ಕನ್ನಡಪ್ರಭ ವಾರ್ತೆ ಬೆಂಗಳೂರು
ಸಾಹಿತಿ ಡಾ। ಎಲ್.ಹನುಮಂತಯ್ಯ ಅವರನ್ನು ರಾಜ್ಯಸಭೆ ಸದಸ್ಯರಾಗಿ ಮುಂದುವರಿಸದೆ ಕಾಂಗ್ರೆಸ್ ಪಕ್ಷ ದೊಡ್ಡ ಅಪರಾಧ ಮಾಡಿದೆ ಎಂದು ವಿಧಾನ ಪರಿಷತ್ ಮಾಜಿ ಸಭಾಪತಿ ಪ್ರೊ.ಬಿ.ಕೆ.ಚಂದ್ರಶೇಖರ್ ಬೇಸರ ವ್ಯಕ್ತಪಡಿಸಿದ್ದಾರೆ.ರಾಜ್ಯಸಭೆ ಮಾಜಿ ಸದಸ್ಯ, ಸಾಹಿತಿ ಡಾ। ಎಲ್.ಹನುಮಂತಯ್ಯ ಅವರಿಗೆ 65 ವರ್ಷ ತುಂಬಿದ ಹಿನ್ನೆಲೆಯಲ್ಲಿ ‘ಭಾಗವತರು ಸಾಂಸ್ಕೃತಿಕ ಸಂಘಟನೆ’ ಭಾನುವಾರ ನಗರದ ನಯನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ‘ಡಾ। ಎಲ್.ಹನುಮಂತಯ್ಯ ಬದುಕು, ಬರಹ’ ವಿಷಯ ಕುರಿತ ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
ಬಡತನ ಹಿನ್ನೆಲೆಯಿಂದ ಬಂದ ಹನುಮಂತಯ್ಯ ಸಾಹಿತ್ಯ ಕ್ಷೇತ್ರಕ್ಕೆ ಉತ್ತಮ ಕೊಡುಗೆ ನೀಡಿದ್ದಾರೆ. ರಾಜ್ಯಸಭಾ ಸದಸ್ಯರಾಗಿದ್ದಗಲೂ ಸದನದಲ್ಲಿ ಜನಪರ ವಿಷಯಗಳನ್ನು ಮಂಡಿಸುತ್ತಾ ಉತ್ತಮ ಸಂಸದೀಯ ಪಟು ಆಗಿದ್ದರು. ಆದರೆ, ರಾಜ್ಯಸಭೆ ಸದಸ್ಯತ್ವ ಮುಂದುವರಿಸದೆ ಇದ್ದಾಗ ನನಗೆ ಆಘಾತವಾಯಿತು. ಮತ್ತೊಮ್ಮೆ ಅವರನ್ನು ರಾಜ್ಯಸಭೆಗೆ ಆಯ್ಕೆ ಮಾಡುವಂತೆ ಕಾಂಗ್ರೆಸ್ ಪಕ್ಷದ ಎಲ್ಲ ನಾಯಕರಿಗೂ ಪತ್ರ ಬರೆದಿದ್ದೆ. ಅವರನ್ನು ರಾಜ್ಯಸಭೆಗೆ ಮತ್ತೊಮ್ಮೆ ಆಯ್ಕೆ ಮಾಡದೆ ಕಾಂಗ್ರೆಸ್ ಪಕ್ಷ ದೊಡ್ಡ ಅಪರಾಧ ಮಾಡಿದೆ ಎಂದು ಎಂದು ಅಸಮಾಧಾನ ವ್ಯಕ್ತಪಡಿಸಿದರು.ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್. ಮುಕುಂದರಾಜ್, ಪ್ರಸ್ತುತ ಲೇಖಕರಿಗೂ ಹಾಗೂ ಜನರಿಗೂ ಸಂಬಂಧ ಇಲ್ಲದಂತಾಗಿದೆ. ಪ್ರಭುತ್ವಕ್ಕೂ ಮತ್ತು ಸಾಹಿತ್ಯಕ್ಕೂ ಮಹಾಕವಿ ಪಂಪನ ಕಾಲದಿಂದಲೂ ಸಂಬಂಧವಿದೆ. ಪ್ರಭುತ್ವದ ಸಹಾಯದಿಂದ ಸಾಹಿತ್ಯವನ್ನು ಜನರಿಗೆ ತಲುಪಿಸಬೇಕಾಗುತ್ತದೆ. ಸ್ವತಃ ಲೇಖಕನೂ ಜನರಿಗೆ ಸಾಹಿತ್ಯವನ್ನು ತಲಿಪಸುವ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು. ಜನರ ತೆರಿಗೆ ಹಣದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಾಹಿತ್ಯ ಅಕಾಡೆಮಿ, ಪ್ರತಿಯೊಬ್ಬರಿಗೂ ಸಾಹಿತ್ಯವನ್ನು ತಲುಪಿಸುವ ಕೆಲಸ ಮಾಡಲಿದೆ ಎಂದು ತಿಳಿಸಿದರು.
