ಹಾವೇರಿ: 2020ನೇ ಸಾಲಿನ ಐಎಎಸ್ ಬ್ಯಾಚ್‌ನ ಅಧಿಕಾರಿ ರುಚಿ ಬಿಂದಲ್ ಅವರು ಜಿಲ್ಲಾ ಪಂಚಾಯಿತಿಯ ನೂತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಅಧಿಕಾರಿ ಸ್ವೀಕರಿಸಿದರು.
ಕಚೇರಿಗೆ ಸಮಯಕ್ಕೆ ಸರಿಯಾಗಿ ಹಾಜರಾಗುವುದು ಮತ್ತು ಕೆಲಸಗಳ ವಿಳಂಬಕ್ಕೆ ಆಸ್ಪದ ನೀಡದೆ ಎಚ್ಚರಿಕೆ ವಹಿಸಲು ಖಡಕ್ ಸೂಚನೆ ನೀಡಿದರು. ಕಚೇರಿಯ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಗಾಂಧಿಜಿಯವರ ಕನಸಿನಂತೆ ಸ್ವಚ್ಛ ಪರಿಸರದಿಂದ ಸ್ವಚ್ಛ ಆಡಳಿತ ಹಾಗೂ ಸಮಯ ಪರಿಪಾಲನೆಗೆ ಹೆಚ್ಚಿನ ಆದ್ಯತೆ ನೀಡುವುದು ಮುಖ್ಯ ಎಂದರು.
ಇನ್ನು ಕರ್ತವ್ಯಕ್ಕೆ ಸಂಬಂಧಿಸಿದಂತೆ, ಸಿಬ್ಬಂದಿ ಪತ್ರ ವ್ಯವಹಾರ ಮತ್ತು ಕಡತಗಳ ವಿಳಂಬಕ್ಕೆ ಆಸ್ಪದ ನೀಡದಂತೆ ತ್ವರಿತವಾಗಿ ನಿರ್ವಹಣೆ ಮಾಡುವುದು. ಸಾರ್ವಜನಿಕ ಅಹವಾಲುಗಳನ್ನು ಪ್ರಥಮ ಆದ್ಯತೆ ಮೇರೆಗೆ ಕೈಗೆತ್ತಿಕೊಳ್ಳುವುದು ಹಾಗೂ ತ್ವರಿತವಾಗಿ ಸ್ಪಂದನೆ ನೀಡುವುದು ಎಲ್ಲರ ಜವಾಬ್ದಾರಿ ಎಂದು ಎಚ್ಚರಿಸಿದರು.ಉತ್ತಮ ಆಡಳಿತ ಗುರಿ: ಜಿಲ್ಲೆಯಲ್ಲಿ ಉತ್ತಮ ಆಡಳಿತ ಮತ್ತು ಅಭಿವೃದ್ಧಿಗಾಗಿ ಆದ್ಯತೆ ನೀಡುವ ಮೂಲಕ ಅಧಿಕಾರ ವಹಿಸಿಕೊಂಡಿದ್ದೇನೆ. ಹಾವೇರಿ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಆಡಳಿತ ಮತ್ತು ಅಭಿವೃದ್ಧಿ ಕಾಮಗಾರಿಗಳಗೆ ಸಂಬಂಧಿಸಿದಂತೆ ಯಾವುದೇ ವಿಳಂಬವಾಗದಂತೆ ಎಲ್ಲರೂ ತಮ್ಮ ತಮ್ಮ ಕರ್ತವ್ಯ ನಿರ್ವಹಿಸಬೇಕು ಎಂದರು.ನಂತರ ಜಿಲ್ಲಾ ಪಂಚಾಯಿತಿ ಎಲ್ಲ ಶಾಖೆಗಳಿಗೆ ಭೇಟಿ ನೀಡಿ ಸಿಬ್ಬಂದಿ ಕುಂದುಕೊರತೆ ಮತ್ತು ಸ್ವಚ್ಛತೆ ಬಗ್ಗೆ ಪರಿಶೀಲಿಸಿದರು. ಅಲ್ಲದೇ ಸ್ವಚ್ಛತೆ ಬಗ್ಗೆ ಕೆಲವೊಂದು ಬದಲಾವಣೆಗಳ ಬಗ್ಗೆ ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಹಾನಗಲ್ಲ: ಬಸವಾದಿ ಶರಣರ ತತ್ವಗಳು ಶಾಶ್ವತವಾಗಿ ಉಳಿಸುವ ಕೆಲಸವನ್ನು ಹಾನಗಲ್ಲ ಕುಮಾರಸ್ವಾಮಿಗಳು ಮಾಡಿದ್ದಾರೆ ಎಂದು ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದರು.ಪಟ್ಟಣದಲ್ಲಿ ಏರ್ಪಡಿಸಿದ್ದ ಲಿಂ. ಹಾನಗಲ್ಲ ಕುಮಾರ ಮಹಾಶಿವಯೋಗಿಗಳ 95ನೇ ಪುಣ್ಯಸ್ಮರಣೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದರು. ಕರ್ನಾಟಕದಲ್ಲಿ ಹಾನಗಲ್ಲ ಹೆಸರು ಪ್ರಸಿದ್ಧಿಯಾಗಲು ಹಾನಗಲ್ಲ ಕುಮಾರಸ್ವಾಮಿಗಳು ಕಾರಣ. ಇಂತಹ ಪುಣ್ಯಭೂಮಿಯಲ್ಲಿ ಹುಟ್ಟಿರುವ ನಾವೆಲ್ಲರೂ ಪುಣ್ಯವಂತರು ಎಂದರು.ಹುಟ್ಟು ಮತ್ತು ಸಾವು ಎರಡೂ ನಮ್ಮ ಕೈಯಲ್ಲಿ ಇಲ್ಲ. ಅದರ ಬಗ್ಗೆ ನಾವು ಚಿಂತನೆ ಮಾಡುತ್ತೇವೆ. ಬದುಕು ನಮ್ಮ ಕೈಯಲ್ಲಿ ಇದೆ. ಅದರ ಬಗ್ಗೆ ನಾವು ಚಿಂತನೆ ಮಾಡುವುದಿಲ್ಲ ಎಂದರು.