ಶೀಘ್ರದಲ್ಲೇ ಓಪಿಎಸ್‌ ಕುರಿತು ಸರ್ಕಾರಿ ಆದೇಶ

KannadaprabhaNewsNetwork |  
Published : Sep 06, 2026, 01:15 AM IST
 | Kannada Prabha

ಸಾರಾಂಶ

ಬಲಿಷ್ಠ ರಾಷ್ಟ್ರ ನಿರ್ಮಾಣದ ಶಿಲ್ಪಿಗಳಾದ ಶಿಕ್ಷಕರು ಹಾಗೂ ಸರ್ಕಾರಿ ನೌಕರರ ಬಹಳ ದಿನಗಳ ಬೇಡಿಕೆಯಾದ ಹಳೇ ಪಿಂಚಣಿ ಪದ್ದತಿಯನ್ನು ಜಾರಿಗೊಳಿಸಲು ರಾಜ್ಯ ಸರ್ಕಾರ ಬದ್ಧವಾಗಿದ್ದು ಶೀಘ್ರದಲ್ಲೇ ಅಧಿಕೃತ ಆದೇಶ ಹೊರಡಿಸಲಾಗುವುದು ಎಂದು ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವ ಡಾ. ಜಿ. ಪರಮೇಶ್ವರ್ ಘೋಷಣೆ ಮಾಡಿದರು.

ಕನ್ನಡಪ್ರಭ ವಾರ್ತೆ, ತುಮಕೂರು

ಬಲಿಷ್ಠ ರಾಷ್ಟ್ರ ನಿರ್ಮಾಣದ ಶಿಲ್ಪಿಗಳಾದ ಶಿಕ್ಷಕರು ಹಾಗೂ ಸರ್ಕಾರಿ ನೌಕರರ ಬಹಳ ದಿನಗಳ ಬೇಡಿಕೆಯಾದ ಹಳೇ ಪಿಂಚಣಿ ಪದ್ದತಿಯನ್ನು ಜಾರಿಗೊಳಿಸಲು ರಾಜ್ಯ ಸರ್ಕಾರ ಬದ್ಧವಾಗಿದ್ದು ಶೀಘ್ರದಲ್ಲೇ ಅಧಿಕೃತ ಆದೇಶ ಹೊರಡಿಸಲಾಗುವುದು ಎಂದು ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವ ಡಾ. ಜಿ. ಪರಮೇಶ್ವರ್ ಘೋಷಣೆ ಮಾಡಿದರು.

ನಗರದ ಎಂಪ್ರೆಸ್ ಕಾಲೇಜು ಸಭಾಂಗಣದಲ್ಲಿ ಜಿಲ್ಲಾಡಳಿತ ಮತ್ತು ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಆಯೋಜಿಸಿದ್ದ ಭಾರತ ರತ್ನ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ 139ನೇ ಜನ್ಮ ದಿನಾಚರಣೆ ಹಾಗೂ ಪ್ರಶಸ್ತಿ ಪುರಸ್ಕೃತ ಮತ್ತು ನಿವೃತ್ತ ಶಿಕ್ಷಕರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಹೊಸ ಪಿಂಚಣಿ ಪದ್ದತಿ ರದ್ದುಗೊಳಿಸಿ ಹಳೇ ಪಿಂಚಣಿ ಪದ್ದತಿಯನ್ನು ಜಾರಿಗೊಳಿಸುವ ಕುರಿತು ತಾವು ಮತ್ತು ಮುಖ್ಯಮಂತ್ರಿಗಳು ಈಗಾಗಲೇ ಚರ್ಚಿಸಿದ್ದು, ಸದ್ಯದಲ್ಲೇ ಈ ತೀರ್ಮಾನ ಹೊರ ಬೀಳಲಿದೆ. ಇದು ಸರ್ಕಾರದ ಬಹಳ ದೊಡ್ಡ ತೀರ್ಮಾನವಾಗಲಿದೆ ಎಂದರು. ಹಳೇ ಪಿಂಚಣಿ ಪದ್ದತಿ ಜಾರಿಯಿಂದ ಶಿಕ್ಷಕರು, ಸರ್ಕಾರಿ ನೌಕರರು ಸೇರಿದಂತೆ ಬಹಳಷ್ಟು ಮಂದಿಗೆ ಅನುಕೂಲವಾಗಲಿದೆ. ಇದರಿಂದ ರಾಜ್ಯ ಸರ್ಕಾರಕ್ಕೆ ಆರ್ಥಿಕವಾಗಿ ದೊಡ್ಡ ಹೊರೆಯೂ ಆಗಲಿದೆ ಎಂದು ಅವರು ಹೇಳಿದರು.

