ನೂರಾರು ಸದಸ್ಯರನ್ನು ಅನರ್ಹಗೊಳಿಸಿ ಏಕ ಪಕ್ಷಿಯ ನಿರ್ಧಾರ
ವಾಮ ಮಾರ್ಗಗಳ ಮೂಲಕ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ದೇವೇಂದ್ರ ಅಕ್ರಮವಾಗಿ ಚುನಾವಣೆ ನಡೆಸಲು ಮುಂದಾಗಿದ್ದಾರೆ ಎಂದು ಜಿಲ್ಲಾಧ್ಯಕ್ಷ ಸ್ಥಾನದ ಅಭ್ಯರ್ಥಿ ಹೇಮಂತ್ ಗಂಭೀರವಾಗಿ ಆರೋಪಿಸಿದ್ದಾರೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನೂರಾರು ಸದಸ್ಯರನ್ನು ಅನರ್ಹಗೊಳಿಸಿ ಏಕ ಪಕ್ಷಿಯ ನಿರ್ಧಾರ ಕೈಗೊಂಡು ಮತ ಪಟ್ಟಿಯಲ್ಲಿ ಹೆಸರುಗಳೇ ಇಲ್ಲದಂತೆ ಮಾಡಿದ್ದಾರೆ. ಅಲ್ಲದೆ ಚುನಾವಣೆ ವೇಳೆ ನಿರ್ದೇಶಕರಿಗೆ ಆಮಿಷ, ಬೆದರಿಕೆ ಒಡ್ಡಿದ್ದು, ಹತಾಶರಾಗಿ ನಮ್ಮ ವಿರುದ್ಧ ಆಣೆ ಪ್ರಮಾಣ ಹಾಗೂ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಹೇಳಿದರು.ಮತದಾರರ ಕರಡು ಪಟ್ಟಿ ಪ್ರಕಟ, ಆಕ್ಷೇಪಣೆ ಸಲ್ಲಿಕೆ, ಅಂತಿಮ ಪಟ್ಟಿ ಪ್ರಕಟ, ಇದ್ಯಾವುದನ್ನು ನಿಯಮ ಬದ್ಧವಾಗಿ ಮಾಡಿಲ್ಲ, ತಮ್ಮ ಸ್ಪರ್ಧೆಗೆ ಅನುಕೂಲವಾಗುವ ರೀತಿಯಲ್ಲಿ ಮತದಾರರ ಪಟ್ಟಿ ಸಿದ್ಧಪಡಿಸಿದ್ದಾರೆ. ಸ್ಪರ್ಧಾ ಆಕಾಂಕ್ಷಿಗಳನ್ನು ಚುನಾವಣಾ ಕಣದಿಂದ ಹೊರಗಿಡಲು ಅವರನ್ನು ಮತದಾರರ ಪಟ್ಟಿಯಿಂದ ಕೈಬಿಟ್ಟಿದ್ದಾರೆ ಎಂದು ಆರೋಪಿಸಿದರು.
ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಎನ್‌ಪಿಎಸ್ ನೌಕರರು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಇತ್ತ ಚಿಕ್ಕಮಗಳೂರಿನಲ್ಲಿ ಸಂಘದ ಆಶ್ರಯದಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಸುವ ಮೂಲಕ ಹೋರಾಟದ ದಿಕ್ಕು ಬದಲಾಯಿಸಲು ಯತ್ನಿಸಿದ್ದರು. ಇದನ್ನು ಎನ್‌ಪಿಎ ನೌಕರರು ಮರೆತಿಲ್ಲ ಎಂದು ಹೇಳಿದರು.
ಇಡೀ ಚುನಾವಣೆ ಪ್ರಕ್ರಿಯೆ ಬಗ್ಗೆ ಸಾಕಷ್ಟು ಅನುಮಾನ ಇದ್ದು, ಚುನಾವಣಾ ಅಧಿಕಾರಿಗೆ ಈಗಾಗಲೇ ದೂರು ನೀಡಿದ್ದೇವೆ. ಆದರೂ ಚುನಾವಣೆಗೆ ಇನ್ನೇನು 2 ದಿನ ಬಾಕಿ ಇರುವಂತೆ ಮತ್ತಷ್ಟು ಅಕ್ರಮ ನಡೆಯುವ ಸಂಶಯವಿದೆ. ಹಾಗಾಗಿ ಈ ಬಗ್ಗೆ ಚುನಾವಣಾ ಅಧಿಕಾರಿ ಗಮನಹರಿಸಬೇಕು ಎಂದು ಆಗ್ರಹಿಸಿದರು.
ಪೋಟೋ ಫೈಲ್ ನೇಮ್ 2 ಕೆಸಿಕೆಎಂ 8