ಹಲವು ಬಗೆಯ ಪಕ್ಷಿಗಳಿಗೆ ಹಾಗೂ ಜಲಚರಗಳಿಗೆ ಆಶ್ರಯ ನೀಡಿದ್ದ ಗೊಟ್ಟಿಗೆರೆ ಕೆರೆ ಅಭಿವೃದ್ಧಿ ಶೂನ್ಯ, ಗಲೀಜು ಹೇರಳ!

KannadaprabhaNewsNetwork |  
Published : Aug 27, 2024, 01:43 AM ISTUpdated : Aug 27, 2024, 08:56 AM IST
ಒಳಚರಂಡಿ ನೀರು ಕೆರೆಯ ಒಡಲು ಸೇರಿ ಗಬ್ಬೆದ್ದು ನಾರುತ್ತಿರುವ ಗೊಟ್ಟಿಗೆರೆ ಕೆರೆ. | Kannada Prabha

ಸಾರಾಂಶ

ನಾನು ಬಣ್ಣ ಬಣ್ಣದ ಹಲವು ಬಗೆಯ ಪಕ್ಷಿಗಳಿಗೆ ಹಾಗೂ ಜಲಚರಗಳಿಗೆ ಆಶ್ರಯ ನೀಡಿದ್ದೆ. ಸ್ವಚ್ಛಂದವಾಗಿ ಸ್ವಾಸ್ಥ್ಯ ಗಾಳಿ ಸೇವಿಸಲು ನಿತ್ಯ ನೂರಾರು ಜನರು ನನ್ನ ಬಳಿಗೆ ಬರುತ್ತಿದ್ದರು. ಆದರೆ ಇಂದು ನಾನು ಮಲಿನಗೊಂಡಿದ್ದೇನೆ. ನನ್ನ ಬಳಿ ಯಾರು ಬರುತ್ತಿಲ್ಲ. ನನ್ನ ನೋಡಿ ಅಸಹ್ಯಪಡುತ್ತಿದ್ದಾರೆ.

ಎಂ.ನರಸಿಂಹಮೂರ್ತಿ 

ಬೆಂಗಳೂರು ದಕ್ಷಿಣ : ನಾನು ಬಣ್ಣ ಬಣ್ಣದ ಹಲವು ಬಗೆಯ ಪಕ್ಷಿಗಳಿಗೆ ಹಾಗೂ ಜಲಚರಗಳಿಗೆ ಆಶ್ರಯ ನೀಡಿದ್ದೆ. ಸ್ವಚ್ಛಂದವಾಗಿ ಸ್ವಾಸ್ಥ್ಯ ಗಾಳಿ ಸೇವಿಸಲು ನಿತ್ಯ ನೂರಾರು ಜನರು ನನ್ನ ಬಳಿಗೆ ಬರುತ್ತಿದ್ದರು. ಆದರೆ ಇಂದು ನಾನು ಮಲಿನಗೊಂಡಿದ್ದೇನೆ. ನನ್ನ ಬಳಿ ಯಾರು ಬರುತ್ತಿಲ್ಲ. ನನ್ನ ನೋಡಿ ಅಸಹ್ಯಪಡುತ್ತಿದ್ದಾರೆ. ಮೂಗು ಮುಚ್ಚಿಕೊಂಡು ನನ್ನ ನೋಡದೆ ಹೋಗುತ್ತಿದ್ದಾರೆ. ನನ್ನನ್ನು ರಕ್ಷಿಸಿ..?ಈ ಆರ್ತನಾದ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗೊಟ್ಟಿಗೆರೆ ವಾರ್ಡ್‌ನಲ್ಲಿರುವ ಗೊಟ್ಟಿಗೆರೆ ಕೆರೆಯ ಬಳಿ ಸುಳಿದಾಡಿದಾಗ ಕೇಳಿಸದೆ ಇರದು!. ಕೆರೆ ಪೂರ್ಣ ಕಪ್ಪು ಬಣ್ಣಕ್ಕೆ ತಿರುಗಿ ಮಲಿನಗೊಂಡು ಗಬ್ಬೆದ್ದು ನಾರುತ್ತಿದೆ. ಸುತ್ತಮುತ್ತಲಿನ ಪ್ರದೇಶದ ಜನರಿಗೆ ಜೀವ ಜಲದಂತಿದ್ದ ಕೆರೆ ಇಂದು ಸೊಳ್ಳೆ, ಕ್ರೀಮಿ ಕೀಟಗಳ ಆವಾಸ ಸ್ಥಾನವಾಗಿ ಡೆಂಘೀ, ಮಲೇರಿಯಾದಂತಹ ಮಹಾಮಾರಿ ರೋಗರುಜಿನಗಳ ಭೀತಿ ಕಾಡುತ್ತಿದೆ.

