ಕನ್ನಡಪ್ರಭ ವಾರ್ತೆ ರಾಯಚೂರು
ಸ್ಥಳೀಯ ಪಂಡಿತ್ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಜಿಲ್ಲಾ ಹಾಗೂ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ ಶಿಕ್ಷಕರ ಪ್ರಶಸ್ತಿ ಪ್ರದಾನ ಸಮಾರಂಭವು ಅವಸರ, ಗೊಂದಲ, ಅವಮಾನಗಳ ಮಯವಾಗಿ ಮಾರ್ಪಟ್ಟಿತ್ತು.ಜಿಲ್ಲಾಡಳಿತ, ಜಿಪಂ, ಮಹಾನಗರ ಪಾಲಿಕೆ ಹಾಗೂ ಶಾಲಾ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಭಾರತ ರತ್ನ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ 138ನೇ ಜನ್ಮದಿನೋತ್ಸವ ಪ್ರಯುಕ್ತ ರಂಗಮಂದಿರದಲ್ಲಿ ನಡೆದ ಶಿಕ್ಷಕರ ದಿನಾಚರಣೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಅಜಯ್ ಧರ್ಮಸಿಂಗ್ ಅವರು ಸಭೆ ಘನತೆಯನ್ನು ಗಾಳಿಗೆ ತೂರಿ, ಭಾಷಣದಲ್ಲಿ ಶಿಕ್ಷಕರಿಗೆ ಗೌರವ ಕೊಟ್ಟು ಹೊರಟು ಹೋದರು.
ಇದ್ದಂತಹ ಕೆಲವೇ ಸಮಯದಲ್ಲಿ ಅವಸರ ಮಾಡಿದ್ದರಿಂದ ಕಾರ್ಯಕ್ರಮ ಆರಂಭದಿಂದಲೂ ಗೊಂದಲಕ್ಕೀಡಾಯಿತು. ಮಾನ್ವಿ ಪಟ್ಟಣದಲ್ಲಿ ಪ್ರಜಾ ಸೇವಾ ಆಂದೋಲನದಲ್ಲಿ ಭಾಗವಹಿಸುವ ಭರದಲ್ಲಿ ಶಿಕ್ಷಕರು ವರ್ಷಕ್ಕೊಂದು ಸಲ ಹಬ್ಬದಂತೆ ಆಚರಿಸಿಕೊಳ್ಳುವ ಕಾರ್ಯಕ್ರಮದ ಶಿಸ್ತನ್ನು ಕೆಡೆಸಿದರು.ನಿಗದಿತ ಸಮಯಕ್ಕಿಂತ ಮುಂಚಿತವಾಗಿಯೇ ಅವಸರದಲ್ಲಿಯೇ ವೇದಿಕೆ ಕಾರ್ಯಕ್ರಮಕ್ಕೆ ಆಗಮಿಸಿದ ಸಚಿವರು, ಮಾನ್ವಿಗೆ ಅರ್ಜೆಂಟಾಗಿ ಹೋಗುವುದರ ಕುರಿತು ನಿರ್ದೇಶನ ನೀಡಿದ್ದರಿಂದ ಶಿಕ್ಷಣ ಇಲಾಖೆ ಅಧಿಕಾರಿಗಳು ಗೊಂದಲಕ್ಕೀಡಾದ್ದರು, ನಾಡಗೀತೆ ಆರಂಭದಿಂದ ಹಿಡಿದು, ಸ್ವಾಗತ, ಉದ್ಘಾಟನೆ ಹಾಗೂ ಚುಟುಕು ಭಾಷಣ ಹಾಗೂ ಆಯ್ದ ಕೆಲ ಶಿಕ್ಷಕರಿಗೆ ಮಾತ್ರ ಪ್ರಶಸ್ತಿ ಪ್ರದಾನ ಮಾಡಿ 20 ನಿಮಿಷದಲ್ಲಿಯೇ ವೇದಿಕೆಯಿಂದ ಕೆಳಗಿಳಿದು ಹೊರಟು ಹೋದರು.
ಭಾಷಣದಲ್ಲಿ ಶಿಕ್ಷಕರಿಗೆ ಗೌರವ ಕೊಟ್ಟ ಸಚಿವ: ವೇದಿಕೆಯಲ್ಲಿ ಅವಸರ ಮಾಡಿದ ಉಸ್ತುವಾರಿ ಸಚಿವರು, ಕಾರ್ಯಕ್ರಮದ ಉದ್ಘಾಟನೆ ನಂತರ ತಾವು ಮಾಡಿದ ಚುಟುಕು ಭಾಷಣದಲ್ಲಿ ಮಾತ್ರ ಶಿಕ್ಷಕರಿಗೆ ಗೌರವಕೊಟ್ಟರು.
