ಮಾದಿಗ ಸಮುದಾಯ ಅಭಿವೃದ್ಧಿಗೆ ಸರ್ಕಾರ ಬದ್ಧ

KannadaprabhaNewsNetwork |  
Published : Sep 02, 2024, 02:01 AM IST
ಪೋಟೋ೧ಸಿಎಲ್‌ಕೆ೧ ಚಳ್ಳಕೆರೆ ನಗರದ ದಲ್ಲಾಲರ ಸಮುದಾಯ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪ್ರತಿಭಾಪುರಸ್ಕಾರ ಮತ್ತು ನಿವೃತ್ತ ನೌಕರರಿಗೆ ಸನ್ಮಾನ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಉದ್ಘಾಟಿಸಿದರು. | Kannada Prabha

ಸಾರಾಂಶ

ಚಳ್ಳಕೆರೆ ನಗರದ ದಲ್ಲಾಲರ ಸಮುದಾಯ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಮತ್ತು ನಿವೃತ್ತ ನೌಕರರಿಗೆ ಸನ್ಮಾನ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಚಳ್ಳಕೆರೆ

ಮಾದಿಗ ಸಮುದಾಯದ ಸರ್ವತೋಮುಖ ಅಭಿವೃದ್ಧಿಗೆ ಸರ್ಕಾರ ಸದಾ ಶ್ರಮಿಸುತ್ತಿದೆ ಎಂದು ಜಿಲ್ಲಾ ಉಸ್ತುವಾರಿ, ಯೋಜನಾ ಮತ್ತು ಸಾಂಖ್ಯಿಕ ಇಲಾಖೆ ಸಚಿವ ಡಿ.ಸುಧಾಕರ್ ತಿಳಿಸಿದರು.

ದಲ್ಲಾಲರ ಸಮುದಾಯ ಭವನದಲ್ಲಿ ಜಿಲ್ಲಾ ಮಾದಿಗ ನೌಕರರ ಸಾಂಸ್ಕೃತಿಕ ಸಂಘದ ತಾಲೂಕು ಘಟಕ ಹಾಗೂ ನಿವೃತ್ತ ಮಾದಿಗ ನೌಕರರ ಕ್ಷೇಮಾಭಿವೃದ್ಧಿ ಸಂಘ ಸಂಯುಕ್ತಾಶ್ರಯದಲ್ಲಿ ನಡೆದ ಎಸ್‌ಎಸ್‌ಎಲ್‌ಸಿ, ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ನಿವೃತ್ತ ನೌಕರರ ಸನ್ಮಾನ ಸಮಾರಂಭವನ್ನು ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಶೋಷಿತ ಸಮಾಜಕ್ಕೆ ಪ್ರಜ್ವಲದ ಬೆಳಕನ್ನು ನೀಡಿದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‌ರವರ ಆದರ್ಶಗಳು ಸಮಾಜಕ್ಕೆ ಶ್ರೀರಕ್ಷೆಯಾಗಿದೆ. ಯಾವುದೇ ಕಾರಣಕ್ಕೂ ಈ ಸಮುದಾಯ ಚಿಂತನೆ ಮಾಡುವ ಅಗತ್ಯವಿಲ್ಲ ಎಂದು ಹೇಳಿದರು.