ಬಿಬಿಎಂಪಿ ಹಾಗೂ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಸಮನ್ವಯತೆಯ ಕೊರೆತೆಯಿಂದ ಅಭಿವೃದ್ದಿ ಹೊಂದಿದ್ದ ಕೆರೆ ಕಲುಷಿತಗೊಂಡಿದೆ. ಇದರ ಸುತ್ತಮುತ್ತಲಿನ ಜನರು ಆಮ್ಲಜನಕ ಕಲುಷಿತಗೊಂಡು ವಿಷಯುಕ್ತ ಗಾಳಿ ಸೇವಿಸುತ್ತಿದ್ದಾರೆ. ಬಸವನಪುರ ಹಾಗೂ ಅಕ್ಕಪಕ್ಕದ ಬಡಾವಣೆಗಳ ತ್ಯಾಜ್ಯದ ನೀರಿನ ಪೈಪ್ ಕೆರೆಯ ದಂಡೆಯ ಮೇಲೆ ಹಾದುಹೋಗುವ ಸಂದರ್ಭದಲ್ಲಿ ಕೆಲವೆಡೆ ಪೈಪ್ ಒಡೆದು ಕೆರೆಯ ಒಡಲಿಗೆ ಸೇರಿದೆ. ಅಲ್ಲದೆ ಅಲ್ಲಿನ ಅಕ್ಕಪಕ್ಕದಲ್ಲಿರುವ ವಸತಿ ಸಮುಚ್ಚಯಗಳು ಕೆರೆಗಳಿಗೆ ತ್ಯಾಜ್ಯ ನೀರು ಬಿಡುತ್ತಿದೆ ಎಂದು ಬಿಬಿಎಂಪಿ ನೋಟಿಸ್ ಮಾತ್ರ ನೀಡಿ ಕೈ ತೊಳೆದುಕೊಂಡಿದೆ.

ಕೆರೆ ಏರಿ ಮೇಲಿನ ಕಲ್ಲುಹಾಸು ಕೆರೆಯ ಪಾಲಾಗಿವೆ. ಕೆಸರಿನ ಗದ್ದೆಯಂತಾಗಿರುವ ಪಾದಚಾರಿ ಮಾರ್ಗದಲ್ಲಿ ನಡೆದಾಡುವುದು ದುಸ್ತರವಾಗಿದೆ. ಕುಡುಕರ ಜೂಜುಕೋರರ ಅನೈತಿಕ ಚಟುವಟಿಕೆಗಳ ತಾಣವಾಗಿದೆ. ಕಟ್ಟಡ ಹಾಗೂ ವೈದ್ಯಕೀಯ ತ್ಯಾಜ್ಯದ ಕಸವನ್ನು ತಂದು ಸುರಿಯಲಾಗುತ್ತಿದೆ. ಕೆರೆಯನ್ನು ಅಭಿವೃದ್ದಿಪಡಿಸಿ ಪುನಶ್ಚೇತನಗೊಳಿಸಲು ಬಿಡುಗಡೆಯಾದ ಸುಮಾರು 11 ಕೋಟಿ ರು.ಗೂ ಹೆಚ್ಚು ಅನುದಾನವನ್ನು ಸದ್ಬಳಕೆ ಮಾಡಿಕೊಳ್ಳುವಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಸಾಚಾತನ ಎದ್ದು ಕಾಣುತ್ತದೆ.

