ಕನ್ನಡಪ್ರಭ ವಾರ್ತೆ ಮಂಡ್ಯ
ನಾಗಮಂಗಲ ತಾಲೂಕಿನ ಎಚ್.ಎನ್.ಕಾವಲು, ಚಿಕ್ಕಜಟಕ, ದೊಡ್ಡ ಜಟಕ, ಕರಡಹಳ್ಳಿ ಮತ್ತಿತರ ಗ್ರಾಮಗಳಲ್ಲಿನ ಸರ್ಕಾರಿ ಭೂಮಿಯ ದರಖಾಸ್ತು ಮಂಜೂರಾತಿ ದಾಖಲೆಗಳಾದ ಸಾಗುವಳಿ ಚೀಟಿ, ವಿತರಣಾ ವಹಿ, ಅಧಿಕೃತ ಜ್ಞಾಪನ ಇನ್ನಿತರ ದಾಖಲೆಗಳನ್ನು ಅವರ ಅನುಕೂಲಕ್ಕೆ ತಕ್ಕಂತೆ ತಿದ್ದಿರುವುದು ಲೋಕಾಯುಕ್ತರ ತನಿಖೆಯಿಂದ ಸಾಬೀತಾಗಿದೆ. ಈ ಪ್ರಕರಣದ ವಿಚಾರಣೆಯನ್ನು ಪಾಂಡವಪುರ ಉಪ ವಿಭಾಗಾಧಿಕಾರಿ ನಡೆಸುತ್ತಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ ಎಂದು ಮುಖ್ಯಮಂತ್ರಿ, ಕಂದಾಯ ಸಚಿವರು, ಸರ್ಕಾರದ ಕಾರ್ಯದರ್ಶಿಗೆ ಪತ್ರ ಬರೆದು ಗಮನಸೆಳೆದಿದ್ದಾರೆ.
ಸರ್ಕಾರಿ ಜಮೀನು ಕಬಳಿಕೆ ಪ್ರಕರಣದಲ್ಲಿ ಆರೋಪ ಹೊತ್ತಿರುವ ಎಲ್.ಎಂ.ನಂದೀಶ್ ಕೂಡ ಪಾಂಡವಪುರ ಉಪವಿಭಾಗಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು. ಹಾಲಿ ಉಪವಿಭಾಗಾಧಿಕಾರಿ ಶ್ರೀನಿವಾಸ್ ಅವರು ತಮಗೆ ಸರಿಸಮನಾದ ಅಧಿಕಾರಿಯನ್ನು ಸರಿಯಾದ ಕ್ರಮದಲ್ಲಿ ವಿಚಾರಣೆ ನಡೆಸುವುದು ಅನುಮಾನಾಸ್ಪದವಾಗಿದೆ. ಈಗಾಗಲೇ ೬೯೪ ಪ್ರಕರಣಗಳಲ್ಲಿ ಅಪರಾಧಿತ ಸಂಚು ನಡೆದಿರುವುದರಿಂದ ಸಾವಿರಾರು ಕೋಟಿ ರು. ಸರ್ಕಾರಕ್ಕೆ ನಷ್ಟವಾಗಿದೆ. ಆದ ಕಾರಣ ಪ್ರಕರಣದ ತನಿಖೆಯನ್ನು ಲೋಕಾಯುಕ್ತ ಪೊಲೀಸ್ ವಿಭಾಗ ಅಥವಾ ಸಿಬಿಐಗೆ ವಹಿಸಿದರಷ್ಟೇ ಸತ್ಯಾಂಶ ಹೊರಬರಲಿದೆ ಎಂದರು.ನಾಗಮಂಗಲ ತಾಲೂಕಿನ ಗೊಲ್ಲರಹಳ್ಳಿ ಗ್ರಾಮದ ಸರ್ವೇ ನಂ.೫ರಲ್ಲಿ ೩೪.೩೯ ಎಕರೆ, ಸರ್ವೇ ನಂ.೮ರಲ್ಲಿ ೧೦.