ಸಾಮಾಜಿಕ ಸಮಾನತೆ ಸಾರಿದ ರಾಮಾನುಜಾಚಾರ್ಯರು

KannadaprabhaNewsNetwork |  
Published : Aug 08, 2024, 01:37 AM ISTUpdated : Aug 08, 2024, 01:38 AM IST
3 | Kannada Prabha

ಸಾರಾಂಶ

ಶ್ರೀ ರಾಮಾನುಜಾಚಾರ್ಯರು ಶಾಸ್ತ್ರಾಭ್ಯಾಸಗಳನ್ನು ಅನುಸರಿಸಿ ಜನರಲ್ಲಿ ವೈಷ್ಣವ ಭಕ್ತಿಯ ಬೀಜವನ್ನು ಬಿತ್ತಿದರು

ಕನ್ನಡಪ್ರಭ ವಾರ್ತೆ ಮೈಸೂರು

ಆಧ್ಯಾತ್ಮ, ಮಾನವೀಯ ಮೌಲ್ಯಗಳು, ಸಾಮಾಜಿಕ ಸಮಾನತೆ, ವಿಶಿಷ್ಟಾದ್ವೈತದ ಅನನ್ಯತೆಯನ್ನು ಜನತೆಗೆ ಸಾರಿದ ಮಹಾನ್ ವ್ಯಕ್ತಿ ಶ್ರೀ ರಾಮಾನುಜಾಚಾರ್ಯರು ಎಂದು ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಎನ್.ಕೆ. ಲೋಕನಾಥ್ ಹೇಳಿದರು.

ಮೇಲುಕೋಟೆಯ ಭಗವದ್ ರಾಮಾನುಜ ರಾಷ್ಟ್ರೀಯ ಸಂಶೋಧನಾ ಸಂಸತ್ ಹಾಗೂ ಮೈಸೂರು ವಿಶ್ವವಿದ್ಯಾನಿಲಯದ ಪ್ರಾಚ್ಯವಿದ್ಯಾ ಸಂಶೋಧನಾಲಯದ ವತಿಯಿಂದ ಮಾನಸಗಂಗೋತ್ರಿಯ ವಿಜ್ಞಾನ ಭವನದ ಸೆಮಿನಾರ್ ಹಾಲ್ ನಲ್ಲಿ ಆಯೋಜಿಸಿದ್ದ ವಿಶಿಷ್ಟಾದ್ವೈತ - ನಯಚಿಂತನಮ್ ಎಂಬ ಒಂದು ದಿನದ ರಾಜ್ಯಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ವೇದಾಂತಶಾಸ್ತ್ರ ಪ್ರಪಂಚಕ್ಕೆ ವಿಶಿಷ್ಟವಾದ ಕೊಡುಗೆಗಳನ್ನು ನೀಡಿದ ಮಾಹಾನಿಯರಾದ ರಾಮಾನುಜಾಚಾರ್ಯರು, ಮಧ್ವಾಚಾರ್ಯರು ಹಾಗೂ ಶಂಕರಚಾರ್ಯರ ವಿಚಾರ ಲಹರಿಯನ್ನು ಜನ ಸಾಮಾನ್ಯರಿಗೂ ತಿಳಿಸುವ ಕೆಲಸ ಮಾಡಬೇಕು ಎಂದರು.

ಶ್ರೀ ರಾಮಾನುಜಾಚಾರ್ಯರು ಶಾಸ್ತ್ರಾಭ್ಯಾಸಗಳನ್ನು ಅನುಸರಿಸಿ ಜನರಲ್ಲಿ ವೈಷ್ಣವ ಭಕ್ತಿಯ ಬೀಜವನ್ನು ಬಿತ್ತಿದರು. ತಮ್ಮ ವಿಶಿಷ್ಟಾದ್ವೈತ ಸಿದ್ಧಾಂತ ಪ್ರವರ್ತಕರಾಗಿ ಮಹಾ ವಿಷ್ಣುವಿನ ಆರಾಧಕರಾಗಿ ವಿಶಿಷ್ಟಾದ್ವೈತ ಸಿದ್ಧಾಂತವನ್ನು ಹಿಮಾಲಯದ ಎತ್ತರಕ್ಕೆ ಬೆಳೆಸಿದರು. ವಿಷ್ಣುವಿನಲ್ಲಿ ಭಕ್ತಿ ಇಟ್ಟರೆ ಪರಮಾತ್ಮನನ್ನು ಒಲಿಸಿಕೊಳ್ಳಬಹುದು ಎಂಬುದನ್ನು ತಿಳಿಸಿಕೊಟ್ಟರು ಎಂದು ಅವರು ಮಾಹಿತಿ ನೀಡಿದರು.