ಚುನಾವಣೆ ಸಂದರ್ಭದಲ್ಲಿ ಪ್ರಣಾಳಿಕೆ ಸಿದ್ದಪಡಿಸುವಾಗ ಶಿಕ್ಷಕರ ಸಂಘದ ಪದಾಧಿಕಾರಿಗಳು ತಮ್ಮನ್ನು ಭೇಟಿಯಾಗಿ ಓಪಿಎಸ್ ಜಾರಿಗೊಳಿಸುವಂತೆ ಮನವಿ ಮಾಡಿದ್ದರು. ಈ ಬಗ್ಗೆ ಪಕ್ಷದ ವರಿಷ್ಠರೊಂದಿಗೆ ಚರ್ಚಿಸಿ ಪ್ರಣಾಳಿಕೆಯಲ್ಲಿ ಸೇರಿಸಲಾಗಿತ್ತು. ಕಾರಣಾಂತರಗಳಿಂದ ಮೂರು ವರ್ಷ ವಿಳಂಬವಾಗಿದೆ. ಈ ಬಗ್ಗೆ ಶೀಘ್ರದಲ್ಲೇ ಆದೇಶ ಹೊರಡಿಸಲಾಗುವುದು. ಆರ್ಥಿಕ ಇಕ್ಕಟ್ಟಿನ ಪರಿಸ್ಥಿತಿಯಲ್ಲೂ ಕೂಡ ಈ ತೀರ್ಮಾನವನ್ನು ನಿಮಗಾಗಿ ತೆಗೆದುಕೊಂಡಿದ್ದೇವೆ ಎಂದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ನಗರ ಶಾಸಕ ಜಿ.ಬಿ. ಜ್ಯೋತಿಗಣೇಶ್ ಮಾತನಾಡಿದರು.

ಇದೇ ಸಂದರ್ಭದಲ್ಲಿ ಹಿರಿಯ ಪ್ರಾಥಮಿಕ ಪಾಠಶಾಲೆ, ಕಿರಿಯ ಪ್ರಾಥಮಿಕ ಪಾಠಶಾಲೆ ಹಾಗೂ ಪ್ರೌಢಶಾಲಾ ವಿಭಾಗದಿಂದ 18 ಮಂದಿ ಶಿಕ್ಷಕರಿಗೆ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಜತೆಗೆ ಶಿಕ್ಷಣ ಇಲಾಖೆಯಲ್ಲಿ ಸುದೀರ್ಘ ಸೇವೆ ಸಲ್ಲಿರುವ ಮುಖ್ಯ ಶಿಕ್ಷಕರುಗಳು, ನಿವೃತ್ತ ಶಿಕ್ಷಕರುಗಳು, ಖಾಸಗಿ ಶಾಲೆಯ ಶಿಕ್ಷಕರಗಳನ್ನು ಸನ್ಮಾನಿಸಲಾಯಿತು.

ಸಮಾರಂಭದಲ್ಲಿ ಶಾಸಕ ಬಿ. ಸುರೇಶ್ ಗೌಡ, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಸಿಇಒ ಅಶ್ವಿಜ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಚಂದ್ರಶೇಖರ್‌ಗೌಡ, ಹಾಲನೂರು ಲೇಪಾಕ್ಷ್, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ರಘುಚಂದ್ರ, ಉಪನಿರ್ದೇಶಕ ಮಂಜುನಾಥ್, ಕ್ಷೇತ್ರ ಶಿಕ್ಷಣಾಧಿಕಾರಿ ಎಂ. ಹನುಮಂತಪ್ಪ, ಉಮೇಶ್, ಪಿ.ಜಿ. ತಿಮ್ಮೇಗೌಡ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಘನತೆ ಗಾಳಿಗೆ ಬಿಟ್ಟು, ಭಾಷಣದಲ್ಲಿ ಗೌರವ ಕೊಟ್ಟು ಹೊರಟರು!
ದೇವದುರ್ಗದಲ್ಲಿ ಪ್ರಜಾ ಸೇವೆ ಅಂದೋಲನಕ್ಕೆ ಶಾಸಕಿ ಚಾಲನೆ