''''''ಆಹಾರ ಅದಾಲತ್'''''''' ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಆದ್ಯತೆಯ ಮೇರೆಗೆ ಹೊಸ ಪಡಿತರ ಚೀಟಿಗಳನ್ನು ವಿತರಿಸುವ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು.
ನಿವೃತ್ತ ಐಎಎಸ್ ಅಧಿಕಾರಿ ಹಾಗೂ ಸಿದ್ದಗಂಗಾ ಮಠದ ಶೈಕ್ಷಣಿಕ ಸಂಸ್ಥೆಗಳ ಕಾರ್ಯನಿರ್ವಾಹಕ ನಿರ್ದೇಶಕ ಜಯವಿಭವ ಸ್ವಾಮಿ ಅವರು ಮಾತನಾಡಿ, ಆಡಳಿತ ಎಂದರೆ ಕೇವಲ ಕಚೇರಿ ಕೆಲಸವಲ್ಲ, ಅದು ಜನರ ಸಮಸ್ಯೆಗಳಿಗೆ ಸ್ಪಂದಿಸುವ ಸೇವೆ. ಕಚೇರಿಗೆ ಬರುವ ಪ್ರತಿಯೊಬ್ಬ ನಾಗರಿಕನಿಗೂ ಗೌರವ ನೀಡುವುದು ಅಧಿಕಾರಿಯ ಮೊದಲ ಆದ್ಯತೆಯಾಗಿರಬೇಕು. ಒಬ್ಬ ವ್ಯಕ್ತಿ ಸಮಸ್ಯೆ ಹೊತ್ತು ಬಂದಾಗ ಅವರಿಗೆ ಸಮಾಧಾನದಿಂದ ಆಲಿಸುವ ಮನೋಭಾವ ಇರಬೇಕು ಎಂದು ತಿಳಿಸಿದರು.ನಾಗರಿಕರ ಸಮಸ್ಯೆಗಳನ್ನು ಬಾಕಿ ಉಳಿಸಿಕೊಳ್ಳದೆ, ಕಾನೂನಿನ ಚೌಕಟ್ಟಿನಲ್ಲಿ ಎಷ್ಟು ಸಾಧ್ಯವೋ ಅಷ್ಟು ಬೇಗ ಪರಿಹರಿಸಬೇಕು. ವಿಳಂಬ ಆಡಳಿತದ ವೈಫಲ್ಯದ ಸಂಕೇತ ಎಂದು ಹೇಳಿದರು. ಜನರು ಸಣ್ಣಪುಟ್ಟ ಕೆಲಸಗಳಿಗೂ ಜಿಲ್ಲಾ ಕೇಂದ್ರಗಳಿಗೆ ಅಲೆಯುವುದನ್ನು ತಪ್ಪಿಸಿ ಹೋಬಳಿ ಮತ್ತು ತಾಲೂಕು ಮಟ್ಟದಲ್ಲಿ ನಿಯಮಿತವಾಗಿ ಜನಸ್ಪಂದನ ಸಭೆಗಳನ್ನು ನಡೆಸುವ ಮೂಲಕ ಅಧಿಕಾರಿಗಳೇ ಜನರ ಮನೆ ಬಾಗಿಲಿಗೆ ಹೋಗುವಂತರಾಗಬೇಕು ಇದೇ ಜನಸ್ನೇಹಿ ಆಡಳಿತ ಎಂದರು.ಕಾರ್ಯಗಾರದಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಎನ್.ತಿಪ್ಪೇಸ್ವಾಮಿ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಸಂಜೀವಪ್ಪ, ಮುಖ್ಯ ಯೋಜನಾಧಿಕಾರಿ ಸಣ್ಣಮಸಿಯಪ್ಪ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.