ಕನ್ನಡಪ್ರಭ ವಾರ್ತೆ ತುರುವೇಕೆರೆ
ಸರ್ಕಾರ ಇತ್ತೀಚೆಗೆ ಜಾರಿಗೆ ತಂದಿರುವ ಕಾವೇರಿ- 02 ತಂತ್ರಾಂಶ ದಸ್ತಾವೇಜುದಾರರ ಪಾಲಿಗೆ ಮರಣ ಶಾಸನವಾಗಿದೆ. ಕಾವೇರಿ- 02 ನಲ್ಲಿ ಸಿಟಿಜನ್ ಲಾಗಿನ್ ಗೆ ಅವಕಾಶ ನೀಡಿರುವುದರಿಂದ ಜನಸಾಮಾನ್ಯರಿಗೆ ಹಲವಾರು ವಿಷಯಗಳ ಕುರಿತು ಅರಿವಿರದೇ ತೊಂದರೆ ಅನುಭವಿಸುತ್ತಿದ್ದಾರೆ.
ಸಿಟಿಜನ್ ಲಾಗಿನ್ ನೀಡಿರುವುದರಿಂದ ಜನರಿಗೆ ಅನುಕೂಲವಾಗುವ ಬದಲು ತೊಂದರೆಯೇ ಜಾಸ್ತಿಯಾಗಿದೆ. ನಾವು ಪತ್ರ ಬರಹಗಾರರಿಗಾಗಿ ಇರುವ ಪರೀಕ್ಷೆಯನ್ನು ಎದುರಿಸಿ ಪಾಸಾಗಿ ಅರ್ಹತೆಯನ್ನು ಹೊಂದಿದವರಾಗಿದ್ದೇವೆ. ಆದರೆ ಈ ಸಿಟಿಜನ್ ಲಾಗಿನ್ ಇರುವುದರಿಂದ ಸಾರ್ವಜನಿಕರು ಸಾಕಷ್ಟು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಕೆಲವರು ವಕೀಲರ ಹೆಸರನ್ನು ಮತ್ತು ರುಜುವನ್ನು ದುರುಪಯೋಗಪಡಿಸಿಕೊಂಡು ನೋಂದಣಿ ಮಾಡಿಸಿಕೊಳ್ಳುತ್ತಿದ್ದಾರೆ. ನೋಂದಣಿ ಮಾಡಿಸುವ ವ್ಯಕ್ತಿಗಳಿಗೆ ಮುದ್ರಾಂಕ ಕಚೇರಿಯಲ್ಲಿರುವ ಮಾಹಿತಿಗಳು ಈ ಅನಧಿಕೃತ ವ್ಯಕ್ತಿಗಳಿಗೆ ಇರುವುದಿಲ್ಲ. ಸರ್ಕಾರ ಜನರಿಗೆ ಕುಳಿತಲ್ಲೇ ಸೌಲಭ್ಯ ದೊರೆಯಲಿದೆ ಎಂದು ಹೇಳುತ್ತದೆಯಾದರೂ ಸಹ ಕೋಟ್ಯಂತರ ರು. ಸರ್ಕಾರಕ್ಕೆ ಬರುವ ಆದಾಯ ಸೋರಿ ಹೋಗುತ್ತಿದೆ ಎಂದು ತಿಳಿಸಿದರು.ಜಿಲ್ಲಾ ಪತ್ರಬರಹಗಾರರ ಸಂಘದ ಸಂಘಟನಾ ಕಾರ್ಯದರ್ಶಿ ಬಿ.ಎನ್.