ಮಂಗಳೂರು ವಿವಿಯಲ್ಲಿ 2 ದಿನಗಳ ದ.ಕ.ಜಿಲ್ಲಾ 27ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ
ಕನಿಷ್ಠ 2 ವರ್ಷಕ್ಕೊಮ್ಮೆ ಪ್ರತಿ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಸಾಹಿತ್ಯ ಸಮ್ಮೇಳಗಳು ನಡೆಯಬೇಕು. ಅದಕ್ಕಾಗಿ ಗ್ರಾ.ಪಂ.ಗಳು ಬಜೆಟ್‌ನಲ್ಲಿ ಅನುದಾನ ಮೀಸಲಿಡಬೇಕು. ಕನ್ನಡ ಭಾಷೆಯನ್ನು ಉಳಿಸುವ ನಿಟ್ಟಿನಲ್ಲಿ ಇಂತಹ ಯೋಜನೆ ರೂಪಿಸಲು ಸರ್ಕಾರ ಒಲವು ಹೊಂದಿದೆ ಎಂದು ಕರ್ನಾಟಕ ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಹೇಳಿದ್ದಾರೆ.
ಕೊಣಾಜೆಯ ಮಂಗಳೂರು ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ಎರಡು ದಿನಗಳ ದ.ಕ.ಜಿಲ್ಲಾ 27ನೇ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಅವರು ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿದರು.ಗ್ರಾಮ ಮಟ್ಟದಲ್ಲಿ ಸಾಹಿತ್ಯ ಸಮ್ಮೇಳನ ನಡೆಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ, ಗ್ರಾಮೀಣಾಭಿವೃದ್ಧಿ ಸಚಿವರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರೊಂದಿಗೆ ಮಾತುಕತೆ ನಡೆಸಲಾಗಿದೆ. ಈ ಬಗ್ಗೆ ಬಜೆಟ್‌ನಲ್ಲಿ ಅನುದಾನ ಮೀಸಲಿಗೆ ಗ್ರಾಮ ಪಂಚಾಯ್ತಿಗಳು ಮುಂದಾಗಬೇಕು. ಇದರಿಂದ ಗ್ರಾಮ ಮಟ್ಟದಲ್ಲಿ ಇರುವ ಸಾಹಿತಿಗಳನ್ನು ಗುರುತಿಸುವ ಕೆಲಸ ಆಗುತ್ತದೆ ಎಂದರು.ಸಾಹಿತ್ಯ ಕ್ಷೇತ್ರವನ್ನು ಪೋಷಕರು ಮಕ್ಕಳಿಗೂ ಪರಿಚಯಿಸಬೇಕು. ಇದನ್ನು ಇನ್ನಷ್ಟು ಮುಂದುವರಿಸಲು ಬೆಂಗಳೂರಿನ ವಿಧಾನಸೌಧದಲ್ಲೂ ಫೆ.27ರಿಂದ ಮಾರ್ಚ್ 3ರ ವರೆಗೆ ಪುಸ್ತಕ ಮತ್ತು ಸಾಹಿತ್ಯ ಮೇಳ ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರ ಪ್ರತಿನಿಧಿಯಾಗಿರುವ ರಾಜಕಾರಣಿಗಳಿಗೆ ಸಾಹಿತ್ಯ ಅತ್ಯಗತ್ಯವಾಗಿದೆ. ಪುಸ್ತಕ ಓದಿನಿಂದ ಜ್ಞಾನ ವೃದ್ಧಿಸಿಕೊಂಡರೆ, ಸಮಾಜಕ್ಕೂ ಪ್ರಯೋಜನವಾಗುತ್ತದೆ ಎಂದರು.
ಜಾಲ ತಾಣಗಳಿಂದ ಭೀತಿ:
ಕನ್ನಡ ಭಾಷೆಯು ಇಂಗ್ಲಿಷ್, ಹಿಂದಿಯ ದಬ್ಬಾಳಿಕೆಯಿಂದ ನಲುಗುತ್ತಿದೆ. ಈ ಬಗ್ಗೆ ಮುಕ್ತ ಮನಸ್ಸಿನಿಂದ ಚರ್ಚಿಸಬೇಕು. ಪುಸ್ತಕೋದ್ಯಮಕ್ಕೆ ಸರ್ಕಾರ ಪ್ರೋತ್ಸಾಹ ನೀಡುತ್ತಿಲ್ಲ. ಹಿಂದೆ ತೆರೆದ ಅಂಚೆಯಲ್ಲಿ ಪುಸ್ತಕ ಕಳುಹಿಸಬಹುದಿತ್ತು. ಈಗ ಪುಸ್ತಕದಷ್ಟೇ ಬೆಲೆಯನ್ನು ಅಂಚೆಯಲ್ಲಿ ಕಳುಹಿಸಲು ನೀಡಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಾಹಿತ್ಯ, ಕಲೆಗಳಿಗೆ ಆದ್ಯತೆ ನೀಡುತ್ತಿಲ್ಲ ಎಂದರು.
ಮಂಗಳೂರು ವಿಶ್ವವಿದ್ಯಾಲಯ ಕುಲಪತಿ ಪ್ರೊ.ಪಿ.ಎಲ್.ಧರ್ಮ ಪುಸ್ತಕ ಮತ್ತು ಇತರ ಮಳಿಗೆ ಉದ್ಘಾಟಿಸಿ ಮಾತನಾಡಿ, ಪುಸ್ತಕ ಯಾವತ್ತೂ ಉದ್ಯಮ ಆಗಬಾರದು. ಪುಸ್ತಕ ಎಂದರೆ ಸರಸ್ವತಿ, ಅದು ನಮ್ಮ ಹಕ್ಕು, ನಮ್ಮ ಧರ್ಮ ಆಗಬೇಕು. ಬರಹಗಾರರ ಉದ್ದೇಶ ಉದ್ಯಮ ಆಗಬಾರದು. ಶಿಕ್ಷಕರಲ್ಲೂ ಸಾಹಿತ್ಯಾಸಕ್ತಿ ಮೂಡಬೇಕು ಎಂದರು.
ದ.ಕ.ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಎಂ.ಪಿ.ಶ್ರೀನಾಥ್ ಆಶಯ ಮಾತನ್ನಾಡಿದರು. ಸಮ್ಮೇಳನ ಸಂಯೋಜನಾ ಸಮಿತಿ ಪ್ರಧಾನ ಕಾರ್ಯದರ್ಶಿ ಡಾ.ಧನಂಜಯ ಕುಂಬ್ಳೆ ಸ್ವಾಗತಿಸಿದರು. ಗೌರವ ಕಾರ್ಯದರ್ಶಿ ರಾಜೇಶ್ವರಿ ವಂದಿಸಿದರು. ವೇಣುಗೋಪಾಲ ಶೆಟ್ಟಿ ಮತ್ತು ವಿಜಯಲಕ್ಷ್ಮೀ ಕಟೀಲ್ ನಿರೂಪಿಸಿದರು. ---------------ವಿವಿಯಲ್ಲಿ ಮೊದಲ ಸಾಹಿತ್ಯ ಸಮ್ಮೇಳನ
---------------