ಶ್ರೀನಿವಾಸಪುರ ಬಂದ್‌ಗೆ ಉತ್ತಮ ಪ್ರತಿಕ್ರಿಯೆ

KannadaprabhaNewsNetwork |  
Published : Jun 12, 2025, 01:22 AM IST
೧೧ಕೆಎಲ್‌ಆರ್-೧೦ಶ್ರೀನಿವಾಸಪುರ ಮಾವು ಬೆಳೆಗಾರರ ಸಂಘ ಹಾಗು ವಿವಿಧ ಸಂಘಟನೆಗಳಿಂದ ನಡೆದ ಮಾವು ಬೆಂಬಲ ಬೆಲೆ ಘೋಷಣೆಗಾಗಿ ನಡೆದ ಬಂದ್‌ನಲ್ಲಿ ವಿವಿಧ ಸಂಘಟನೆಯ ಮುಖಂಡರು ರಸ್ತೆತಡೆ ನಡೆಸುತ್ತಿರುವುದು. | Kannada Prabha

ಸಾರಾಂಶ

ಕಳೆದ ಹತ್ತು ದಿನಗಳಿಂದ ಬೆಂಬಲ ಬೆಲೆಗೆ ಒತ್ತಾಯಿಸಿ ರೈತರು ನಿರಂತರ ಹೋರಾಟ ಮಾಡುತ್ತಿದ್ದರೂ ಸಹ ಸರ್ಕಾರಕ್ಕಾಗಲಿ, ಜನಪ್ರತಿನಿಧಿಗಳಿಗಾಗಲಿ ಸ್ಪಂದಿಸಲಿಲ್ಲ. ಮಾವು ತಿರಳು ತೆಗೆಯುವ ಫ್ಯಾಕ್ಟರಿಗಳೂ ಇಲ್ಲಿ ಇಲ್ಲ, ಇಂತಹ ಫ್ಯಾಕ್ಟರಿಗಳು ಇದಿದ್ದರೆ ನಮಗೆ ಈ ಸಮಸ್ಯೆ ಬರುತಿರಲಿಲ್ಲ, ನೆರಯ ಆಂಧ್ರ ಪ್ರದೇಶದ ಫ್ಯಾಕ್ಟರಿಗಳಿಗೆ ಮೊರೆಹೋಗುವ ಪರಿಸ್ಥಿತಿ ಉಂಟಾಗಿದೆ

ಕನ್ನಡಪ್ರಭ ವಾರ್ತೆ ಶ್ರೀನಿವಾಸಪುರಮಾರುಕಟ್ಟೆಯಲ್ಲಿ ಮಾವು ದರ ತೀವ್ರ ಕುಸಿತ ಕಂಡ ಹಿನ್ನೆಲೆಯಲ್ಲಿ ಮಾವಿಗೆ ಬೆಂಬಲ ನೀಡುವಂತೆ ಒತ್ತಾಯಿಸಿ ಮಾವು ಬೆಳೆಗಾರರು ಬುಧವಾರ ಕರೆ ನೀಡಿದ್ದ ಶ್ರೀನಿವಾಸಪುರ ಪಟ್ಟಣ ಬಂದ್‌ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ಬೆಳ್ಳಂಬೆಳಗ್ಗೆಯೇ ಪ್ರತಿಭಟನಾಕಾರರು ರಸ್ತೆಗಿಳಿದು ಪ್ರತಿಭಟನೆ ನಡೆಸಿದರು. ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಮಾವಿನ ಕಾಯಿಗಳನ್ನು ರಸ್ತೆಗೆ ಸುರಿದು ಪ್ರತಿಭಟನೆ ಘೋಷಣೆ ಕೂಗಿದರು. ಪಟ್ಟಣದಲ್ಲಿನ ಅಂಗಡಿಮುಂಗ್ಗಟ್ಟುಗಳು, ಹೋಟೆಲ್, ಬೇಕರಿಗಳು, ತರಕಾರಿ ಅಂಗಡಿಗಳು, ಸರ್ಕಾರಿ, ಖಾಸಗಿ ಶಾಲಾ ಕಾಲೇಜುಗಳು ಸಂಪೂರ್ಣವಾಗಿ ಮುಚ್ಚಲಾಗಿತ್ತು. ಬಸ್‌ ಸಂಚಾರ ಸ್ಥಗಿತಗೊಂಡಿದ್ದರಿಂದ ಪ್ರಯಾಣಿಕರು ಪರದಾಡುವಂತಾಯಿತು.