ತಮ್ಮ ಭಾಷಣದಲ್ಲಿ ಮಾತನಾಡಿದ ಸಚಿವರು, ಜಗತ್ತಿನಲ್ಲಿ ನನ್ನನ್ನು ರಾಷ್ಟ್ರಪತಿಯಾಗಿ ನೆನಪಿಸಿಕೊಳ್ಳುವುದಕ್ಕಿಂತ, ಒಬ್ಬ ಶಿಕ್ಷಕನಾಗಿ ನೆನಪಿಸಿಕೊಳ್ಳುವುದು ಅತ್ಯಂತ ಸೂಕ್ತ ಎಂದು ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರು ಮಹತ್ವದ ಸಂದೇಶವನ್ನು ನೀಡಿದ್ದಾರೆ. ವೈದ್ಯರು ಅನೇಕ ರೋಗಿಗಳಿಗೆ ಚಿಕಿತ್ಸೆ ನೀಡಬಹುದು, ಎಂಜಿನಿಯರ್‌ಗಳು ಹಲವು ಸೇತುವೆ ಮತ್ತು ಕಟ್ಟಡಗಳನ್ನು ನಿರ್ಮಿಸಬಹುದು, ವಕೀಲರು ಅನೇಕ ಸಮಸ್ಯೆಗಳನ್ನು ಬಗೆಹರಿಸಬಹುದು, ವಿಜ್ಞಾನಿಗಳು ಹೊಸ ಆವಿಷ್ಕಾರಗಳನ್ನು ಮಾಡಬಹುದು. ಆದರೆ ಇವರೆಲ್ಲರ ಜೀವನದಲ್ಲೂ ಅವರನ್ನು ಮುನ್ನಡೆಸಿದ ಒಬ್ಬ ಶಿಕ್ಷಕ ಇದ್ದೇ ಇರುತ್ತಾರೆ. ಪ್ರತಿಯೊಬ್ಬರ ಸಾಧನೆಯ ಹಿಂದೆ ಒಬ್ಬ ಶಿಕ್ಷಕನ ಮಾರ್ಗದರ್ಶನವಿದೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು. ಮನುಷ್ಯನ ಜೀವನದಲ್ಲಿ ಗುರುಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಮುಂದೆ ಗುರಿ ಹಿಂದೆ ಗುರು ಇದ್ದರೆ ಜೀವನದಲ್ಲಿ ಯಾವುದೇ ಸಾಧನೆಯನ್ನು ಮಾಡಬಹುದು, ಡಾ. ಬಿ.ಆರ್. ಅಂಬೇಡ್ಕರ್ ಅವರು ನೀಡಿದ ಶಿಕ್ಷಣ, ಸಂಘಟನೆ ಮತ್ತು ಹೋರಾಟ ಎಂಬ ಸಂದೇಶವನ್ನು ಉಲ್ಲೇಖಿಸಿದ ಅವರು, ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುವ ಅಗತ್ಯವಿದೆ ಎಂದು ನುಡಿದರು.
ಸಚಿವರ ಈ ನಡೆ ವಿರುದ್ಧ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನೂರಾರು ಶಿಕ್ಷಕರಿಗೆ ಬೇಸರ ಉಂಟು ಮಾಡಿದೆ, ಕೆಲ ಶಿಕ್ಷಕರು ನೇರವಾಗಿಯೇ ಬೇಸರ ವ್ಯಕ್ತಪಡಿಸಿದರು.ಈ ವೇಳೆ ಕರ್ನಾಟಕ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ, ಗ್ರಾಮೀಣ ಕ್ಷೇತ್ರದ ಶಾಸಕ ಬಸನಗೌಡ ದದ್ದಲ್, ಮಾಜಿ ಸಚಿವರು ಹಾಗೂ ಹಾಲಿ ವಿಧಾನ ಪರಿಷತ್ ಸದಸ್ಯ ಎನ್.ಎಸ್.ಭೋಸರಾಜು, ಡಿಡಿಪಿಐ ಮಲ್ಲಿಕಾರ್ಜುನ, ಡಯಟ್ ಉಪ ನಿರ್ದೇಶಕ ಚಂದ್ರಶೇಖರ ಭಂಡಾರಿ, ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ಈರಣ್ಣ ಕೋಸಗಿ, ಶಿಕ್ಷಕರ ಸಂಘದ ಪದಾಧಿಕಾರಿಗಳು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.