ತಾಲೂಕು ಮಾದಿಗ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಡಿ.ಟಿ.ಜಗನ್ನಾಥ ಮಾತನಾಡಿ, ಮಾದಿಗ ನೌಕರ ಸಾಂಸ್ಕೃತಿಕ ಸಂಘ 1998ರಲ್ಲಿ ಚಿತ್ರದುರ್ಗ ಜಿಲ್ಲೆಯಲ್ಲಿ ಉದ್ಘಾಟನೆಯಾಗಿದ್ದು, ಸಮುದಾಯದ ಪ್ರತಿಭಾವಂತ ಮಕ್ಕಳನ್ನು ಗುರುತಿಸಿ, ಗೌರವಿಸುವ ಕಾರ್ಯವನ್ನು ಮಾದಾರ ಚನ್ನಯ್ಯಸ್ವಾಮಿ ನೇತೃತ್ವದಲ್ಲಿ ಈ ಸಂಘಟನೆ ಆರಂಭಗೊಂಡಿದೆ. ಅಂದಿನಿಂದ ನಿರಂತರವಾಗಿ 37 ವರ್ಷಗಳ ಕಾಲ ಈ ಕಾರ್ಯ ಮುಂದುವರಿಸಿದೆ. ಇದರಿಂದ ಸಮುದಾಯದ ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ ಹೆಚ್ಚಿದೆ ಎಂದು ಹೇಳಿದರು.

ದಿವ್ಯಸಾನ್ನಿಧ್ಯ ವಹಿಸಿದ್ದ ಹಿರಿಯೂರು ಕೋಡಿಹಳ್ಳಿ ಆದಿಜಾಂಭವ ಶಾಖಾಮಠದ ಷಡಕ್ಷರಿ ಮುನಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಸಮುದಾಯದ ಕ್ರಿಯಾಶೀಲ ಚಟುವಟಿಕೆಗೆ ಕೀಳಿರಿಮೆ ಎಂದಿಗೂ ಅಡ್ಡಿಯಾಗಬಾರದು. ಇಂದಿಗೂ ಈ ಸಮುದಾಯದ ಅಸಮಾನತೆ, ಅವಮಾನದಿಂದ ಕುಗ್ಗಿದೆ. ಮುಂದಿನ ದಿನಗಳಲ್ಲಾದರೂ ಸಮುದಾಯ ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಇಂತಹ ಸಮಾಜಮುಖಿ ಕಾರ್ಯಗಳ ಮೂಲಕ ಕ್ರಿಯಾಶೀಲತೆ ಹೆಚ್ಚಿಸಬೇಕು ಎಂದರು.

ಪ್ರೊ.ಗುರುಮೂರ್ತಿ ಮಾತನಾಡಿ, ನೂರಾರು ವರ್ಷಗಳಿಂದ ಮಾದಿಗ ಸಮುದಾಯದಲ್ಲಿ ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸುವ ಕಾರ್ಯ ನಡೆಯದ ಕಾರಣ ಪ್ರತಿಭಾವಂತ ವಿದ್ಯಾರ್ಥಿಗಳು ಹೊರಬರಲು ಸಾಧ್ಯವಾಗಿಲ್ಲ. ಆದರೆ, ಇತ್ತೀಚೆಗೆ ಸಮುದಾಯದ ವಿದ್ಯಾರ್ಥಿಗಳು ಪ್ರತಿಭೆಗೆ ಆರ್ಹರು ಎಂಬುವುದನ್ನು ಗುರುತಿಸಿಕೊಳ್ಳಲು ಸಾಧ್ಯವಾಗಿರುವುದಕ್ಕೆ ಸಂತಸವಾಗಿದೆ ಎಂದರು.

