ಮಾಗಡಿ: ರಾಜ್ಯದ ಲೋಕಾಯುಕ್ತ ಸಂಸ್ಥೆ ಹಾಗೂ ಕಾನೂನಿನ ಬಗ್ಗೆ ಸಾರ್ವಜನಿಕರಿಗೆ ವ್ಯಾಪಕ ಅರಿವಿದ್ದು, ನಾಗರಿಕರ ಉತ್ತಮ ಜೀವನಕ್ಕೆ ಹಾಗೂ ಅವರ ಹಕ್ಕುಗಳನ್ನು ರಕ್ಷಿಸಲು ಸರ್ಕಾರಿ ಇಲಾಖೆಗಳು ಎಚ್ಚರಿಕೆಯಿಂದ ಕೆಲಸ ನಿರ್ವಹಿಸಬೇಕು ಎಂದು ರಾಜ್ಯದ ಉಪ ಲೋಕಾಯುಕ್ತರಾದ ನ್ಯಾಯಮೂರ್ತಿ ಕೆ.ಎನ್. ಫಣಿಂದ್ರ ಅವರು ಹೇಳಿದರು.
ಪಟ್ಟಣದ ಡಾ.ಶಿವಕುಮಾರ ಸ್ವಾಮಿಗಳ ಸಭಾಂಗಣದಲ್ಲಿ ಲೋಕಾಯುಕ್ತ ಪ್ರಕರಣಗಳ ವಿಚಾರಣಾ ಸಭೆಯಲ್ಲಿ ಲೋಕಾಯುಕ್ತ ಪ್ರಕರಣಗಳ ವಿಚಾರಣೆಗೂ ಮುನ್ನ ಮಾತನಾಡಿದ ಅವರು, ತಾವು ಉಪ ಲೋಕಾಯುಕ್ತರಾಗಿ ಅಧಿಕಾರ ಸ್ವೀಕರಿಸಿದಾಗ ಲೋಕಾಯುಕ್ತ ಸಂಸ್ಥೆಯಲ್ಲಿ 2,500 ಪ್ರಕರಣಗಳಿದ್ದವು. ಇದೀಗ ಎರಡೂವರೆ ವರ್ಷಗಳಲ್ಲಿ 25,000 ಪ್ರಕರಣಗಳು ದಾಖಲಾಗಿವೆ. ಅಂದರೆ ಲೋಕಾಯುಕ್ತ ಸಂಸ್ಥೆ ಬಗ್ಗೆ ಸಾರ್ವಜನಿಕರಿಗೆ ವ್ಯಾಪಕ ಅರಿವಿದೆ ಹಾಗೂ ಆ ಸಂಸ್ಥೆಯ ಕಾನೂನುಗಳ ಬಗ್ಗೆ ಜಾಗೃತಿ ಇದೆ ಎಂದು ಅರ್ಥ ಎಂದರು.ರಾಜ್ಯದಲ್ಲಿ 1984ರಲ್ಲಿ ಲೋಕಾಯುಕ್ತ ಕಾನೂನು ರಚನೆಯಾಯಿತು. ಅದಕ್ಕೂ ಹಿಂದೆ ವಿವಿಧ ಇಲಾಖೆಗಳಲ್ಲಿ ಕೇಳಿ ಬರುತ್ತಿದ್ದ ಭ್ರಷ್ಟಾಚಾರ ಪ್ರಕರಣಗಳ ವಿಚಾರಣೆಗಳನ್ನು ಆಂತರಿಕವಾಗಿ ಮಾಡಲಾಗುತ್ತಿತ್ತು. ಆಗ ನಿಷ್ಪಕ್ಷಪಾತ ತನಿಖೆ ನಡೆಯಬೇಕೆನ್ನುವ ಕೂಗು ಕೇಳಿ ಬಂದದ್ದರಿಂದ ಸ್ವಾಯತ್ತ ಲೋಕಾಯುಕ್ತ ಸಂಸ್ಥೆಯನ್ನು ರೂಪಿಸಲಾಯಿತು ಎಂದು ತಿಳಿಸಿದರು.