ಒಂದೆಡೆ ಕೆರೆಯ ಅಭಿವೃದ್ದಿಯ ಅನುದಾನ ಮಲಿನದ ಗುಂಡಿಗೆ ಸೇರಿದ್ದರೆ, ಮತ್ತೊಂದೆಡೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಿಂದ ಕೆರೆಯ ಮೂಲಕ ಪೈಪ್ ಅಳವಡಿಸುವ ಕಾಮಗಾರಿ ಹಲವು ತಿಂಗಳುಗಳೇ ಕಳೆದರೂ ಮಂದಗತಿಯಲ್ಲಿ ಸಾಗುತ್ತಿರುವ ಕಾರಣ ಕೆರೆಯನ್ನು ಸಂಪೂರ್ಣ ಅಗೆದು ಬಿಡಲಾಗಿದೆ. ಕೆರೆಯ ಸುತ್ತಲೂ ನೆಟ್ಟಿದ್ದ 200ಕ್ಕೂ ಹೆಚ್ಚು ಗಿಡಗಳ ಸುಳಿವೆ ಇಲ್ಲದಾಗಿದೆ.ಬಿ.ಡಬ್ಲ್ಯೂ.ಎಸ್.ಎಸ್.ಬಿ ವತಿಯಿಂದ ಕೆರೆಯ ದಂಡೆಯ ಮೂಲಕ ಒಳಚರಂಡಿ ಪೈಪ್ ಅಳವಡಿಸುವ ಕಾಮಗಾರಿ ನಡೆಸಲಾಗುತ್ತಿದೆ. ಕೆರೆಯ ಕಲುಷಿತ ನೀರನ್ನು ಜಲಮಂಡಳಿಯವರೇ ಪಂಪ್ ಮಾಡಿ ಶುದ್ದಿಕರಿಸಬೇಕು. ಬಿಬಿಎಂಪಿ ವತಿಯಿಂದ ಯಾವುದೇ ಸಮಸ್ಯೆಯಿಲ್ಲ.

- ಇಂದ್ರಾಣಿ , ಕಾರ್ಯಪಾಲಕ ಅಭಿಯಂತರರು ಬಿಬಿಎಂಪಿ ಕೆರೆ ವಿಭಾಗ

ಕೆರೆಗೆ ಕಲುಷಿತ ನೀರು ಸೇರ್ಪಡೆ ತಡೆಗಟ್ಟಲು ಏರಿ ದಂಡೆಯ ಮೇಲೆ ಪ್ರತ್ಯೇಕ ಕಾಮಗಾರಿ ನಡೆಸಲಾಗುತ್ತಿದೆ. ಶೀಘ್ರದಲ್ಲಿಯೇ ಕಾಮಗಾರಿ ಪೂರ್ಣಗೊಳಲಿದ್ದು,ಕೆರೆಗೆ ಒಳಚರಂಡಿ ನೀರು ಸೇರುವುದು ನಿಲ್ಲಲಿದೆ.ಪ್ರಸ್ತುತ ಕಾಮಗಾರಿ ಒಂದು ಭಾಗ ಮುಗಿದಿದೆ.ಕೆರೆ ವಿಭಾಗದವರು ಪೂರ್ಣಗೊಂಡಿರುವ ಭಾಗದಲ್ಲಿ ಅಭಿವೃದ್ಧಿ ಕಾರ್ಯ ನಡೆಸಬಹುದು - ರಂಗಪ್ಪ, ಎಇಇ,ಬಿ.ಡಬ್ಲ್ಯೂ.ಎಸ್.ಎಸ್.ಬಿ .

ಸರ್ಕಾರ ಮತ್ತು ಬಿಬಿಎಂಪಿ ಅಭಿವೃದ್ದಿಗಾಗಿ ಹತ್ತಾರು ಕೋಟಿ ಹಣ ಬಿಡುಗಡೆ ಮಾಡಿದರೂ, ಅಭಿವೃದ್ದಿ ಮರೀಚಿಕೆಯಾಗಿದೆ. ಕೆರೆಯ ನೋಟವೇ ಎಲ್ಲವನ್ನು ವಿವರಿಸುತ್ತದೆ. ಪರಿಸರ ಹಾಗೂ ಅಂತರ್ಜಲದ ಬಗ್ಗೆ ಮುಂದಿನ ತಲೆಮಾರಿಗೆ ಉಪಯೋಗವಾಗುವ ರೀತಿಯಲ್ಲಿ ಕೆಲಸ ಮಾಡುವಂತಾಗಬೇಕಾಗಿದೆ.

- ನಂದಗೋಪಾಲ,ಗೊಟ್ಟಿಗೆರೆ ನಿವಾಸಿ.

PREV

Recommended Stories

ಶಾಸಕ ಸೈಲ್‌ ಮನೇಲಿದ್ದ 6.75 ಕೇಜಿ ಚಿನ್ನ ಜಪ್ತಿ!
ಬೆಂಗಳೂರಿಂದ 400 ಕಾರುಗಳಲ್ಲಿಂದು ಬಿಜೆಪಿ ಶಾಸಕನ ಧರ್ಮಸ್ಥಳ ಚಲೋ!