ಕೆಪಿಎಸ್‌ಸಿ ಭ್ರಷ್ಟಾಚಾರ ತಡೆಯುವಲ್ಲಿ ಸರ್ಕಾರ ವಿಫಲ

KannadaprabhaNewsNetwork |  
Published : Jul 29, 2026, 02:00 AM IST
ಕೆಪಿಎಸ್‌ಸಿ ಭ್ರಷ್ಟಾಚಾರ ಖಂಡಿಸಿ ಮಂಗಳವಾರ ಧಾರವಾಡದಲ್ಲಿ ಸಮಾನ ಮನಸ್ಕರ ವೇದಿಕೆ ವತಿಯಿಂದ ಪ್ರತಿಭಟನೆ ನಡೆಯಿತು. | Kannada Prabha

ಸಾರಾಂಶ

ಕೆಪಿಎಸ್‌ಸಿ ರಾಜ್ಯದ ಲಕ್ಷಾಂತರ ಬಡ, ಗ್ರಾಮೀಣ ಹಾಗೂ ಯುವಜನರ ಭವಿಷ್ಯದ ಭರವಸೆ ಆಗಬೇಕಿತ್ತು. ಆದರೆ, ಭ್ರಷ್ಟಾಚಾರ ನಡೆಸುವ ಕೇಂದ್ರವಾಗಿದೆ.

ಧಾರವಾಡ:

ರಾಜ್ಯ ಕಾಂಗ್ರೆಸ್‌ ಸರ್ಕಾರದ ನಿರ್ಲಕ್ಷ್ಯದಿಂದ ಕರ್ನಾಟಕ ಲೋಕಸೇವಾ ಆಯೋಗ ಭ್ರಷ್ಟಾಚಾರ, ಸ್ವಜನಪಕ್ಷಪಾತ, ಲಂಚಗುಳಿತನ ಮತ್ತು ಕಳಪೆ ನಿರ್ವಹಣೆಯ ಅಡ್ಡವಾಗಿದೆ. ಕೆಪಿಎಸ್‌ಸಿ ಭ್ರಷ್ಟಾಚಾರ ತಡೆಯುವ ಬದಲು ಸರ್ಕಾರ ಮೌನಕ್ಕೆ ಶರಣಾಗಿದೆ ಎಂದು ಸಮಾನ ಮನಸ್ಕರ ವೇದಿಕೆ ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿತು.

ಈ ವೇಳೆ ಮಾತನಾಡಿದ ವೇದಿಕೆ ಅಧ್ಯಕ್ಷ ಮೋಹನ ರಾಮದುರ್ಗ, ಕೆಪಿಎಸ್‌ಸಿ ರಾಜ್ಯದ ಲಕ್ಷಾಂತರ ಬಡ, ಗ್ರಾಮೀಣ ಹಾಗೂ ಯುವಜನರ ಭವಿಷ್ಯದ ಭರವಸೆ ಆಗಬೇಕಿತ್ತು. ಆದರೆ, ಭ್ರಷ್ಟಾಚಾರ ನಡೆಸುವ ಕೇಂದ್ರವಾಗಿದೆ. ಕೆಪಿಎಸ್‌ಸಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ ತಮ್ಮ ಇಬ್ಬರು ಪುತ್ರಿಯರನ್ನು ''''''''ಕೈಗಾರಿಕಾ ವಿಸ್ತರಣಾಧಿಕಾರಿ'''''''' ಹುದ್ದೆಗೆ ಅಕ್ರಮವಾಗಿ ಆಯ್ಕೆ ಮಾಡಲು ಅಧಿಕಾರ ದುರುಪಯೋಗ ಎಸಗಿದ್ದಾರೆ. ವಾರ್ಷಿಕ ಆದಾಯ ಕೇವಲ ₹ 40,000 ಎಂದು ಸುಳ್ಳು ಆದಾಯ ಪ್ರಮಾಣಪತ್ರ ಸಲ್ಲಿಸಿ ಹಿಂದುಳಿದ ವರ್ಗದ ಮೀಸಲಾತಿ ಕಬಳಿಸಿದ್ದಾರೆ. ಆಡಳಿತ ನಡೆಸುವ ಕಾಂಗ್ರೆಸ್ ಸರ್ಕಾರ ಇಂತಹ ಸಾಂವಿಧಾನಿಕ ಪೀಠದಲ್ಲಿದ್ದವರ ವಿರುದ್ಧ ಆರಂಭದಲ್ಲೇ ಸೂಕ್ತ ಕ್ರಮಕೈಗೊಳ್ಳದೆ ರಕ್ಷಿಸಲು ಯತ್ನಿಸಿದ್ದು ತಪ್ಪು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇತ್ತೀಚೆಗೆ ನಡೆದ ಪಶುಸಂಗೋಪನೆ ಇಲಾಖೆಯ 400 ಪಶುವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ₹ 80 ಲಕ್ಷಕ್ಕೆ ಹುದ್ದೆಗಳ ಹರಾಜು ನಡೆದಿದೆ ಎಂಬ ದೂರು ಬಂದಿದೆ. ಮಧ್ಯವರ್ತಿಗಳು ಹಾಗೂ ಪ್ರಭಾವಿಗಳ ಜೊತೆ ಸೇರಿ ಪರೀಕ್ಷೆಗಳನ್ನು ರೆಸಾರ್ಟ್‌ಗಳಲ್ಲಿ ನಡೆಸಲಾಗಿದೆ ಹಾಗೂ ಪದವಿ ತರಗತಿಯಲ್ಲಿ ಫೇಲ್ ಆದ ಅಭ್ಯರ್ಥಿಗಳಿಗೆ ಕೆಪಿಎಸ್‌ಸಿಯಲ್ಲಿ ಪ್ರಭಾವಿ ಸಂಬಂಧಿಗಳಿದ್ದ ಕಾರಣ ಅತ್ಯಧಿಕ ಅಂಕ ನೀಡಲಾಗಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ ಎಂದು ರಾಮದುರ್ಗ ಕಳವಳ ವ್ಯಕ್ತಪಡಿಸಿದರು.

