ಮರ್ಜಿ ಲಲಿತ ಪ್ರಬಂಧದಲ್ಲಿ ದಲಿತ ಲೋಕದ ಒಳಿತು

KannadaprabhaNewsNetwork |  
Published : Jul 16, 2024, 12:37 AM IST
14ಡಿಡಬ್ಲೂಡಿ2ಡಾ.ಸದಾಶಿವ ಮರ್ಜಿಯವರ ಬರಿದೆ ಬಾರಿಸದಿರು’ ಲಲಿತ ಪ್ರಬಂಧಗಳ ಸಂಕಲನ ಲೋಕಾರ್ಪಣೆ ಧಾರವಾಡದಲ್ಲಿ ನಡೆಯಿತು.  | Kannada Prabha

ಸಾರಾಂಶ

ಬಾಧಿತವಾದ ಸಮುದಾಯದ ಹಿನ್ನೆಲೆಯಿರುವ ಡಾ. ಮರ್ಜಿಯವರ ಲಲಿತ ಪ್ರಬಂಧಗಳಲ್ಲಿ ದಲಿತ ಲೋಕದ ಒಳಿತು-ಕೆಡುಕು, ಅಸಡ್ಡೆ-ಅನಾಧಾರಗಳು ಸಹಜ ನಿರೂಪಣೆಯಿಂದ ಸಶಕ್ತವಾಗಿವೆ.

ಧಾರವಾಡ:

ಡಾ. ಸದಾಶಿವ ಮರ್ಜಿ ಅವರ ಲಲಿತ ಪ್ರಬಂಧಗಳು ಸ್ವ ಅನುಭವದ ಅಭಿವ್ಯಕ್ತಿಯಾಗಿದ್ದು, ತಾವು ಅನುಭವಿಸಿದ ತಾರತಮ್ಯ ಮತ್ತು ಜಾತಿ ಆಧಾರಿತ ಸಾಮಾಜಿಕ ಅಸಮಾನತೆ ಒಡಲೊಳಗಿಟ್ಟುಕೊಂಡ ದಲಿತ ಲೋಕದ ಕಪ್ಪುತನವನ್ನು ಅನಾವರಣ ಮಾಡಿವೆ ಎಂದು ಪಾಧ್ಯಾಪಕಿ ಡಾ. ಅನಸೂಯ ಕಾಂಬಳೆ ಹೇಳಿದರು.

ಕರ್ನಾಟಕ ವಿದ್ಯಾವರ್ಧಕ ಸಂಘದ ರಾ.ಹ. ದೇಶಪಾಂಡೆ ಭವನದಲ್ಲಿ ದಲಿತ ಸಾಹಿತ್ಯ ವೇದಿಕೆ, ಕ್ರಿಯಾ ಮಾಧ್ಯಮ ಮತ್ತು ಬಹಿಷ್ಕೃತ ಹಿತಕಾರಿಣಿ ಸಭಾ ಆಶ್ರಯ ದಲ್ಲಿ ಆಯೋಜಿಸಿದ್ದ ಡಾ. ಸದಾಶಿವ ಮರ್ಜಿ ಅವರ ಬರಿದೆ ಬಾರಿಸದಿರು ಲಲಿತ ಪ್ರಬಂಧಗಳ ಸಂಕಲನ ಲೋಕಾರ್ಪಣೆ ವೇಳೆ ಕೃತಿ ಪರಿಚಯಿಸಿದರು.

ಈ ಕೃತಿಯ ಎಲ್ಲ ಲಲಿತ ಪ್ರಬಂಧಗಳಲ್ಲಿ ಸಾಂಸ್ಕೃತಿಕ ಹಾಗೂ ದಲಿತ ಸಮುದಾಯದ ಅಸ್ಮಿತೆಯ ಹುಡುಕಾಟವಿದೆ. ಸಮಾಜದಲ್ಲಿಯ ಅಮಾನವೀಯತೆ, ಅಸಮಾನತೆಯಂತಹ ತಾರತಮ್ಯಗಳಿಂದ ಬಾಧಿತವಾದ ಶೋಷಿತ ಸಮುದಾಯಗಳು ಅನುಭವಿಸುವ ಜಾತಿ, ಕೀಳರಿಮೆಯ ನೋವು ಮತ್ತು ಸಂಕಟಗಳ ಸಹಜವಾಗಿ ಇಲ್ಲಿ ವ್ಯಕ್ತಗೊಂಡಿವೆ. ಹೀಗೆ ಬಾಧಿತವಾದ ಸಮುದಾಯದ ಹಿನ್ನೆಲೆಯಿರುವ ಡಾ. ಮರ್ಜಿಯವರ ಲಲಿತ ಪ್ರಬಂಧಗಳಲ್ಲಿ ದಲಿತ ಲೋಕದ ಒಳಿತು-ಕೆಡುಕು, ಅಸಡ್ಡೆ-ಅನಾಧಾರಗಳು ಸಹಜ ನಿರೂಪಣೆಯಿಂದ ಸಶಕ್ತವಾಗಿವೆ ಎಂದು ಅವರು ವಿವರಿಸಿದರು.

