ಕೊಪ್ಪ ಹೋಬಳಿ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತೇನೆ: ಸಚಿವ ಎನ್.ಚಲುವರಾಯಸ್ವಾಮಿ

KannadaprabhaNewsNetwork | Published : Feb 24, 2025 12:32 AM

ಸಾರಾಂಶ

ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವ ಪ್ರಶ್ನೇಯೇ ಇಲ್ಲ. ಗೃಹಲಕ್ಷ್ಮಿ ಯೋಜನೆ ಹಣ 2 ತಿಂಗಳಿಂದ ಬಂದಿಲ್ಲ. ಶೀಘ್ರ ಹಣ ಸಂಬಂಧಿಸಿದವರ ಖಾತೆಗೆ ಬರುತ್ತದೆ. ಈ ಬಗ್ಗೆ ಬಿಜೆಪಿ ಮತ್ತು ಜೆಡಿಎಸ್ ಪಕ್ಷದವರು ಇಲ್ಲ ಸಲ್ಲದ ಹೇಳಿಕೆ ನೀಡುತ್ತಿದ್ದಾರೆ. ಇದಕ್ಕೆ ಜನರು ಕಿವಿಗೊಡಬಾರದು.

ಕನ್ನಡಪ್ರಭ ವಾರ್ತೆ ಮದ್ದೂರು

ಕೊಪ್ಪ ಹೋಬಳಿಯ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.

ಕೊಪ್ಪದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊಪ್ಪದಲ್ಲಿ ನಾಡ ಕಚೇರಿ, ಪೊಲೀಸ್ ಠಾಣೆಗೆ ಹೊಸ ಕಟ್ಟಡ ನಿರ್ಮಾಣ, ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮಾಡುವುದು ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಹಂತ ಹಂತವಾಗಿ ಮಾಡಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕೊಪ್ಪ ಕೆರೆಯಿಂದ ನಾಲೆಗಳಿಗೆ ಸಮರ್ಪಕವಾಗಿ ನೀರು ಹರಿಯಲು ಕಾಲುವೆ ಮತ್ತು ನಾಲೆಗಳ ನಿರ್ಮಾಣ ಸೇರಿದಂತೆ ನೀರಾವರಿ ಇಲಾಖೆಗೆ ಸುಮಾರು 100 ಕೋಟಿ ರು. ಹಣವನ್ನು ಬಿಡುಗಡೆಗೊಳಿಸಿ ಅಭಿವೃದ್ಧಿ ಮಾಡಲಾಗುವುದು. ಎನ್‌ಎಸ್ ಎಲ್ ಸಕ್ಕರೆ ಕಾರ್ಖಾನೆಯಿಂದ ಕೊಪ್ಪದವರೆಗೆ ಡಬ್ಬಲ್ ರಸ್ತೆ ನಿರ್ಮಿಸಿ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಲಾಗುವುದು. ಕೊಪ್ಪವನ್ನು ಪಟ್ಟಣ ಪಂಚಾಯ್ತಿ ಮಾಡುವ ಸಂಬಂಧ ಅಧಿಕಾರಿಗಳ ಜತೆಗೆ ಚರ್ಚಿಸಲಾಗುತ್ತಿದೆ ಎಂದರು.

ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವ ಪ್ರಶ್ನೇಯೇ ಇಲ್ಲ. ಗೃಹಲಕ್ಷ್ಮಿ ಯೋಜನೆ ಹಣ 2 ತಿಂಗಳಿಂದ ಬಂದಿಲ್ಲ. ಶೀಘ್ರ ಹಣ ಸಂಬಂಧಿಸಿದವರ ಖಾತೆಗೆ ಬರುತ್ತದೆ. ಈ ಬಗ್ಗೆ ಬಿಜೆಪಿ ಮತ್ತು ಜೆಡಿಎಸ್ ಪಕ್ಷದವರು ಇಲ್ಲ ಸಲ್ಲದ ಹೇಳಿಕೆ ನೀಡುತ್ತಿದ್ದಾರೆ. ಇದಕ್ಕೆ ಜನರು ಕಿವಿಗೊಡಬಾರದು ಎಂದರು.

ಮಂಡ್ಯ ವಿಶ್ವ ವಿದ್ಯಾನಿಲಯವನ್ನು ಮೈಸೂರು ವಿವಿಗೆ ವಿಲೀನ ಮಾಡುವಂತೆ ನಾವು ಯಾರು ಹೇಳಿಲ್ಲ. ಆದರೆ, ಶಿಕ್ಷಣ ತಜ್ಞರು, ವಿದ್ಯಾರ್ಥಿಗಳು ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುವವರು ವಿಲೀನ ಮಾಡಿದರೆ ಒಳ್ಳೆಯದು ಎಂದು ಹೇಳುತ್ತಿದ್ದಾರೆ. ಈ ಸಂಬಂಧ ಉಪ ಸಮಿತಿ ಮಾಡಲಾಗಿತ್ತು, ಅವರು ಕೂಡ ಮೈಸೂರಿನ ವಿವಿಗೆ ವಿಲೀನ ಮಾಡಿ ಎಂದು ಹೇಳುತ್ತಿದ್ದಾರೆ. ಈ ಬಗ್ಗೆ ಮುಂದೆ ಸರ್ಕಾರ ತೀರ್ಮಾನಿಸಲಿದೆ ಎಂದರು.

ಈ ವೇಳೆ ನಾಗಮಂಗಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎನ್.ದಿವಾಕರ್, ತಾಪಂ ಮಾಜಿ ಉಪಾಧ್ಯಕ್ಷರಾದ ಬೆಕ್ಕಳಲೆ ರಘು, ರಾಮಚಂದ್ರ, ಮಾಜಿ ಸದಸ್ಯ ತೋಯಾಜಾಕ್ಷ, ಗ್ರಾಪಂ ಸದಸ್ಯರಾದ ಕುಮಾರ್ ಕೊಪ್ಪ, ಪರ್ವೇಜ್ ಅಹಮದ್ ಇದ್ದರು.

Share this article