ಎರಡು ದಿನಗಳಿಂದ ಯಲಬುರ್ಗಾ ತಾಲೂಕಿನಾದ್ಯಂತ ಉತ್ತಮ ಮಳೆ

KannadaprabhaNewsNetwork | Published : Jun 8, 2024 12:32 AM

ಸಾರಾಂಶ

ಯಲಬುರ್ಗಾ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಗುರುವಾರ ರಾತ್ರಿ, ಶುಕ್ರವಾರ ಮಧ್ಯಾಹ್ನ ಉತ್ತಮ ಮಳೆ ಸುರಿದಿದೆ. ಕಳೆದ ಎರಡ್ಮೂರು ತಿಂಗಳಿಂದ ಉರಿಸಿಬಿಲಿನ ತಾಪಮಾನಕ್ಕೆ ಬೇಸತ್ತಿದ ಜನತೆ ನಿಟ್ಟುಸಿರು ಬಿಡುವಂತಾಗಿದೆ.

ಕನ್ನಡಪ್ರಭ ವಾರ್ತೆ ಯಲಬುರ್ಗಾಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಗುರುವಾರ ರಾತ್ರಿ, ಶುಕ್ರವಾರ ಮಧ್ಯಾಹ್ನ ಉತ್ತಮ ಮಳೆ ಸುರಿದಿದೆ. ಕಳೆದ ಎರಡ್ಮೂರು ತಿಂಗಳಿಂದ ಉಸಿಬಿಲಿನ ತಾಪಮಾನಕ್ಕೆ ಬೇಸತ್ತಿದ ಜನತೆ ನಿಟ್ಟುಸಿರು ಬಿಡುವಂತಾಗಿದೆ.

ಇನ್ನೊಂದೆಡೆ ಈ ಮಳೆಯಿಂದ ಅನೇಕ ಅವಾಂತರ ಸೃಷ್ಟಿಯಾಗಿದೆ. ಆದರೆ ಯಾವುದೇ ಪ್ರಾಣಾಪಾಯವಾಗಿಲ್ಲ.

ಕೊಚ್ಚಿ ಹೋದ ಬೈಕ್:

ತಾಲೂಕಿನ ಹೊಸಳ್ಳಿ-ಚಿಕ್ಕೊಪ್ಪ ರಾಷ್ಟ್ರೀಯ ಹೆದ್ದಾರಿ ೩೬೭ ಮಧ್ಯೆ ಬರುವ ಹಳ್ಳ ಮಳೆಗೆ ತುಂಬಿ ಹರಿದಿದ್ದು, ಗುರುವಾರ ರಾತ್ರಿ ಹಳ್ಳ ಕಟ್ಟಿ ಸಂಚಾರಕ್ಕೆ ಅಡಚಣೆಯಾಗಿದೆ. ರಾತ್ರಿ ೧೦ ಗಂಟೆ ಬಳಿಕ ಸ್ವಲ್ಪ ನೀರಿನ ರಭಸ ಕಡಿಮೆಯಾಗಿದೆ ಎಂದು ಭಾವಿಸಿ ಗಜೇಂದ್ರಗಡದ ಸುರೇಶ ರಾಯಭಾಗಿ ಎಂಬಾತ ಬೈಕ್ ಓಡಿಸಿಕೊಂಡು ಹೋಗುತ್ತಿದ್ದಾಗ ನೀರಿನ ರಭಸಕ್ಕೆ ಕೊಚ್ಚಿಹೋಯಿತು. ಬೈಕ್ ಸಮೇತ ತೇಲಿ ಹೋಗುತ್ತಿದ್ದ ಸುರೇಶ ಅವರನ್ನು ಸ್ಥಳೀಯರು ಹಗ್ಗ ಕಟ್ಟಿ ರಕ್ಷಣೆ ಮಾಡಿದ್ದಾರೆ. ಬೈಕ್ ಕೊಚ್ಚಿಕೊಂಡು ಹೋಗಿದೆ.

ಮಳೆಯಿಂದಾಗಿ ಮನೆಗಳಿಗೆ ಹಾನಿಕನ್ನಡಪ್ರಭ ವಾರ್ತೆ ಕುಷ್ಟಗಿ

ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಗುರುವಾರ ರಾತ್ರಿ ಸುರಿದ ಮಳೆಯಿಂದಾಗಿ ಹಲವು ಮನೆಗಳ ಗೋಡೆ ಕುಸಿದಿದ್ದು, ಮನೆಯಲ್ಲಿದ್ದವರಿಗೆ ಪ್ರಾಣಾಪಾಯವಾಗಿಲ್ಲ.ತಾಲೂಕಿನ ಚಳಗೇರಾ ಗ್ರಾಮದಲ್ಲಿ ಮಾಬೂಬಿ ಮುರ್ತುಜಸಾ ಕಾತರಕಿ ಎಂಬವರ ಮನೆ ಹಾನಿಗೊಳಗಾಗಿದೆ. ನೀರಲೂಟಿ ಗ್ರಾಮದಲ್ಲಿ ಹನುಮಗೌಡ ಶೇಖರಗೌಡ ಪೊಲೀಸ್ ಪಾಟೀಲ್, ಶಂಕ್ರಗೌಡ ಹನುಮಗೌಡ ಪೊಲೀಸ್ ಪಾಟೀಲ ಅವರ ಮನೆಗಳಿಗೆ ಹಾನಿಯಾಗಿದೆ. ಹುಲಿಯಾಪುರ ಗ್ರಾಮದ ಬಸವರಾಜ ಕುಂಬಾರ ಅವರ ಮನೆಗೂ ಹಾನಿಯಾಗಿದೆ. ಎಲ್ಲಿಯೂ ಜನರಿಗೆ ಅಪಾಯವಾಗಿಲ್ಲ.ಹಾನಿಯಾದ ಮನೆಗಳಿಗೆ ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ವರದಿ ತಯಾರಿಸಿ ಕಚೇರಿಗೆ ನೀಡಿದ್ದಾರೆ. ಸಂತ್ರಸ್ತರಿಗೆ ಪರಿಹಾರ ನೀಡುವ ಭರವಸೆ ನೀಡಿದ್ದಾರೆ.ಮಳೆ ವರದಿ:ಕುಷ್ಟಗಿ 15.8 ಮಿಮೀ, ಹನುಮಸಾಗರ 8.1 ಮಿಮೀ, ಹನುಮನಾಳ 21.6 ಮಿಮೀ, ದೋಟಿಹಾಳ 3.1 ಮಿಮೀ, ಕಿಲ್ಲಾರಟ್ಟಿ 22.6 ಮಿಮೀ, ತಾವರಗೇರಾ 56.0 ಮಿಮೀ ಮಳೆಯಾಗಿದೆ ಎಂದು ಕಂದಾಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.ಗಾಳಿಯ ಪ್ರಮಾಣ ಹೆಚ್ಚಿರುವುದರಿಂದ ಮಳೆ ಬರುವ ಸಮಯದಲ್ಲಿ ಸಾರ್ವಜನಿಕರು ಜಾಗರೂಕತೆಯಿಂದ ಇರಬೇಕು ಎಂದು ಕುಷ್ಟಗಿ ತಹಸೀಲ್ದಾರ್‌ ರವಿ ಅಂಗಡಿ ತಿಳಿಸಿದ್ದಾರೆ.

Share this article