ಅಧ್ಯಕ್ಷತೆ ವಹಿಸಿದ್ದ ಬಸವರಾಜ ಕಟ್ಟಿಮನಿ ಟ್ರಸ್ಟ್ ಅಧ್ಯಕ್ಷ ಪ್ರೊ. ಮಲ್ಲಿಕಾರ್ಜುನ ಹಿರೇಮಠ, ತಮ್ಮ ಶಿಷ್ಯ ಮರ್ಜಿಯವರ ಸಾಹಿತ್ತಿಕ ಪಯಣಕ್ಕೆ ಸಂತಸ ವ್ಯಕ್ತಪಡಿಸಿದರು. ಕೃತಿ ಲೋಕಾರ್ಪಣೆಗೊಳಿಸಿದ ಪ್ರೊ. ಮಹೇಶ ತಿಪ್ಪಶೆಟ್ಟಿ ತಮ್ಮ ಮತ್ತು ಡಾ. ಮರ್ಜಿಯವರ ಗುರು-ಶಿಷ್ಯ ಸಂಬಂಧವನ್ನು ಮೆಲುಕು ಹಾಕಿದರು. ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ. ಚೆನ್ನಪ್ಪ ಅಂಗಡಿ, ಸಾಂದರ್ಭಿಕವಾಗಿ ಲಘು ಧಾಟಿಯ ಲಲಿತ ಪ್ರಬಂಧಗಳು ಗಂಭೀರ ವಿಷಯವನ್ನು ಲಾಲಿತ್ಯದ ಧಾಟಿಯಲ್ಲಿ ವಿಷಯ ಪ್ರಸ್ತುತಪಡಿಸುವಿಕೆಯ ಕಲೆ ಲೇಖಕರಿಗೆ ಕರಗತವಾಗಿದೆ ಎಂದರು.

ಡಾ. ಧನವಂತ ಹಾಜವಗೋಳ, ಡಾ. ಹನುಮಂತ ಮೇಲಿನಮನಿ, ವಸಂತರಾಜ್ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಕೆ.ಎಚ್. ಚೆನ್ನೂರ ಇದ್ದರು. ಇದೇ ವೇಳೆ ಪ್ರೊ. ಮಹೇಶ ತಿಪ್ಪಶೆಟ್ಟಿ ದಂಪತಿಗಳನ್ನು ಮಜಿ೯ ಗೌರವಿಸಿದರು. ಸಿದ್ಧರಾಮ ಹಿಪ್ಪರಗಿ ಸ್ವಾಗತಿಸಿದರು. ಪ್ರೊ. ಮಾರುತಿ ಚಲವಾದಿ ನಿರೂಪಿಸಿದರು. ಅನುರಾಗ ಸಾಂಸ್ಕೃತಿಕ ಬಳಗದ ಡಾ. ಅನಿಲ ಮೇತ್ರಿ ಮತ್ತು ಸಂಗಡಿಗರಿಂದ ಸಂಗೀತ ಕಾರ್ಯಕ್ರಮ ಜರುಗಿತು. ಡಾ. ಶಶಿಧರ ತೋಡಕರ, ಡಾ. ಮಂಜುಳಾ ಚಲವಾದಿ, ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ಶಂಕರ ಹಲಗತ್ತಿ, ಡಾ. ಅರುಣ ಕಲ್ಲೋಳಿಕರ, ಡಾ. ಪ್ರಕಾಶ ಮಲ್ಲಿಗವಾಡ, ಡಾ. ಲಿಂಗರಾಜ ಅಂಗಡಿ, ಗಿರೀಶ ಕಾಂಬಳೆ ಇದ್ದರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...