ಎಲ್ಲಿ ಸಾರ್ವಜನಿಕರಿಗೆ, ಸರ್ಕಾರಿ ಅಧಿಕಾರಿಗಳು ದೊರಕಿಸಿಕೊಡಬೇಕಾದ ಹಕ್ಕು, ಸವಲತ್ತುಗಳು ನೀಡದಿರುವ ಬಗ್ಗೆ ಸಾರ್ವಜನಿಕರಿಗೆ ತೊಂದರೆ ಆದಲ್ಲಿ ಅಲ್ಲಿ ದುರಾಡಳಿತ ಇದೆ ಎಂದರ್ಥ. ಸ್ವಾಯತ್ತ ಲೋಕಾಯುಕ್ತ ಸಂಸ್ಥೆ ಅಧಿಕಾರಕ್ಕೆ ಬಂದ ನಂತರ ಆಗಬೇಕಾಗಿರುವ ಕೆಲಸಗಳ ಬಗ್ಗೆ ಮಾಹಿತಿ ನೀಡಬೇಕಾದದ್ದು ಸರ್ಕಾರಿ ನೌಕರರ ಕರ್ತವ್ಯ. ಈ ದಿಸೆಯಲ್ಲಿ ಜಿಲ್ಲಾಧಿಕಾರಿ ಹಾಗೂ ಜಿಪಂ ಸಿಇಒ ಕಚೇರಿ ಸೇರಿದಂತೆ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿಯೂ ಲೋಕಾಯುಕ್ತ ಸಂಸ್ಥೆ ಹಾಗೂ ಅವರು ಸಾರ್ವಜನಿಕರಿಗೆ ನೀಡಬಹುದಾದ ಸೌಲಭ್ಯಗಳ ಬಗ್ಗೆ ನಾಮಫಲಕ ಹಾಕಬೇಕು. ಆ ಮೂಲಕ ಸಾರ್ವಜನಿಕರಿಗೆ ಇನ್ನೂ ವ್ಯಾಪಕ ಅರಿವಾಗುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.ಲೋಕಾಯುಕ್ತ ಸಂಸ್ಥೆಯಲ್ಲಿ ಸರ್ಕಾರಿ ನೌಕರರ ಮೇಲೆ ದೂರು ದಾಖಲಾದಲ್ಲಿ ಗಾಬರಿ ಪಟ್ಟಿಕೊಳ್ಳುವ ಅಥವಾ ಹೆದರಿಕೊಳ್ಳುವ ಅಗತ್ಯವಿಲ್ಲ. ದೂರಿಗೆ ಸಂಬಂಧಿಸಿದಂತೆ ಕಾನೂನಿನಲ್ಲಿ ಯಾವ ತೊಡಕಿದೆ ಎಂಬುದನ್ನು ಸರ್ಕಾರಿ ನೌಕರರು ಲೋಕಾಯುಕ್ತ ಸಂಸ್ಥೆಗೆ ಮನವರಿಕೆ ಮಾಡಿಕೊಡಬೇಕು. ಎಲ್ಲರಿಗೂ ಕೂಡ ಉತ್ತಮ ಜೀವನ ಕಲ್ಪಿಸಿ ಕೊಡುವ ಆಶಯ ಸಂವಿಧಾನ, ಕಾನೂನು ಹಾಗೂ ಎಲ್ಲಾ ಸರ್ಕಾರಗಳದ್ದು ಆಗಿದೆ, ಈ ದಿಸೆಯಲ್ಲಿ ನಾಗರಿಕರಿಗೆ ಅನುಕೂಲವಾಗುವ ಹಾಗೆ ಸಮಾಜಕ್ಕೆ ಸೇವೆ ಸಲ್ಲಿಸುವ ಮೂಲಕ ಕರ್ತವ್ಯವನ್ನು ನಿಭಾಯಿಸಬೇಕು ಎಂದವರು ಹೇಳಿದರು.
ಈ ಸಂದರ್ಭದಲ್ಲಿ ಸಿವಿಲ್ ನ್ಯಾಯಾಧೀಶರು ಹಾಗೂ ಉಪ ಲೋಕಾಯುಕ್ತರ ಆಪ್ತ ಕಾರ್ಯದರ್ಶಿ ಕಿರಣ್ ಪಿ.ಎಂ.ಪಾಟೀಲ್, ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ವಿಚಾರಣೆಗಳು-5ರ ಉಪನಿಬಂಧಕರಾದ ಲಕ್ಷ್ಮೀ ನಿಂಗಪ್ಪ ಗರ್ಗ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿಗಳಾದ ಸವಿತಾ ಪಿ.ಆರ್., ಜಿಲ್ಲಾಧಿಕಾರಿ ಯಶವಂತ ಗುರುಕರ್, ಜಿಪಂ ಸಿಇಒ ಅನ್ಮೋಲ್ ಜೈನ್, ಅಪರ ಜಿಲ್ಲಾಧಿಕಾರಿ ಆರ್.ಚಂದ್ರಯ್ಯ, ಲೋಕಾಯುಕ್ತ ಎಸ್ಪಿ ಸ್ನೇಹ ಪಿ.ವಿ., ಉಪವಿಭಾಗಾಧಿಕಾರಿ ಬಿನೋಯ್ ಪಿ.ಕೆ., ಪೊಲೀಸ್ ಅಧಿಕಾರಿಗಳು ಇತರರಿದ್ದರು.