ವಿಷ್ಣುವಿನ ಭಕ್ತಿಯಲ್ಲಿ ಯಾವುದೇ ತಾರತಮ್ಯವಿಲ್ಲ. ಪಂಡಿತ ಪಾಮರರಿಗೆ ಭೇದವಿಲ್ಲ ಎಂದು ನಿರೂಪಿಸಿದ ವಿಶಿಷ್ಟ ಪ್ರಮೇಯವನ್ನು ಮಂಡಿಸಿದ ರಾಮಾನುಜಾಚಾರ್ಯರಲ್ಲಿ ಪ್ರತಿಭೆ ಹಾಗೂ ವೈಶಾಲತೆ ಕಾಣಬಹುದು. ವಿಶಿಷ್ಟಾದ್ವೈತ ಸಿದ್ಧಾಂತವನ್ನು ಅನುಸರಿಸುವ ಹಾಗೂ ಅಳವಡಿಸಿಕೊಳ್ಳುವ ಒಂದು ದೊಡ್ಡ ಪಂಗಡ ಇಂದಿಗೂ ಇದೆ. ಇದಕ್ಕೆಲ್ಲ ಮುಖ್ಯ ಕಾರಣ ನಮ್ಮ ಸಂಸ್ಕೃತ ಭಾಷೆ. ನಮ್ಮ ಸಂಸ್ಕೃತದ ಭಾಷೆಯಲ್ಲಿ ಇವೆಲ್ಲವೂ ಸಹ ಅಡಗಿದೆ. ನಮ್ಮ ಜಲ, ನೆಲ ಭಾಷೆ ಈ ಮೂರಕ್ಕೂ ಸಹ ನಾವು ಬಹಳ ಪ್ರಾಮುಖ್ಯತೆ ನೀಡಬೇಕು ಎಂದರು.

ಪ್ರಸ್ತುತ ಪ್ರಚಲಿತದಲ್ಲಿರುವ ಎಲ್ಲಾ ರೀತಿಯ ತಾಂತ್ರಿಕ ಕೌಶಲ್ಯವನ್ನು ಆ ಕಾಲದಲ್ಲಿಯೇ ಸಂಸ್ಕೃತ ಭಾಷೆ ಒಳಗೊಂಡಿತ್ತು. ಸಂಸ್ಕೃತ ಭಾಷೆಯಲ್ಲಿ ಹೆಚ್ಚು ಸಂಶೋಧನೆ ಜರುಗಬೇಕು. ಈ ನಿಟ್ಟಿನಲ್ಲಿ ಎಲ್ಲರೂ ಕೂಡ ಕೈಜೋಡಿಸಬೇಕು. ರಾಮಾನುಜಾಚಾರ್ಯರ ವಿಶಿಷ್ಟಾದ್ವೈತ ಸಿದ್ಧಾಂತದ ಸೂಕ್ಷ್ಮ ವಿಷಯವನ್ನು ಹಾಗೂ ಸಂಸ್ಕೃತ ಭಾಷೆಯನ್ನು ಜನಸಾಮಾನ್ಯರಿಗೂ ತಿಳಿಸಬೇಕು ಆ ಮೂಲಕ ವಿಚಾರ ಸಂಕಿರಣವನ್ನು ಯಶಸ್ವಿಗೊಳಿಸಬೇಕು ಎಂದು ಅವರು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಭಗವದ್ ರಾಮಾನುಜ ರಾಷ್ಟ್ರೀಯ ಸಂಶೋಧನಾ ಸಂಸತ್ ನ ಕುಲ ಸಚಿವ ಡಾ.ಎಸ್. ಕುಮಾರ್ ಅವರು, ವಿದ್ವತ್ ಪರಂಪರೆಯಲ್ಲಿ ಬೆಳೆದ ಭಗವಾನ್ ರಾಮಾನುಜ ರಾಷ್ಟ್ರೀಯ ಸಂಶೋಧನಾ ಸಂಸ್ಥೆಯು ತನ್ನ 50ನೇ ವರ್ಷದ ಸಂಭ್ರಮಾಚರಣೆಯ ಆಸುಪಾಸಿನಲ್ಲಿದೆ. ಇದರ ಮೂಲ ಉದ್ದೇಶ ಶ್ರೀ ಭಗವಾನ್ ರಾಮಾನುಜಾಚಾರ್ಯರ ಸಿದ್ದಾಂತವನ್ನು ಸಂಶೋಧಿಸುವ ಮೂಲಕ ಸಂಸ್ಕೃತದ ಬಳಕೆಯನ್ನು ಮುಂದೆ ತರುವುದಾಗಿದೆ ಎಂದರು.