ಅಂಗಡಿ, ಶಾಲೆ, ವಾಹನ ಸಂಚಾರ ಬಂದ್‌

ಮಾವಿನ ಮೇಲೆ ನಿರೀಕ್ಷೆಗೂ ಮೀರಿ ಕುಸಿತ ಹಿನ್ನೆಲೆಯಲ್ಲಿ ಬುಧವಾರ ಶ್ರೀನಿವಾಸಪುರ ತಾಲೂಕು ಬಂದ್‌ಗೆ ಮಾವು ಬೆಳೆಗಾರರ ಸಂಘದಿಂದ ಬಂದ್‌ಗೆ ಕರೆ ನೀಡಿದ್ದ ಹಿನ್ನೆಲೆಯಲ್ಲಿ ಶ್ರೀನಿವಾಸಪುರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಶ್ರೀನಿವಾಸಪುರ ಸಾರಿಗೆ ಹಾಗೂ ಆಟೋ ಸಂಚಾರ ಸ್ಥಗಿತಗೊಂಡಿತ್ತಲ್ಲದೆ ಅಂಗಡಿ ಮುಂಗಟ್ಟು ಬಂದ್ ಮಾಡಲಾಗಿತ್ತು, ಸಾರ್ವಜನಿಕರಿಗೆ ಅಗತ್ಯ ವಸ್ತುಗಳು ಮಾತ್ರ ವಿನಾಯ್ತಿ ನೀಡಲಾಗಿತ್ತು. ಬಂದ್ ಹಿನ್ನಲೆಯಲ್ಲಿ ಶಾಲಾ ಕಾಲೇಜುಗಳಿಗೆ ಶಿಕ್ಷಣ ಇಲಾಖೆಯಿಂದ ರಜೆ ಘೋಷಿಸಲಾಗಿತ್ತು. ಬಂದ್‌ಗೆ ಪ್ರಗತಿಪರ, ಕನ್ನಡ ಹಾಗೂ ರೈತ ಪರ ಸಂಘಟನೆಗಳು ಬೆಂಬಲ ನೀಡಿದ್ದವು.

ಕಷ್ಟಕ್ಕೆ ಸ್ಪಂದಿಸದ ಸರ್ಕಾರ

ಬಂದ್ ನೇತೃತ್ವ ವಹಿಸಿ ಮಾತನಾಡಿದ ಮಾವು ಬೆಳೆಗಾರರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ನೀಲಟೂರು ಚಿನ್ನಪ್ಪರೆಡ್ಡಿ, ಕಳೆದ ಹತ್ತು ದಿನಗಳಿಂದ ಬೆಂಬಲ ಬೆಲೆಗೆ ಒತ್ತಾಯಿಸಿ ರೈತರು ನಿರಂತರ ಹೋರಾಟ ಮಾಡುತ್ತಿದ್ದರೂ ಸಹ ಸರ್ಕಾರಕ್ಕಾಗಲಿ, ಜನಪ್ರತಿನಿಧಿಗಳಿಗಾಗಲಿ ಸ್ಪಂದಿಸಲಿಲ್ಲ. ಮಾವು ತಿರಳು ತೆಗೆಯುವ ಫ್ಯಾಕ್ಟರಿಗಳೂ ಇಲ್ಲಿ ಇಲ್ಲ, ಇಂತಹ ಫ್ಯಾಕ್ಟರಿಗಳು ಇದಿದ್ದರೆ ನಮಗೆ ಈ ಸಮಸ್ಯೆ ಬರುತಿರಲಿಲ್ಲ, ನೆರಯ ಆಂಧ್ರ ಪ್ರದೇಶದ ಫ್ಯಾಕ್ಟರಿಗಳಿಗೆ ಮೊರೆಹೋಗುವ ಪರಿಸ್ಥಿತಿ ಉಂಟಾಗಿದೆ. ಪಟ್ಟಣದಲ್ಲಿಯೂ ಇಂತಹ ಪ್ಯಾಕ್ಟರಿ ಆರಂಭಿಸುವಂತೆ ಸರ್ಕಾರವನ್ನು ಒತ್ತಾಯಿಸಿದರು.

ವಿಧಾನಸೌಧದ ಮುಂದೆ ಪ್ರತಿಭಟಿಸುವ ಎಚ್ಚರಿಕೆ

ಮುಂದಿನ ದಿನಗಳಲ್ಲಿ ಇಡೀ ತಾಲೂಕಿನ ಮಾವಿಕಾಯಿಯೊಂದಿಗೆ ಬೆಂಗಳೂರಿನ ವಿಧಾನಸೌದ ಮುಂಭಾಗದಲ್ಲಿ ರಾಶಿಹಾಕಿ ನಮ್ಮ ಬೇಡಿಕೆ ಈಡೇರುವವರಿಗೂ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.

ಮಾಜಿ ಸಂಸದ ಎಸ್.ಮುನಿಸ್ವಾಮಿ ಮಾತನಾಡಿ, ರಾಜ್ಯದಲ್ಲಿ ಹಲವಾರು ಸರ್ಕಾರಗಳು ಬಂದು ಹೋಗಿವೆ, ಆದರೆ ಮಾವು ಬೆಳೆಗಾರರ ಸಂಕಷ್ಟ ಇದುವರೆಗೂ ಪರಿಹಾರವಾಗಿಲ್ಲ, ನೆರೆಯ ಆಂಧ್ರ ಪ್ರದೇಶದಲ್ಲಿ ಮಾವು ಬೆಳೆಗಾರರಿಗೆ ೮ ಸಾವಿರ ರು.ಗಳ ಸಹಾಯಧನ ನೀಡುತ್ತಿದೆ. ರಾಜ್ಯದಲ್ಲೂ ಅದೇ ರೀತಿ ಸಹಾಯಧನ ನೀಡುವಂತೆ ಒತ್ತಾಯಿಸಿದರು. ಹೆದ್ದಾರಿ ಬಂದ್‌ ಮಾಡುವ ಎಚ್ಚರಿಕೆ