​ರಾಹುಲ್ ಗಾಂಧಿ ಅವರು ಯುವಜನರ ಹಕ್ಕುಗಳ ಬಗ್ಗೆ ಮಾತನಾಡುತ್ತಾರೆ. ಆದರೆ, ಅವರದೇ ಆಡಳಿತವಿರುವ ಕರ್ನಾಟಕದಲ್ಲಿ ಕೆಪಿಎಸ್‌ಸಿ ಅಧ್ಯಕ್ಷರೇ ಅಕ್ರಮ ಎಸಗಿ ಅಮಾನತಾಗುವ ಸ್ಥಿತಿ ಬಂದರೂ ಸಚಿವರೇಕೆ ಮೌನವಾಗಿದ್ದಾರೆ ಎಂದು ಪ್ರಶ್ನಿಸಿದರು.

ಬೇಡಿಕೆಗಳು:

ಮಧ್ಯವರ್ತಿಗಳ ಲಿಂಕ್‌ಗಳ ಕುರಿತು ಹೈಕೋರ್ಟ್‌ನ ಹಾಲಿ ನ್ಯಾಯಾಧೀಶರ ಉಸ್ತುವಾರಿಯಲ್ಲಿ ಸಿಐಡಿ ಅಥವಾ ಸಿಬಿಐ ತನಿಖೆಯಾಗಬೇಕು. ಕೆಪಿಎಸ್‌ಸಿ ಅಧ್ಯಕ್ಷರು ಮತ್ತು ಸದಸ್ಯರನ್ನು ನೇಮಿಸುವಾಗ ರಾಜಕೀಯ ಬಿಟ್ಟು ಉನ್ನತ ಪ್ರಾಮಾಣಿಕತೆ ಹೊಂದಿರುವ ಶಿಕ್ಷಣ ತಜ್ಞರನ್ನು ನೇಮಿಸಬೇಕು. ​ಪ್ರತಿಯೊಂದು ನೇಮಕಾತಿಗೂ ನಿರ್ದಿಷ್ಟ ದಿನಾಂಕ ನಿಗದಿಪಡಿಸಿ, ಅನಗತ್ಯ ವಿಳಂಬಕ್ಕೆ ಕಾರಣವಾಗುವ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಬೇಕು ಎಂದು ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಹ ಸಲ್ಲಿಸಲಾಯಿತು.

ವೇದಿಕೆಯ ಶಿವಾನಂದ ಕವಳಿ, ಸುಧೀರ ಕ್ಷತ್ರಿ, ಭೀಮರಾವ ಸವಣೂರ, ಆನಂದ ಹೂಗಾರ, ಸಂಜಯ ಪಾಲನಕರ, ಧೀರಜ ರಸಾಳೆ, ಮಂಜುನಾಥ ನಡಟ್ಟಿ, ಸುಭಾಸ ಹಲಗತ್ತಿ, ಸತೀಶ ಕುಮಾರ, ವೀರೇಶ ಮದ್ನೂರ, ಪ್ರವೀಣ ಬಸಲಿಂಗಗೊಳ, ರಚನಾ ಪಾಟೀಲ್, ವಿಕ್ರಮ ಶಿಕಲ್ಲಗಾರ, ಶಿವಲಿಂಗಯ್ಯ ಹಿರೇಮಠ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿದ್ಯಾರ್ಥಿಗಳಲ್ಲಿ ಪ್ರಜಾಪ್ರಭುತ್ವದ ಮೌಲ್ಯ ಬೆಳೆಸಲು ಶಾಲಾ ಸಂಸತ್ ಸಹಕಾರಿ
ಜೋಳ ಖರೀದಿಯ ಹಣ ಬಿಡುಗಡೆಗೆ ಆಗ್ರಹಿಸಿ ರೈತರ ಪ್ರತಿಭಟನೆ