ಹಿರಿಯ ಸಾಹಿತಿ ಎಚ್.ಎಸ್. ಶಿವಪ್ರಕಾಶ್ ಮಾತನಾಡಿ, ಕವಿಗಳಿಗೆ ಕನಸುಗಳು ಇರುತ್ತವೆ ಅವುಗಳನ್ನು ಕಾರ್ಯಗತ ಮಾಡುವ ಶಕ್ತಿ ಇರುವುದಿಲ್ಲ. ಆದರೆ, ರಾಜಕಾರಣಗಳಿಗೆ ಶಕ್ತಿ ಇರುತ್ತದೆ ಹೊರತು ಕನಸುಗಳು ಇರುವುದಿಲ್ಲ. ಆದರೆ, ಸಾಹಿತಿ ಹಾಗೂ ರಾಜಕಾರಣಿಯಾದ ಡಾ.ಎಲ್.ಹನುಮಂತ್ಯ ಕಂಡ ಕನಸುಗಳನ್ನು ಸಾಕಾರ ಮಾಡಿದ್ದಾರೆ. ದಲಿತ ಸಾಹಿತ್ಯದಲ್ಲಿ ಅಸ್ತಿತ್ವದ ರಾಜಕಾರಣ ಇರುತ್ತದೆ. ಹನುಮಂತಯ್ಯ ಅವರು ದಲಿತ ಸಾಹಿತ್ಯ ರಚಿಸಿದ್ದರೂ ವಿಭಿನ್ನತೆ ಕಾಯ್ದುಕೊಂಡಿದ್ದಾರೆ ಎಂದು ಶ್ಲಾಘಿಸಿದರು.ಭಾಗವತರು ಸಾಂಸ್ಕೃತಿಕ ಸಂಘಟನೆ ಅಧ್ಯಕ್ಷ ಕೆ.ರೇವಣ್ಣ, ದೂರದರ್ಶನ ಕೇಂದ್ರದ ಹಿರಿಯ ಕಾರ್ಯಕ್ರಮ ನಿರ್ವಾಹಕಿ ಎಚ್.ಎನ್. ಆರತಿ ಮತ್ತು ಡಾ.ಎಲ್. ಹನುಮಂತಯ್ಯ ಉಪಸ್ಥಿತರಿದ್ದರು. ಇದೇ ವೇಳೆ ಹನುಮಂತಯ್ಯ ಕುರಿತು ಡಾ.ಎಂ.ಎಸ್. ಆಶಾದೇವಿ ರಚಿಸಿರುವ ‘ಮೂಲಮುಖಿ’ ಹಾಗೂ ಡಾ.ಎಲ್. ಹನುಮಂತಯ್ಯ ರಚನೆಯ ‘ಆಕಾಶಕ್ಕೆ ಏಣಿ ಹಾಕು’ ಪುಸ್ತಕ ಲೋಕಾರ್ಪಣೆ ಮಾಡಲಾಯಿತು.