ರಾಮಾನುಜರ ಉಜ್ವಲ ವ್ಯಕ್ತಿತ್ವ, ಬುದ್ಧಿ ತೀಕ್ಷ್ಣತೆ, ಅದ್ಭುತ ಗ್ರಂಥರಚನಾ ಸಾಮರ್ಥ್ಯ, ಅಸದೃಶ್ಯ ಪಾಂಡಿತ್ಯ, ಕಾರ್ಯತತ್ಪರತೆ, ಕಾರುಣ್ಯ, ಪರಿಶುದ್ಧ ಜೀವನ, ತೀರ್ಥಯಾತ್ರೆ, ದೇವಾಲಯ ಪುನರುದ್ಧಾರ ಇತ್ಯಾದಿ ಗುಣಗಳೆಲ್ಲ ಇವರ ಸಿದ್ಧಾಂತ ಸ್ಥಾಪನೆಗೂ, ವಿಸ್ತಾರ ಪ್ರಚಾರಕ್ಕೂ ಸಹಾಯಕವಾದವು. ಹಿಂದಿನ ಸಂಪ್ರದಾಯವನ್ನು ಸಿದ್ಧಾಂತ ಮಟ್ಟಕ್ಕೆ ಏರಿಸಿ, ಅದಕ್ಕೆ ಗಣ್ಯವಾದ ವೈಷ್ಣವ ದರ್ಶನ ಸ್ಥಾನವನ್ನು ಸಂಪಾದಿಸಿದ ಕೀರ್ತಿ ರಾಮಾನುಜರಿಗೆ ಸಲ್ಲುತ್ತದೆ ಎಂದರು.

ರಾಮಾನುಜಾಚಾರ್ಯರ ಸಿದ್ಧಾಂತ, ವಿಚಾರ ಲಹರಿಗಳು, ವೇದಾಂತ ದರ್ಶನ, ಅವರ ಗ್ರಂಥಗಳಿಗೆ ಸಂಬಂಧಿಸಿದಂತೆ ಸಾಮಾಜಿಕ ಚಿಂತನೆ, ಸಿದ್ಧಾಂತಗಳ ಕೊಡುಗೆಯನ್ನು ಮೇಲುಕೋಟೆ ಸುತ್ತಮತ್ತಲೂ ಪ್ರಚಾರ ಮಾಡುವುದರ ಜೊತೆಗೆ ರಾಷ್ಟ್ರದಾದ್ಯಂತ ಪ್ರಚಾರ ಮಾಡಬೇಕು. ಈ ನಿಟ್ಟಿನಲ್ಲಿ ರಾಮಾನುಜರ ವಿಚಾರ ಸಂಕಿರಣ ಉಪನ್ಯಾಸಗಳನ್ನು ಆನ್ ಲೈನ್ ಮೂಲಕ ಆಯೋಜಿಸಲಾಗಿದೆ ಎಂದು ಅವರು ಹೇಳಿದರು.

ಪ್ರಾಚ್ಯವಿದ್ಯಾ ಸಂಶೋಧನಾಲಯವು ಅನೇಕ ಸಂಸ್ಕೃತ ತಾಳೆಗರಿಗಳ ಸಂಶೋಧನೆಗೆ ಅನುವು ಮಾಡಿಕೊಡುತ್ತಿದೆ. ಈಗಾಗಲೇ ಸಂಸ್ಕೃತ ಭಾಷೆ ಬೆಳೆದು ಅಳಿವಿನ ಅಂಚಿನಲ್ಲಿದೆ. ಸಂಸ್ಕೃತದಲ್ಲಿರುವ ಶಾಸ್ತ್ರ, ಧರ್ಮ, ಗ್ರಂಥ ವ್ಯಾಸಂಗಗಳನ್ನು ಸಾಮಾನ್ಯ ಜನರಿಗೂ ಕೂಡ ತಿಳಿಸುವ ಕೆಲಸ ಮಾಡಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪ್ರಾಚ್ಯವಿದ್ಯಾ ಸಂಶೋಧನಾಲಯದ ನಿರ್ದೇಶಕ ಡಾ.ಡಿ.ಪಿ ಮಧುಸೂಧನಾಚಾರ್ಯ, ಮೈಸೂರಿನ ಶ್ರೀಮನ್ಮಹಾರಾಜ ಸಂಸ್ಕೃತ ಮಹಾಪಾಠ ಶಾಲೆಯ ಪ್ರಾಂಶುಪಾಲ ಡಾ.ಬಿ. ಸತ್ಯನಾರಾಯಣ, ಪ್ರಾಚ್ಯವಿದ್ಯಾ ಸಂಶೋಧನಾಲಯದ ನಿವೃತ್ತ ಉಪ ನಿರ್ದೇಶಕ ವಿದ್ವಾನ್ ಡಾ.ಟಿ.ವಿ ಸತ್ಯನಾರಾಯಣ ಮೊದಲಾದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

5 ಪಾಲಿಕೆಗಳಲ್ಲಿ ಜಯಭೇರಿ ಬಾರಿಸಲು ಬಿಜೆಪಿಗೆ ಒಳ್ಳೆ ಅವಕಾಶ
ಸಿಎಂ ಗಾದಿ ಸಂಚಲನ : ನಾನು ಸಿಎಂ ಆಗಲಿ ಎಂಬುದು ಜನರ ಬಯಕೆ ಎಂದರು ಡಿಕೆಶಿ