ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಹಾನಗಲ್ಲಿನಲ್ಲಿ ಸರ್ಕಾರಿ ಪ್ರೌಢಶಾಲೆ

KannadaprabhaNewsNetwork | Published : Jun 17, 2024 1:34 AM

ಸಾರಾಂಶ

ಹಾನಗಲ್ಲ ನಗರದಲ್ಲಿ ಶಾಲೆಯ ಅನುಮತಿಗೆ ನಾನಾ ತಾಂತ್ರಿಕ ಕಾರಣಗಳೂ ಅಡ್ಡಿಯಾಗಿದ್ದವು. ಆದರೀಗ ಎಲ್ಲ ಅಡ್ಡಿಗಳೂ ದೂರವಾಗಿದ್ದು, ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಸರ್ಕಾರಿ ಪ್ರೌಢಶಾಲೆ ಆರಂಭಗೊಳ್ಳುತ್ತಿದ್ದು, ಜನತೆಯ ಕನಸು ನನಸಾಗಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.

ಹಾನಗಲ್ಲ: ತಾಲೂಕು ಕೇಂದ್ರ ಹಾನಗಲ್ಲ ನಗರದಲ್ಲಿ ಸರ್ಕಾರಿ ಪ್ರೌಢಶಾಲೆ ಇಲ್ಲ ಎನ್ನುವ ಕೊರಗು ಹಲವು ದಶಕಗಳಿಂದಲೂ ಕಾಡುತ್ತಿತ್ತು. ಶಾಲೆಯ ಅನುಮತಿಗೆ ನಾನಾ ತಾಂತ್ರಿಕ ಕಾರಣಗಳೂ ಅಡ್ಡಿಯಾಗಿದ್ದವು. ಆದರೀಗ ಎಲ್ಲ ಅಡ್ಡಿಗಳೂ ದೂರವಾಗಿದ್ದು, ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಸರ್ಕಾರಿ ಪ್ರೌಢಶಾಲೆ ಆರಂಭಗೊಳ್ಳುತ್ತಿದ್ದು, ಜನತೆಯ ಕನಸು ನನಸಾಗಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.ಇಲ್ಲಿನ ಸರ್ಕಾರಿ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಮಾಧ್ಯಮ ಪ್ರೌಢಶಾಲೆ ಉದ್ಘಾಟಿಸಿ ಅವರು ಮಾತನಾಡಿದರು. ಆಂಗ್ಲ ಮಾಧ್ಯಮ ಪ್ರೌಢಶಾಲೆಗೂ ಕೆಲವೇ ದಿನಗಳಲ್ಲಿ ಅನುಮತಿ ದೊರಕುವ ವಿಶ್ವಾಸ ವ್ಯಕ್ತಪಡಿಸಿ, ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಹಲವು ಮಹತ್ತರ ಬದಲಾವಣೆ ತರಲಾಗುತ್ತಿದೆ. ೫೨ ಸರ್ಕಾರಿ ಶಾಲೆಗಳನ್ನು ಸ್ಮಾರ್ಟ್ ಶಾಲೆಗಳನ್ನಾಗಿ ರೂಪಿಸಲಾಗಿದೆ. ಡೆಸ್ಕ್, ವಿಜ್ಞಾನ, ಗಣಿತ ಪ್ರಯೋಗಾಲಯ, ಶಾಲೆಗಳ ಕಟ್ಟಡಕ್ಕೆ ಸುಣ್ಣಬಣ್ಣ ಹೀಗೆ ಮೂಲಸೌಕರ್ಯ ಒದಗಿಸಲಾಗುತ್ತಿದೆ. ಗುರುಭವನದಲ್ಲಿ ಪರಿವರ್ತನ ಕಲಿಕಾ ಕೇಂದ್ರ ಆರಂಭಿಸಿ ವಿದ್ಯಾರ್ಥಿಗಳನ್ನು ಸ್ಪರ್ಧಾತ್ಮಕ ಜಗತ್ತಿಗೆ ತರಬೇತಿ ನೀಡಿ ಸಜ್ಜುಗೊಳಿಸಲಾಗುತ್ತಿದೆ. ಯುವಕರ ಕೌಶಲ್ಯ ಅಭಿವೃದ್ಧಿ ಪಡಿಸಲಾಗುತ್ತಿದೆ. ಅನೇಕ ಬದಲಾವಣೆಗಳ ಮೂಲಕ ವಿದ್ಯಾರ್ಥಿಗಳ ಭವಿಷ್ಯ ಸುಂದರಗೊಳಿಸುವ ನಿಟ್ಟಿನಲ್ಲಿ ಶ್ರಮ ವಹಿಸಲಾಗಿದೆ ಎಂದರು. ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ. ಸಾಲಿಮಠ ಮಾತನಾಡಿ, ತಾಲೂಕಿನಲ್ಲಿ ಶಿಕ್ಷಣದ ಗುಣಮಟ್ಟ ಸುಧಾರಣೆಗೆ ಒತ್ತು ನೀಡಲಾಗಿದೆ. ಪರಿಣಾಮ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ತಾಲೂಕಿನ ಸಾಧನೆ ಸುಧಾರಣೆ ಕಂಡಿದೆ. ಪ್ರಸಕ್ತ ಸಾಲಿನಲ್ಲಿ ಗಮನಾರ್ಹ ಸಾಧನೆಗೆ ಸಂಕಲ್ಪಿಸಲಾಗಿದೆ. ಹಾನಗಲ್ ನಗರದಲ್ಲಿ ಸರ್ಕಾರಿ ಪ್ರೌಢಶಾಲೆಯ ಬೇಡಿಕೆ ನಾಲ್ಕೈದು ದಶಕಗಳಿಂದಲೂ ಬೇಡಿಕೆಯಾಗಿಯೇ ಉಳಿದಿತ್ತು. ಶಾಸಕ ಶ್ರೀನಿವಾಸ ಮಾನೆ ಅವರೀಗ ಬೇಡಿಕೆ ಈಡೇರಿಸಿದ್ದಾರೆ. ನಗರ ಪ್ರದೇಶ ಮಾತ್ರವಲ್ಲದೇ ಸುತ್ತಲಿನ ಗ್ರಾಮಗಳ ವಿದ್ಯಾರ್ಥಿಗಳೂ ಅನುಕೂಲ ಪಡೆಯಲಿದ್ದಾರೆ ಎಂದರು. ಎಸ್‌ಡಿಎಂಸಿ ಅಧ್ಯಕ್ಷ ಸತೀಶ ಬೋಸ್ಲೆ, ಪುರಸಭೆ ಮಾಜಿ ಅಧ್ಯಕ್ಷ ಖುರ್ಷಿದ್‌ಅಹ್ಮದ್ ಹುಲ್ಲತ್ತಿ, ಸದಸ್ಯ ಮೇಕಾಜಿ ಕಲಾಲ, ಶಕೀಲ್‌ಅಹ್ಮದ್ ಬಾಳೂರ, ಮತೀನ್ ಶಿರಬಡಗಿ, ಉಮೇಶ ಮಾಳಗಿ, ವಿನಯ ಬಂಕನಾಳ, ಘನಶಾಮ ದೇಶಪಾಂಡೆ, ವಿದ್ಯಾಶಂಕರ ದೇಶಪಾಂಡೆ, ಬಸವರಾಜ ಬೆಂಡಿಗೇರಿ, ಮಮತಾ ಆರೆಗೊಪ್ಪ, ಸಂತೋಷ ಸುಣಗಾರ, ಪರಶುರಾಮ್ ಖಂಡೂನವರ, ಸುರೇಶ ನಾಗಣ್ಣನವರ, ಗಾಯಿತ್ರಿ ಕೊಲ್ಲಾಪೂರ, ಗೀತಾ ಪೂಜಾರ, ನಾಗೇಂದ್ರಪ್ಪ, ಶ್ರೀನಿವಾಸ್ ದಿಕ್ಷೀತ್, ಎಸ್.ಆರ್.ಯಡಚಿ, ಮುಖ್ಯೋಪಾಧ್ಯಾಯ ಆರ್.ಬಿ.ರೆಡ್ಡಿ ಈ ಸಂದರ್ಭದಲ್ಲಿದ್ದರು.

Share this article