ಮಂಜುನಾಥ್ (ಪಾಪು), ಹಲವಾರು ಸೈಬರ್ ಕೇಂದ್ರದವರು ಅಧಿಕೃತವಾಗೇ ಬೋರ್ಡ್ ಗಳನ್ನು ಹಾಕಿ ನೋಂದಣಿ ಮಾಡಿಸುವುದಾಗಿ ಘೋಷಿಸಿಕೊಂಡಿದ್ದಾರೆ. ಅವರಿಗೆ ಯಾವುದೇ ಆದೇಶ ಇರುವುದಿಲ್ಲ. ಈ ಕುರಿತು ಪಟ್ಟಣ ಪಂಚಾಯಿತಿ ಅಧಿಕಾರಿಗಳು ಮತ್ತು ತಹಸೀಲ್ದಾರ್ ರವರು ಸೂಕ್ತ ಕ್ರಮ ಜರುಗಿಸಬೇಕು. ರಾಜ್ಯದಲ್ಲಿ ಸುಮಾರು 17 ಸಾವಿರ ಪತ್ರಬರಹಗಾರರು ಇದ್ದಾರೆ. ಇವರನ್ನೇ ನಂಬಿರುವ ಕುಟುಂಬಗಳೂ ಇವೆ. ಸಾರ್ವಜನಿಕವಾಗಿ ಸಿಟಿಜನ್ ಲಾಗಿನ್ ನೀಡಿದರೆ ಈ ವೃತ್ತಿಯನ್ನೇ ನಂಬಿರುವ ಕುಟುಂಬಗಳ ಗತಿ ಏನು ಎಂದು ಪ್ರಶ್ನಿಸಿದರು. ಪತ್ರಬರಹಗಾರರಿಗೆ ಸೂಕ್ತ ರಕ್ಷಣೆ ಇಲ್ಲದಿರುವುದರಿಂದ ಡಿ.16 ರಂದು ರಾಜ್ಯಾದ್ಯಂತ ಹೋರಾಟ ಹಮ್ಮಿಕೊಳ್ಳಲಾಗಿದೆ. ತಾಲೂಕಿನಲ್ಲಿ ಡಿ.15 ಮತ್ತು 16 ರಂದು ಲೇಖನಿ ಸ್ಥಗಿತವನ್ನು ಹಮ್ಮಿಕೊಳ್ಳಲಾಗಿದೆ. ಡಿ.16 ರಂದು ರಾಜ್ಯಮಟ್ಟದ ಪ್ರತಿಭಟನೆಯಲ್ಲಿ ಆಗುವ ತೀರ್ಮಾನಕ್ಕೆ ನಾವೆಲ್ಲರೂ ಬದ್ಧರಾಗಿದ್ದೇವೆ. ಡಿ.15 ಮತ್ತು 16 ರಂದು ಸಾರ್ವಜನಿಕರಿಗೆ ಆಗುವ ಅನಾನುಕೂಲಕ್ಕೆ ನಾವೆಲ್ಲರೂ ವಿಷಾದಿಸುತ್ತಿದ್ದೇವೆಂದು ಹೇಳಿದರು.
ಪತ್ರ ಬರಹಗಾರರಾದ ಕಣತೂರು ಹರೀಶ್, ಅರೆಹಳ್ಳಿ ಜಗದೀಶ್, ಕಾಚಿಹಳ್ಳಿ ಶಿವಕುಮಾರ್, ನವೀನ್ ಕುಮಾರ್, ಕಲ್ಲೇಶ್, ಅಜ್ಜೇನಹಳ್ಳಿ ಕಂಚೀಪತಿ, ಸ್ವರ್ಣಕುಮಾರ್, ತಾವರೇಕೆರೆ ಶಿವಕುಮಾರಸ್ವಾಮಿ, ಬಸವರಾಜು, ಬಿ.ಎನ್.ಶಶಿಕುಮಾರ್, ಗುಡ್ಡೇನಹಳ್ಳಿ ಪುಟ್ಟರಾಮಯ್ಯ, ಕೊಡಗೀಹಳ್ಳಿ ಪರಮೇಶ್, ಕಲ್ಕೆರೆ ಪುಟ್ಟಸ್ವಾಮಿಗೌಡ, ಎಸ್.ದೇವರಾಜು, ಕಲ್ಕೆರೆ ಶಿವಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.