ಕಾಯಿಲೆ ಬಂದರೆ ಪರದಾಡುವ ಗ್ರಾಮಸ್ಥರು । ಜಿಲ್ಲಾ ಉಸ್ತುವಾರಿ ಸಚಿವರ ಕ್ಷೇತ್ರದಲ್ಲಿ ದೊಡ್ಡ ಸಮಸ್ಯೆ
ರಾಮಮೂರ್ತಿ ನವಲಿ
ಕನ್ನಡಪ್ರಭ ವಾರ್ತೆ ಗಂಗಾವತಿಸ್ವಾತಂತ್ರ್ಯ ಬಂದು 77 ವರ್ಷ ಗತಿಸುತ್ತಿದ್ದರೂ ಸಹ ತಾಲೂಕಿನ ಹೇರೂರು ಗ್ರಾಮ ಇದಕ್ಕೆ ಇನ್ನೂ ಆರೋಗ್ಯ ಸೌಲಭ್ಯ ಮರೀಚಿಕೆಯಾಗಿದೆ.
ಹೇರೂರು ಗ್ರಾಮ ಪ್ರಮುಖ ವಾಣಿಜ್ಯ ಕೇಂದ್ರ. ಈ ಗ್ರಾಮ ಕನಕಗಿರಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುತ್ತದೆ. ಇದು ಜಿಲ್ಲಾ ಪಂಚಾಯಿತಿ ಕ್ಷೇತ್ರ, ತಾಲೂಕು ಪಂಚಾಯಿತಿ ಕ್ಷೇತ್ರವಲ್ಲದೆ ಗ್ರಾಮ ಪಂಚಾಯಿತಿಯನ್ನು ಹೊಂದಿದೆ. ಗೋನಾಳ, ಬಾಪರಡ್ಡಿ ಕ್ಯಾಂಪ್, ಡಾಕ್ಟರ್ ಕ್ಯಾಂಪ್, ಕೇಸರಹಟ್ಟಿ, ಮಲಕನಮುರಡಿ, ಆರಾಳ, ಕೇಸಕ್ಕಿ ಹಂಚಿನಾಳ ಸೇರಿದಂತೆ ಸಣ್ಣ ಪುಟ್ಟ ಕ್ಯಾಂಪ್‌ಗಳು ಈ ಗ್ರಾಪಂ ವ್ಯಾಪ್ತಿಗೆ ಬರುತ್ತವೆ.
ತಾತ್ಕಾಲಿಕ ಕಟ್ಟಡ:
ಹೇರೂರು ಗ್ರಾಮದಲ್ಲಿ ಆರೋಗ್ಯ ಕೇಂದ್ರ ನಡೆಸಲು ತಾತ್ಕಾಲಿಕವಾಗಿ ಖಾಲಿ ಇರುವ ಶಾಲಾ ಹಳೆಯ ಕಟ್ಟಡ ನೀಡುವುದಕ್ಕಾಗಿ ಮುಂದಾಗಿದ್ದರೂ ಸಹ ಆರೋಗ್ಯ ಇಲಾಖೆ ನಿರ್ಲಕ್ಷ್ಯ ವಹಿಸಿದೆ ಎಂದು ಗ್ರಾಮಸ್ಥರು ದೂರಿದ್ದಾರೆ. ಹಲವಾರು ಬಾರಿ ಆರೋಗ್ಯ ಸಚಿವರಿಗೆ, ಕನಕಗಿರಿ ಕ್ಷೇತ್ರದ ಶಾಸಕರಿಗೆ ಗ್ರಾಮಸ್ಥರು ಮನವಿ ಸಲ್ಲಿಸಿದರೂ ಸಹ ಗಮನಹರಿಸುತ್ತಿಲ್ಲ ಎನ್ನಲಾಗಿದೆ.ಇನ್ನಾದರೂ ಈ ಕ್ಷೇತ್ರದ ಶಾಸಕರಾಗಿರುವ ಸಚಿವರು, ಆರೋಗ್ಯ ಇಲಾಖೆಯ ಅಧಿಕಾರಿಗಳು ಗಮನಹರಿಸಿ ಆಸ್ಪತ್ರೆ ಸ್ಥಾಪನೆಗೆ ಮುಂದಾದರೆ ಕಾಯಿಲೆಯಿಂದ ತತ್ತರಿಸುವ ಜನರಿಗೆ ಚಿಕಿತ್ಸೆ ಕಲ್ಪಿಸಿದಂತಾಗುತ್ತದೆ ಎಂಬುದು ಗ್ರಾಮಸ್ಥರ ಒತ್ತಾಯವಾಗಿದೆ.
ಹೇರೂರು ಗ್ರಾಮವು ಹೊಸಕೇರಾ ಆರೋಗ್ಯ ಉಪವಿಭಾಗಕ್ಕೆ ಒಳಪಡುತ್ತಿದೆ. ಈ ಭಾಗದ ಜನರು ಚಿಕಿತ್ಸೆಗಾಗಿ ಹೋಸಕೇರಾ ಅಥವಾ ಗಂಗಾವತಿ ಆರೋಗ್ಯ ಕೇಂದ್ರಕ್ಕೆ ಬಂದು ಚಿಕಿತ್ಸೆ ಪಡೆಯಬಹುದಾಗಿದೆ ಎಂದು ತಾಲೂಕು ವೈದ್ಯಾಧಿಕಾರಿ ಡಾ. ಗೌರಿಶಂಕರ ತಿಳಿಸಿದ್ದಾರೆ.