ಬಳ್ಳಾರಿ: ಮುಂಗಾರು ಮಳೆ ಶುರು ಬೆನ್ನಲ್ಲೇ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆ ಚುರುಕುಗೊಂಡಿದ್ದು, ಬಿತ್ತನೆ ಕಾರ್ಯಕ್ಕೆ ರೈತರು ಸಜ್ಜಾಗಿದ್ದಾರೆ. ಈ ಬಾರಿ ಮುಂಗಾರು ಪೂರ್ವ ಮಳೆ ಉತ್ತಮವಾಗಿ ಆಗಿರುವುದರಿಂದ ರೈತರಿಗೆ ಅನುಕೂಲವಾದಂತಾಗಿದೆ. ಜತೆಗೆ ಮುಂಗಾರು ಅವಧಿಪೂರ್ವ ಆಗಮಿಸುವ ಮುನ್ಸೂಚನೆ ದೊರೆತಿದೆ. ಹೀಗಾಗಿ ಮಳೆಯಾಶ್ರಿತ ಪ್ರದೇಶದ ಕೆಲವೆಡೆ ಬಿತ್ತನೆ ಕಾರ್ಯಕ್ಕೆ ಚಾಲನೆ ದೊರೆತಿದೆ. ಜೂ. 10ರ ಬಳಿಕ ಬಹುತೇಕ ಕಡೆ ಬಿತ್ತನೆ ಆರಂಭಗೊಳ್ಳಲಿದೆ.
ಮುಂಗಾರು ಬಿತ್ತನೆಗೆ ಬೇಕಾದ ಬಿತ್ತನೆ ಬೀಜಗಳನ್ನು ಪೂರೈಸಲು ಕೃಷಿ ಇಲಾಖೆ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದು, ಜಿಲ್ಲೆಯ ಐದು ತಾಲೂಕುಗಳಿಗೆ ಬೇಕಾದ ವಿವಿಧ ಬೆಳೆಗಳ ಒಟ್ಟು 11,766 ಕ್ವಿಂಟಲ್ ಬಿತ್ತನೆ ಬೀಜ ದಾಸ್ತಾನು ಮಾಡಲಾಗಿದೆ. ಮುಂಗಾರಿಗೆ ಒಟ್ಟು 1,08,102 ಮೆ. ಟನ್ ರಸಗೊಬ್ಬರ ಬೇಡಿಕೆಯಿದೆ. ಈ ಪೈಕಿ ಮೇ ಅಂತ್ಯದ ವರೆಗೆ 3031 ಮೆ. ಟನ್ ಬೇಡಿಕೆಯಲ್ಲಿ ಕೃಷಿ ಇಲಾಖೆ 40,228 ಮೆ. ಟನ್ ರಸಗೊಬ್ಬರ ದಾಸ್ತಾನಿದೆ. ಈ ಬಾರಿ ಬತ್ತ, ಮೆಕ್ಕೆಜೋಳ, ಶೇಂಗಾ, ತೊಗರಿ, ಜೋಳ ಬಿತ್ತನೆ ಬೀಜಗಳಿಗೆ ಈ ಬಾರಿ ಹೆಚ್ಚಿನ ಬೇಡಿಕೆಯಿದೆ. ಬೇಡಿಕೆಯನ್ವಯ ಬಿತ್ತನೆ ಬೀಜ ಸಂಗ್ರಹಿಸಿಕೊಳ್ಳಲಾಗಿದೆ. ರೈತ ಸಂಪರ್ಕ ಕೇಂದ್ರಗಳ ಮೂಲಕ ವಿತರಿಸಲಾಗುತ್ತಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಆದಾಗ್ಯೂ ತಮಗೆ ಬೇಕಾದ ಕಂಪನಿಯ ಬಿತ್ತನೆ ಬೀಜಕ್ಕಾಗಿ ರೈತರು ಖಾಸಗಿ ಅಂಗಡಿಗಳ ಮೊರೆ ಹೋಗಿರುವುದು ಕಂಡು ಬಂದಿದೆ.
ವಾಡಿಕೆಗಿಂತ ಹೆಚ್ಚು ಮಳೆ: ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ವಾಡಿಕೆಗಿಂತಲೂ ಹೆಚ್ಚು ಮಳೆಯಾಗಿದೆ. ಇದು ರೈತಾಪಿಗಳಲ್ಲಿ ಸಂತಸ ಮೂಡಿಸಿದೆ. ಬಳ್ಳಾರಿ ತಾಲೂಕಿನಲ್ಲಿ 33.7 ಮಿಮೀ ವಾಡಿಕೆ ಮಳೆಗೆ 92.9 ಮಿಮೀ ಮಳೆಯಾಗಿದೆ. ಸಂಡೂರು ತಾಲೂಕಿನಲ್ಲಿ 43.8 ಮಿಮೀ ವಾಡಿಕೆಗೆ 69.9 ಮಿಮೀ ಮಳೆಯಾಗಿದೆ. ಸಿರುಗುಪ್ಪ ತಾಲೂಕಿನಲ್ಲಿ 26.6 ಮಿಮೀ ವಾಡಿಕೆಯ ಮಳೆಗೆ 71.9 ಮಿಮೀ ಮಳೆಯಾಗಿದೆ.ಕುರುಗೋಡು ತಾಲೂಕಿನಲ್ಲಿ ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಮಳೆಯಾಗಿದ್ದು, ವಾಡಿಕೆಯ 25.5 ಮಿಮೀಗೆ 108.7 ಮಿಮೀ ಮಳೆಯಾಗಿದೆ. ಕಂಪ್ಲಿ ತಾಲೂಕಿನಲ್ಲಿ ವಾಡಿಕೆಯಂತೆ 23.9 ಮಿಮೀ ಮಳೆಯಾಗಬೇಕಿತ್ತು. 82.4 ಮಿಮೀ ಮಳೆಯಾಗಿದೆ. ಜಿಲ್ಲೆಯ ಎಲ್ಲ ತಾಲೂಕುಗಳಲ್ಲೂ ವಾಡಿಕೆಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಮಳೆ ಸುರಿದಿದ್ದು, ಒಟ್ಟು ಜಿಲ್ಲೆಯಲ್ಲಿ 28.6 ಮಿಮೀ ವಾಡಿಕೆ ಮಳೆಯಾಗಬೇಕಿತ್ತು. ಈ ಪೈಕಿ 82.4 ಮಿಮೀ ಮಳೆಯಾಗಿದೆ ಎಂದು ಕೃಷಿ ಇಲಾಖೆ ತಿಳಿಸಿದೆ.