ಡಿ.31 ರಂದು ಕನ್ನಡ ಉಪನ್ಯಾಸಕ ಚಲುವೇಗೌಡರು ವಯೋ ನಿವೃತ್ತಿ

KannadaprabhaNewsNetwork | Published : Dec 3, 2024 12:34 AM

ಸಾರಾಂಶ

ವಿಜಯ ಪದವಿ ಪೂರ್ವ ಕಾಲೇಜು ಕನ್ನಡ ಉಪನ್ಯಾಸಕ ಹಾಗೂ ಕಸಾಪ ಮಾಜಿ ಅಧ್ಯಕ್ಷ ಎನ್.ಚಲುವೇಗೌಡರು ಡಿ.31ರಂದು ವಯೋ ನಿವೃತ್ತಿ ಹೊಂದುತ್ತಿರುವ ಹಿನ್ನೆಲೆಯಲ್ಲಿ 2025ರ ಜನವರಿ 5ರಂದು ಅದ್ಧೂರಿ ಅಭಿನಂದನಾ ಸಮಾರಂಭ ಆಯೋಜಿಸಲು ಅಭಿನಂದನಾ ಸಮಿತಿ ನಿರ್ಧರಿಸಿದೆ.

ಕನ್ನಡಪ್ರಭ ವಾರ್ತೆ ಪಾಂಡವಪುರ

ವಿಜಯ ಪದವಿ ಪೂರ್ವ ಕಾಲೇಜು ಕನ್ನಡ ಉಪನ್ಯಾಸಕ ಹಾಗೂ ಕಸಾಪ ಮಾಜಿ ಅಧ್ಯಕ್ಷ ಎನ್.ಚಲುವೇಗೌಡರು ಡಿ.31ರಂದು ವಯೋ ನಿವೃತ್ತಿ ಹೊಂದುತ್ತಿರುವ ಹಿನ್ನೆಲೆಯಲ್ಲಿ 2025ರ ಜನವರಿ 5ರಂದು ಅದ್ಧೂರಿ ಅಭಿನಂದನಾ ಸಮಾರಂಭ ಆಯೋಜಿಸಲು ಅಭಿನಂದನಾ ಸಮಿತಿ ನಿರ್ಧರಿಸಿದೆ.

ಪಟ್ಟಣದ ಕನ್ನಡ ಸಾಹಿತ್ಯ ಭವನದಲ್ಲಿ ಎನ್.ಚಲುವೇಗೌಡ ಅಭಿನಂದನಾ ಸಮಿತಿ ಸಭೆಯಲ್ಲಿ ಚಲುವೇಗೌಡರ ವಿದ್ಯಾರ್ಥಿ ಮಿತ್ರರು ಸಮಾರಂಭದ ರೂಪರೇಷೆಗಳನ್ನು ಕುರಿತು ವಿಸ್ತ್ರತವಾಗಿ ಚರ್ಚಿಸಿ, ಸಮಾರಂಭವನ್ನು ಪಟ್ಟಣದ ಟಿಎಪಿಸಿಎಂಎಸ್ ರೈತ ಸಭಾಂಗಣದಲ್ಲಿ ಆಯೋಜಿಸುವುದು, ಕಾರ್ಯಕ್ರಮದ ಪೂರ್ವ ಸಿದ್ಧತೆ ಕೈಗೊಳ್ಳಲು ಅಭಿಪ್ರಾಯ ಸಂಗ್ರಹಿಸಲಾಯಿತು.

ಚಲುವೇಗೌಡರ ಕುರಿತು ಅಭಿನಂದನೆ ಭಾಷಣ ಮಾಡಲು ಮಂಡ್ಯದ ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶ್ ಗೌಡ ಅಥವಾ ಗುಬ್ಬಿಗೂಡು ರಮೇಶ್ ಅವರನ್ನು ಆಹ್ವಾನಿಸಲು ಚರ್ಚಿಸಲಾಯಿತು. ಅನೇಕ ಗಣ್ಯರನ್ನು ಆಹ್ವಾನಿಸುವುದು, ಎನ್.ಚಲುವೇಗೌಡರ ಕುರಿತಂತೆ ಹೊರತರುವ ಅಭಿನಂದನಾ ಗ್ರಂಥದ ಸಿದ್ಧತೆ ಯಾವ ಹಂತದವರೆಗೆ ಬಂದಿದೆ ಎಂಬುದರ ಬಗೆಗೆ ಚರ್ಚೆ ನಡೆಸಲಾಯಿತು.

ಡಿ.15ರೊಳಗಾಗಿ ಅಭಿನಂದನಾ ಸಮಾರಂಭದ ಆಹ್ವಾನ ಪತ್ರಿಕೆ ಸಿದ್ಧತೆಗೆ ಕ್ರಮ ಕೈಗೊಳ್ಳಲು ತೀರ್ಮಾನಿಸಲಾಯಿತು. ಈ ಕುರಿತು ಶಾಸಕರೊಂದಿಗೆ ಚರ್ಚಿಸಲು ಮುಂದಿನ ಭಾನುವಾರ ಅವರನ್ನು ಭೇಟಿ ಮಾಡಲು ನಿರ್ಧರಿಸಲಾಯಿತು. ಸಮಾರಂಭದ ಆರ್ಥಿಕ ಕ್ರೋಢಿಕರಣಕ್ಕೆ ಸೋಮವಾರದಿಂದಲೇ ಕಾರ್ಯ ಪ್ರವೃತ್ತರಾಗಲು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.

ಈ ವೇಳೆ ಎನ್.ಚಲುವೇಗೌಡರ ಹಳೆಯ ವಿದ್ಯಾರ್ಥಿಗಳಾದ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಚಂದ್ರಶೇಖರ್, ಶಿಕ್ಷಕರಾದ ಶಂಭೂನಹಳ್ಳಿ ರವಿಕುಮಾರ್, ಹರಳಹಳ್ಳಿ ಪುಟ್ಟರಾಜು, ದೊಡ್ಡಬ್ಯಾಡರಹಳ್ಳಿ, ಎಚ್.ಆರ್‌.ಧನಂಜಯ, ಎಚ್.ಸಿ.ಧನಂಜಯ, ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ರಾಗಿಮುದ್ದನಹಳ್ಳಿ ನಾಗೇಶ್, ಕಸಾಪ ಅಧ್ಯಕ್ಷ ಮೇನಾಗ್ರ ಪ್ರಕಾಶ್, ರೂಪಾಶ್ರಿ, ಹಿರೇಮರಳಿ ಪಾರ್ಥ, ಬಿಇಡಿ ಕಾಲೇಜಿನ ಪ್ರಾಂಶುಪಾಲ ಸೋಮಶೇಖರ್, ಪಿಡಿಒ ಪಿ.ಸಿ.ಕುಮಾರ್ ಇತರರು ಸಭೆಯಲ್ಲಿ ಇದ್ದರು.

Share this article