೨೨ ಎಕರೆ ಅರಣ್ಯ ಜಮೀನನ್ನು ಕಲ್ಲು ಗಣಿಗಾರಿಕೆಗೆ ಅನುಮತಿ ನೀಡಿ ಕೋಟ್ಯಂತರ ರು. ಆರ್ಥಿಕ ನಷ್ಟ ಉಂಟುಮಾಡಲಾಗಿದೆ. ಈ ವಿಷಯವಾಗಿ ಹಿಂದೆ ಇದ್ದ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸ್ ಠಾಣೆಯಲ್ಲಿ ಎಂಟು ಸರ್ಕಾರಿ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದು, ಈ ಅಧಿಕಾರಿಗಳ ವಿಚಾರಣೆ ನಡೆಸಲು ಸಕ್ಷಮ ಪ್ರಾಧಿಕಾರದಿಂದ ಅನುಮತಿ ಕೋರಲಾಗಿತ್ತು. ಇದೀಗ ಪ್ರಕರಣ ಲೋಕಾಯುಕ್ತ ಪೊಲೀಸ್ ವಿಭಾಗಕ್ಕೆ ಹಸ್ತಾಂತರವಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರ ಜಿಲ್ಲಾಧಿಕಾರಿಗಳಿಂದ ವರದಿ ಕೇಳಿತ್ತು. ಜಿಲ್ಲಾಧಿಕಾರಿ ನೇತೃತ್ವದಲ್ಲಿ ಅಪರ ಜಿಲ್ಲಾಧಿಕಾರಿ ನೇತೃತ್ವದಲ್ಲಿ ನೇಮಿಸಿದ್ದ ತನಿಖಾ ತಂಡ ಸುಳ್ಳು ವರದಿಯನ್ನು ನೀಡಿದ್ದು ಅದನ್ನೇ ಯಥಾವತ್ತಾಗಿ ಸರ್ಕಾರಕ್ಕೆ ಜಿಲ್ಲಾಧಿಕಾರಿ ಸಲ್ಲಿಸಿದ್ದಾರೆ ಎಂದು ದೂಷಿಸಿದರು.
ನಕಲಿ ಪ್ರಮಾಣಪತ್ರ ಸಲ್ಲಿಸಿದವರ ಅಮಾನತು ಇಲ್ಲ:
ಇದರ ನಡುವೆ ಸರ್ಕಾರಿ ಜಮೀನು ಕಬಳಿಕೆ ಪ್ರಕರಣದ ಕುರಿತು ಸಾರ್ವಜನಿಕರು ನೀಡಿದ ದೂರಿನನ್ವಯ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ನಡೆಸಿರುವ ತನಿಖೆಯಿಂದ ಸಾಬೀತಾಗಿದೆ. ಇದನ್ನು ಸರಿಯಾದ ದಾರಿಯಲ್ಲಿ ತನಿಖೆ ನಡೆಸಿ, ಸರ್ಕಾರದ ಬೊಕ್ಕಸಕ್ಕೆ ಆಗಿರುವ ನಷ್ಟವನ್ನು ಆರೋಪಿಗಳಿಂದ ಭರಿಸಬೇಕಿದೆ. ಹಾಗಾಗಿ ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ಈ ಎಲ್ಲಾ ಪ್ರಕರಣಗಳಲ್ಲಿ ಪ್ರಭಾವಿ ರಾಜಕಾರಣಿಗಳು, ಉನ್ನತಮಟ್ಟದ ಅಧಿಕಾರಿಗಳು, ಭಾಗಿಯಾಗಿರುವುದರಿಂದ ತನಿಖೆಯನ್ನು ಲೋಕಾಯುಕ್ತ ಪೊಲೀಸ್ ವಿಭಾಗ ಅಥವಾ ಸಿಬಿಐಗೆ ವಹಿಸುವಂತೆ ಒತ್ತಾಯಿಸಿದರು.