ಎಲ್.ಎಸ್. ಶ್ರೀಕಾಂತ್
ಕನ್ನಡಪ್ರಭ ವಾರ್ತೆ ಮೈಸೂರುವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಕನ್ನಡ ಪುಸ್ತಕಗಳ ರಿಯಾಯ್ತಿ ಮಾರಾಟ ಮೇಳಕ್ಕೆ ಸಾರ್ವಜನಿಕರಿಂದ, ಪುಸ್ತಕ ಪ್ರೇಮಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಭಾರಿ ರಿಯಾತಿಯಲ್ಲಿ ಪುಸ್ತಕಗಳನ್ನು ಮಾರಾಟ ಮಾಡುತ್ತಿದ್ದು, ಇಂದು ಮೇಳಕ್ಕೆ ತೆರೆ ಬೀಳಲಿದೆ.
ನಗರದ ಹಳೇ ಡಿಸಿ ಕಚೇರಿಯ ಹಿಂಭಾಗದಲ್ಲಿರುವ ಸ್ಕೌಟ್ಸ್‌ಮತ್ತು ಗೈಡ್ಸ್‌ನ ವಿಶಾಲವಾದ ಮೈದಾನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಪುಸ್ತಕ ಪ್ರಾಧಿಕಾರ ಹಾಗೂ ಮೈಸೂರು ದಸರಾ ಮಹೋತ್ಸವ ಸಮಿತಿಯು ಕಳೆದ ಸೆ. 22 ರಿಂದ ಅ. 1ರವರೆಗೆ ಪ್ರತಿನಿತ್ಯ ಬೆಳಗ್ಗೆ 10 ರಿಂದ ರಾತ್ರಿ 8ರವರೆಗೆ ಈ ಮೇಳವನ್ನು ಆಯೋಜಿಸಿದೆ.ಮೇಳದಲ್ಲಿ 70ಕ್ಕೂ ಮಳಿಗೆಗಳಿದ್ದು, 500 ಕ್ಕೂ ಹೆಚ್ಚು ಪ್ರಕಾಶಕ ಪುಸ್ತಕಗಳು ಒಂದೇ ಸೂರಿನಲ್ಲಿ ಲಭ್ಯವಿದ್ದು, ಪುಸ್ತಕ ಪ್ರಿಯರು, ಸಾರ್ವಜನಿಕರು ಮೇಳಕ್ಕೆ ಭೇಟಿ ನೀಡಿ ಪುಸ್ತಕ ಮಳಿಗೆಗಳನ್ನು ವೀಕ್ಷಿಸಿ, ತಮಗೆ ಇಷ್ಟವಾದ ಪುಸ್ತಕಗಳನ್ನು ಖರೀದಿಸುತ್ತಿದ್ದಾರೆ.
ಅಂಕೇಗೌಡರ ಹಿತವಚನ..,ಮೇಳದಲ್ಲಿ ಪಾಂಡವಪುರದ ಹರಳಹಳ್ಳಿಯ ಅಂಕೇಗೌಡ ಜ್ಞಾನ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ಎಂ. ಅಂಕೇಗೌಡ ಅವರು ತಮ್ಮ ಮಳಿಗೆಯಲ್ಲಿ ಹಲವಾರು ಪ್ರಕಾಶಕರ ಪುಸ್ತಕಗಳನ್ನು ಮಾರಾಟ ಮಾಡುತ್ತಿದ್ದು, ಜನರು ಮೇಳಗಳಿಗೆ ಬರಬೇಕು, ರಿಯಾಯಿತಿ ದರದಲ್ಲಿ ಪುಸ್ತಕಗಳನ್ನು ಖರೀದಿಸಬೇಕು, ಕೊನೆಯದಾಗಿ ಪುಸ್ತಕ ಖರೀದಿಸದಿದ್ದರೂ ಸಹ ಪುಸ್ತಕವನ್ನು ಕೈಯಲ್ಲಿಡಿದು ನೋಡಬೇಕು, ಸುಮ್ಮನೆ ಮಳಿಗೆಗಳನ್ನು ವೀಕ್ಷಿಸಿ ಹೋಗಬಾರದು ಎಂದು ಹಿತವಚನ ಹೇಳಿದರು.