ಮಾದಿಗ ನೌಕರರ ಸಾಂಸ್ಕೃತಿಕ ಸಂಘ ತಾಲೂಕು ಅಧ್ಯಕ್ಷ ಡಿ.ನಾಗರಾಜ ಮಾತನಾಡಿ, ಇಂದಿನ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ 40 ಎಸ್‌ಎಸ್‌ಎಲ್‌ಸಿ, 20 ಪಿಯುಸಿ ಹಾಗೂ 15 ಸಮುದಾಯದ ನಿವೃತ್ತ ನೌಕರರನ್ನು ಸನ್ಮಾನಿಸಲಾಗಿದೆ. ಪ್ರತಿಭಾ ಪುರಸ್ಕಾರದ ಮೂಲಕ ಜನಾಂಗದ ಐಕ್ಯತೆಗೆ ಪ್ರಾಮಾಣಿಕ ಪ್ರಯತ್ನ ಮುಂದುವರೆದಿದೆ. ಸಮಾಜದ ಹಲವಾರು ಸಮಸ್ಯೆಗಳನ್ನು ಎದುರಿಸಿ ಅಭಿವೃದ್ಧಿ ಪಥದತ್ತ ನಾವೆಲ್ಲರೂ ಸಾಗಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಜೈತುಂಬಿ, ಉಪಾಧ್ಯಕ್ಷ ಒ.ಸುಜಾತ, ಸುಮಕ್ಕ, ಕೆ.ವೀರಭದ್ರಪ್ಪ, ಎಚ್.ತಿಪ್ಪೇಸ್ವಾಮಿ, ಬಿ.ಆನಂದಕುಮಾರ್, ನಾಗರಾಜು, ಕಾವ್ಯ, ಮುಖ್ಯ ಎಂಜಿನಿಯರ್‌ ಕೆ.ಬಿ.ಜಗದೀಶ್, ನಿವೃತ್ತ ಎಸಿ ಎಂ.ಮಲ್ಲಿಕಾರ್ಜುನ್, ಡಿ.ದಯಾನಂದ, ಡಿ.ಟಿ.ಶ್ರೀನಿವಾಸ್, ಎಚ್.ಗುರುಮೂರ್ತಿ, ಕ್ಷೇಮಾಭಿವೃದ್ಧಿ ಸಂಘ ಗೌರವಾಧ್ಯಕ್ಷ ಟಿ.ಚೌಡಣ್ಣ, ಕಾರ್ಯದರ್ಶಿ ವೈ.ಆನಂದಮೂರ್ತಿ, ಉಪಾಧ್ಯಕ್ಷ ರಾಮಣ್ಣ, ಎಚ್.ಹನುಮಂತಪ್ಪ, ವಿಷ್ಣುವರ್ಧನ, ಎಸ್.ಬಿ.ತಿಪ್ಪೇಸ್ವಾಮಿ, ಡಿ.ಟಿ.ಹನುಮಂತರಾಯ, ಶ್ರೀನಿವಾಸ್, ಮುರಳಿ ಮುಂತಾದವರು ಭಾಗವಹಿಸಿದ್ದರು.

ಸಮುದಾಯ ಪರ ಚಿಂತನೆಗೆ ಸಹಕಾರ: ಶಾಸಕ ರಘುಮೂರ್ತಿ

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಟಿ.ರಘುಮೂರ್ತಿ, ಮಾದಿಗ ಸಮುದಾಯವು ಮೂರು ಬಾರಿ ಶಾಸಕನಾಗಲು ಉತ್ತಮ ಸಹಕಾರ ನೀಡಿದೆ. ಈ ಸಮುದಾಯದ ಅಭಿವೃದ್ಧಿ ಪರ ಚಿಂತನೆಗೆ ನನ್ನ ಸಹಕಾರ ಯಾವಾಗಲು ಇದೆ. ಸಂಘದ ಪದಾಧಿಕಾರಿಗಳು ನಿವೇಶನದ ಬೇಡಿಕೆ ಸಲ್ಲಿಸಿದ್ದು, ಮುಂದಿನ ದಿನಗಳಲ್ಲಿ ಅದನ್ನು ಈಡೇರಿಸುವ ಪ್ರಾಮಾಣಿಕ ಪ್ರಯತ್ನ ಮಾಡುವೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿ ರಾಮ್‌ ಜಿ, ಅನುದಾನ ಕಡಿತ ವಿರುದ್ಧ ಇಂದು ರಾಜ್ಯ ಸಂಪುಟದಲ್ಲಿ ನಿರ್ಣಯ?
ಹಸ್ತಕ್ಷೇಪ ನಿಲ್ಲಿಸಿ ಎಂದ ಸಿದ್ದು, ಡಿಕೆ ಕೇರಳ ಸಿಎಂ ತಿರುಗೇಟು