ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಪಟ್ಟಣದ ನವೋದಯ ವಿದ್ಯಾಸಂಸ್ಥೆಯಲ್ಲಿ ಏರ್ಪಡಿಸಿದ್ದ ಪತ್ರಿಕಾ ವಿತರಕರ ಒಕ್ಕೂಟದ ಜಿಲ್ಲಾ ಸಮ್ಮೇಳನದಲ್ಲಿ ಮಾತನಾಡಿದ ಅವರು, ಪತ್ರಿಕಾ ವಿತರಕರು ಸಂಘಟಿತರಾಗಬೇಕು. ಜತೆಗೆ ಆರೋಗ್ಯ ಕಾಪಾಡಿಕೊಳ್ಳಬೇಕು. ಮುಖ್ಯಮಂತ್ರಿ ಮಾತೃಹೃದಯ ಹೊಂದಿದ್ದಾರೆ. ಪತ್ರಕರ್ತರ ಕಷ್ಟ- ಸುಖಕ್ಕೆ ಸ್ಪಂದಿಸುತ್ತಾರೆ. ವಿತರಕರು ಸೂರ್ಯವಂಶದವರು, ಸೂರ್ಯ ಹುಟ್ಟುವ ಮೊದಲೇ ತಮ್ಮ ದಿನನಿತ್ಯದ ಕೆಲಸಕ್ಕೆ ಹಾಜರಾಗುತ್ತಾರೆ. ಎಷ್ಟೇ ಸಮಸ್ಯೆಗಳಿದ್ದರೂ ಕೂಡ ತಮ್ಮ ಕಾಯಕ ಮರೆಯುವುದಿಲ್ಲ ಎಂದು ಹೇಳಿದರು.
ಕರ್ನಾಟಕ ಗೃಹಮಂಡಳಿ ಅಧ್ಯಕ್ಷ, ಶಾಸಕ ಶಿವಲಿಂಗೇಗೌಡ ಮಾತನಾಡಿ, ಸಮಾಜದಲ್ಲಿರುವ ಲೋಪ ದೋಷ ತಿದ್ದಿ, ಮಾರ್ಗದರ್ಶನ ನೀಡುವಲ್ಲಿ ಪತ್ರಿಕಾ ರಂಗದ ಪಾತ್ರ ಮುಖ್ಯವಾದುದು ಎಂದು ಹೇಳಿದರು.ಪತ್ರಕರ್ತರಿಗೆ ಮತ್ತು ಪತ್ರಿಕಾ ವಿತರಕರಿಗೆ ಸಾಕಷ್ಟು ಸೌಲಭ್ಯ ಕಲ್ಪಿಸಬೇಕಿದೆ. ಮಾಧ್ಯಮ ಕ್ಷೇತ್ರ ಚೆನ್ನಾಗಿದ್ದರೆ ರಾಜ್ಯ ಪ್ರಗತಿ ಹೊಂದುತ್ತದೆ ಎಂದರು. ಸಮಾಜವನ್ನು ತಿದ್ದುವ ಮಾಧ್ಯಮ ಕ್ಷೇತ್ರ ಎಂದಿಗೂ ಸೊರಗಬಾರದು. ಚಳಿ, ಮಳೆ, ಗಾಳಿ ಎನ್ನದೇ ನಿತ್ಯ ಮನೆಗಳಿಗೆ ಪತ್ರಿಕೆಗಳನ್ನು ತಲುಪಿಸುವ ಕಾಯಕವನ್ನು ವಿತರಕರು ಮಾಡುತ್ತಾರೆ. ಕ್ಷೇಮಾಭಿವೃದ್ಧಿ ನಿಧಿಗೆ ಬಜೆಟ್‌ನಲ್ಲಿ ಹಣ ನೀಡುವ ಮೂಲಕ ಇವರಿಗೆ ನೆರವಾಗಬೇಕು. ಕ್ಷೇಮಾಭಿವೃದ್ಧಿ ನಿಧಿಗೆ ಹಣ ಘೋಷಣೆ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ಮನವಿ ಮಾಡಬೇಕು ಎಂದರು.
ಶಾಸಕ ಸಿ.ಎನ್. ಬಾಲಕೃಷ್ಣ ಮಾತನಾಡಿ, ತಾಲೂಕಿನಲ್ಲಿ ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ನಿಧಿಗೆ ೧೦ ಲಕ್ಷ ರು. ನೀಡುವುದಾಗಿ ಈ ಹಿಂದೆ ಆಶ್ವಾಸನೆ ನೀಡಿದ್ದೆ. ಅದರಂತೆ ಜೂನ್ ಒಳಗೆ ನೆರವು ಒದಗಿಸಲಾಗುವುದು ಎಂದು ಭರವಸೆ ನೀಡಿದರು.
ಪತ್ರಿಕಾ ವಿತರಕರ ಪ್ರತಿಭಾವಂತ ಮಕ್ಕಳಿಗೆ ಸನ್ಮಾನಿಸಲಾಯಿತು, ಜಿಲ್ಲೆಯ ೮ ಹಿರಿಯ ಪತ್ರಿಕಾ ವಿತರಕರನ್ನು ಗೌರವಿಸಲಾಯಿತು. ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಜವರಪ್ಪ, ಲಕ್ಷ್ಮೀನರಸಪ್ಪ, ನಂದನ್ ಪುಟ್ಟಣ್ಣ, ಯಶಸ್ವಿನಿಗೆ ಕೆ. ವಿ. ಪ್ರಭಾಕರ್ ಸನ್ಮಾನಿಸಿದರು.
ಜಿಲ್ಲಾ ಪತ್ರಿಕಾ ವಿತರಕರ ಒಕ್ಕೂಟದ ಸಮ್ಮೇಳನದ ಅಂಗವಾಗಿ ಪಟ್ಟಣದಲ್ಲಿ ಜಾನಪದ ಕಲಾತಂಡಗಳ ಮೆರವಣಿಗೆ ನಡೆಯಿತು.
ಜಿಲ್ಲೆಯ ಹಿರಿಯ ಪತ್ರಿಕಾ ವಿತರಕ ಶಾಂತಿಗ್ರಾಮದ ಪೂಚಣ್ಣ ಅವರ ಭಾವಚಿತ್ರವನ್ನು ವಾಹನದಲ್ಲಿ ಪ್ರತಿಷ್ಠಾಪಿಸಿ ಮೆರವಣಿಗೆ ಮಾಡಲಾಯಿತು. ಪುರಸಭಾಧ್ಯಕ್ಷ ಸಿ.ಎನ್. ಮೋಹನ್, ಬಿಜೆಪಿ ಮುಖಂಡ ಎ.ಸಿ. ಆನಂದಕುಮಾರ್, ಡಾ. ರಮೇಶ್ ಬಾಬು, ಡಾ. ವಿ.ಮಹೇಶ್, ಪರಿಸರವಾದಿ ಸಿ.ಎನ್. ಅಶೋಕ್, ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಎಲ್.ಪಿ. ಪ್ರಕಾಶಗೌಡ ಪಾಲ್ಗೊಂಡಿದ್ದರು.