ಪುಸ್ತಕದ ಬಗ್ಗೆ ಒಬ್ಬ ಮಹಾನ್ ಭಾವರು ಈ ತರಹ ಹೇಳಿದ್ದಾರೆ. ಏಕೆಂದರೆ ಪುಸ್ತಕವನ್ನು ಓದದೆ ಇರುವವರು, ನೋಡದೆ ಇರುವವರು ಬಗ್ಗೆ ಬಹಳ ಸ್ವಾರಸ್ಯಪೂರ್ಣವಾದ ಒಂದು ಮಾತನ್ನು ಹೇಳಿದ್ದಾರೆ,ಗ್ರಂಥ ಹಿಡಿಯದ ಕೈಗಳು, ಗ್ರಂಥ ನೋಡದ ಕಣ್ಣುಗಳು, ಗ್ರಂಥ ಓದದ ನಾಲಿಗೆ, ಗ್ರಂಥ ಕೇಳದ ಕಿವಿಗಳು, ಗ್ರಂಥ ತರಂಗ ಹೋಗದ ಮನ ಇವೆಲ್ಲ ಮಾನವರೂಪಿ ಮೃಗಗಳು ಅಂತ ಕರೆಬೇಕು ಎಂದು ಹೇಳಿದ್ದಾರೆ.
ನಿನ್ನಲ್ಲಿ ಎರಡು ದುಡ್ಡಿದ್ದರೆ ಒಂದರಲ್ಲಿ ರೊಟ್ಟಿಯನ್ನು ಕೊಂಡುಕೋ, ಮತ್ತೊಂದರಲ್ಲಿ ಪುಸ್ತಕವನ್ನು ಕೊಂಡುಕೋ ರೊಟ್ಟಿ ನಿನಗೆ ಜೀವನವನ್ನು ಕೊಡುವುದಾದರೆ ಪುಸ್ತಕ ನಿನಗೆ ಸಂಸ್ಕೃತಿಯನ್ನು ಕಲಿಸುತ್ತದೆ ಎಂದು ಈಗಿನ ಯುವಕರಿಗೆ ಹಿತವಚನ ಹೇಳಿದರು.ರಿಯಾಯ್ತಿ ಮಾರಾಟ, ಉತ್ತಮ ಸ್ಪಂದನೆ:
ಕಳೆದ ಹತ್ತು ದಿನಗಳಿಂದ ಪುಸ್ತಕ ಮೇಳದಲ್ಲಿ ಭಾರಿ ರಿಯಾಯಿತಿಯಿಂದ ಪುಸ್ತಕಗಳನ್ನು ಮಾರಾಟ ಮಾಡುತ್ತಿದ್ದು, ಸಾರ್ವಜನಿಕರು, ಯುವಕರು, ಯುವತಿಯರು, ತಂದೆ, ತಾಯಿಯೊಂದಿಗೆ ಮಕ್ಕಳು ಸಹ ಭೇಟಿ ನೀಡಿ ಪುಸ್ತಕಗಳನ್ನು ಖರೀದಿಸುತ್ತಿದ್ದಾರೆ ಎಂದು ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್ ನ ಸಿಬ್ಬಂದಿ ತಿಳಿಸಿದರು.ಸಾಹಿತಿ, ಪ್ರಕಾಶಕರು, ಮಾರಾಟಗಾರರನ್ನು ಉತ್ತೇಜಿಸಿ
ಕನ್ನಡ ಪುಸ್ತಕಗಳ ರಿಯಾಯಿತಿ ಮಾರಾಟ ಈ ಮೇಳದಲ್ಲಿ ಹೆಸರಾಂತ ಸಾಹಿತಗಳ ಕಥೆ, ಕಾದಂಬರಿ, ಮಕ್ಕಳ ಪುಸ್ತಕಗಳು ಸೇರಿದಂತೆ ಎಲ್ಲ ರೀತಿ ಪುಸ್ತಕಗಳು ಪ್ರದರ್ಶನ ಮತ್ತು ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ ಹಾಗೂ ಭಾರಿ ರಿಯಾಯ್ತಿಗಳಲ್ಲಿ ಪುಸ್ತಕಗಳನ್ನು ಮಾರಾಟ ಮಾಡಲಾಗುತ್ತಿದೆ.ಈ ಪುಸ್ತಕ ಮೇಳಕ್ಕೆ ಇಂದು ಕಡೆ ದಿನವಾದ್ದರಿಂದ ಪುಸ್ತಕ ಪ್ರೇಮಿಗಳು ಮೇಳಕ್ಕೆ ಬಂದು ಹೆಚ್ಚು ಪುಸ್ತಕಗಳನ್ನು ಭಾರಿ ರಿಯಾಯಿತಿಯಲ್ಲಿ ಖರೀದಿಸಿ ಸಾಹಿತಿಗಳು, ಪ್ರಕಾಶಕರು ಹಾಗೂ ಮಾರಾಟಗಾರರನ್ನು ಉತ್ತೇಜಿಸಬೇಕೆಂದು ಆಯೋಜಕರು ಕರೆ ನೀಡಿದ್ದಾರೆ.