ಕಳೆದ ಹತ್ತು ದಿನಗಳಿಂದ ನಿರಂತರ ಮಾವು ಬೆಳೆಗಾರರು ಮುಷ್ಕರ ನಡೆಸುತ್ತಿದ್ದರೂ ಜಿಲ್ಲಾಧಿಕಾರಿ, ಉಸ್ತವಾರಿ ಸಚಿವರು ಸಂಬಂಧಪಟ್ಟ ಅಧಿಕಾರಿಗಳು ಮುಷ್ಕರ ರೊಂದಿಗೆ ಸ್ಪಂದಿಸುತ್ತಿಲ್ಲ. ಶ್ರೀಮಂತ ಉಸ್ತುವಾರಿ ಸಚಿವರಿಗೆ ರೈತರ ಕಷ್ಟಗಳು ಅರಿವು ಇಲ್ಲ. ಜಿಲ್ಲಾಧಿಕಾರಿಗಳು ರೈತರ ಪರವಾಗಿದ್ದಾರೆ, ಅದರಂತೆ ಗುರುವಾರ ಸಭೆ ಕರೆದಿದ್ದಾರೆ. ನಾಳೆ ನಮಗೆ ಬೆಂಬಲ ಬೆಲೆ ನೀಡದಿದ್ದರೆ. ಉಗ್ರವಾದ ಹೋರಾಟದ ಮೂಲಕ ನ್ಯಾಷನಲ್ ಹೈವೇ ಬಂದ್ ಮಾಡುತ್ತೇವೆ ಎಂದು ಎಚ್ಚರಿಸಿದರು. ಇಂದು ಡೀಸಿ ಕಚೇರಿಯಲ್ಲಿ ಸಭೆ

ಜಿಲ್ಲಾಧಿಕಾರಿ ಎಂ.ಆರ್.ರವಿ ಮಾತನಾಡಿ, ರಾಜ್ಯದಲ್ಲಿನ ಮಾವು ಸಂಸ್ಕರಣ ಘಟಕಗಳು ವಿಶೇಷವಾಗಿ ಶ್ರೀನಿವಾಸಪುರ ಮಾವು ಖರೀದಿ ಮಾಡಬೇಕು ಎಂದು ಹೇಳಿದ್ದಾರೆ. ಬೆಂಬಲ ಬೆಲೆ ನೀಡುವುದರಿಂದ ರೈತರ ಸಂಕಷ್ಟಕ್ಕೆ ಒಂದಿಷ್ಟು ಸಹಾಯ ಆಗುತ್ತದೆ. ಗುರುವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಾವು ಬೆಳೆಗಾರರ ೧೦ ಜನ ಸದಸ್ಯರು, ಉಸ್ತುವಾರಿ ಸಚಿವರು ಸಭೆ ಏರ್ಪಡಿಸಲಾಗಿದೆ ಎಂದರು.

ಎಸ್‌ಪಿ ಬಿ.ನಿಖಿಲ್ ನೇತೃತ್ವದಲ್ಲಿ ಪಟ್ಟಣದಲ್ಲಿ ಬಿಗಿಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಮಾವು ಬೆಳಗಾರರ ಕ್ಷೇಮಾಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ ಪಾತಕೋಟೆ ನವೀನ್‌ಕುಮಾರ್, ಜಿ.ಪಂ.ಮಾಜಿ ಅಧ್ಯಕ್ಷ ತೂಪಲ್ಲಿ ಆರ್.ನಾರಾಯಣಸ್ವಾಮಿ, ಬಿಜೆಪಿ ಪಕ್ಷದ ಮಾಜಿ ಜಿಲ್ಲಾಧ್ಯಕ್ಷ ಕೆ.ಎನ್.ವೇಣುಗೋಪಾಲರೆಡ್ಡಿ, ಮಂಡಲ ಅಧ್ಯಕ್ಷ ರೋಣೂರು ಚಂದ್ರಶೇಖರ್, ಕೆಪಿಆರ್‌ಎಸ್ ಸಂಘದ ರಾಜ್ಯ ಉಪಾಧ್ಯಕ್ಷ ಪಿ.ಆರ್.ಸೂರ್ಯನಾರಾಯಣ, ಮುಖಂಡರಾದ ದೊಡಮಲದೊಡ್ಡಿ ಶ್ರೀನಾಥರೆಡ್ಡಿ , ಕದಿರಂಪಲ್ಲಿ ಶಶಿ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸದೃಢ ಆರೋಗ್ಯಕ್ಕೆ ಹಲ್ಲು ಸದೃಢವಾಗಿರಲಿ
ಬೆಳಗಾವಿ ಜಿಲ್ಲೆ ವಿಭಜನೆ ಇರಾದೆ ಸಿಎಂಗಿದೆ