ದೇವದುರ್ಗ: ರಾಜ್ಯ ಸರ್ಕಾರ ಪ್ರಾರಂಭಿಸಿರುವ ಪ್ರಜಾಸೇವಾ ಅಂದೋಲನಾ ಕಾರ್ಯಕ್ರಮದ ಉದ್ದೇಶ ಸ್ವಾಗತಾರ್ಹವಾಗಿದ್ದು, ಆದರೆ ಇದರ ಸದುಪಯೋಗ ಅರ್ಥಪೂರ್ಣವಾಗಿ ಜಾರಿಯಾಗಬೇಕೆಂದು ಶಾಸಕಿ ಕರೆಮ್ಮ ಜಿ.ನಾಯಕ ತಿಳಿಸಿದರು.
ಪಟ್ಟಣದ ಶ್ರೀ ಖೆಣೇದ್ ಮುರಿಗೆಪ್ಪ ಸಾಹು ಕಲ್ಯಾಣ ಮಂಟಪದಲ್ಲಿ ಶನಿವಾರ ತಾಲೂಕು ಆಡಳಿತ ಆಯೋಜಿಸಿದ್ದ ಸೇವಾ ಅಂದೋಲನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಜನಸಾಮಾನ್ಯರ ಸಮಸ್ಯೆಗಳು, ದೂರುಗಳನ್ನು ಅವಲೋಕಿಸಲು ಒಳ್ಳೆಯ ಅವಕಾಶವಿದೆ. ಈ ಕಾರ್ಯಕ್ರಮದ ಕುರಿತು ವ್ಯಾಪಕ ಪ್ರಚಾರವಾಗಬೇಕು. ಮಾಸಾಶನಗಳ ಸ್ಥಗಿತ, ವಿದ್ಯುತ್ ಕಡಿತ ಸೇರಿದಂತೆ ಅನೇಕ ಸಮಸ್ಯೆಗಳಿವೆ. ಅಧಿಕಾರಿಗಳು ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದಾಗ ಮಾತ್ರ ಉದ್ದೇಶ ಸಾರ್ಥಕತೆ ಪಡೆಯುತ್ತದೆ.ದೇವದುರ್ಗ ಮತ್ತು ಅರಕೇರಾ ತಾಲೂಕುಗಳು ಬರಗಾಲ ಪೀಡಿತ ಪಟ್ಟಿಯಲ್ಲಿ ಸೇರ್ಪಡೆಗೊಂಡಿವೆ.ಆದರೆ ಪರಿಹಾರ ಕ್ರಮಗಳನ್ನು ಜಾರಿಗೊಳಿಸುವಲ್ಲಿ ಅಧಿಕಾರಿಗಳ ತಂಡದ ಪ್ರಮುಖ ಪಾತ್ರವಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಪೂರಕ ಮಾಹಿತಿ ನೀಡಿರುವ ಹಿನ್ನೆಲೆಯಲ್ಲಿ ಬರಗಾಲ ಪಟ್ಟಿಗೆ ಸೇರಲು ಕಾರಣವಾಗಿದೆ. ತಿಂಗಳಲ್ಲಿ ಪ್ರತಿ ಶನಿವಾರ ನಡೆಯುವ ಈ ಕಾರ್ಯಕ್ರಮದ ಕುರಿತು ಎಲ್ಲಾ ಗ್ರಾಮಗಳಲ್ಲಿ ಡಂಗುರ ಹಾಕಿ ಪ್ರಚಾರ ಮಾಡಬೇಕು. ಈ ಕಾರ್ಯಕ್ರಮಕ್ಕೆ ನಾನೂ ಖುದ್ದಾಗಿ ಪಾಲ್ಗೊಂಡು ಸಮಸ್ಯೆಗಳ ಕುರಿತು ಚರ್ಚಿಸೋಣ. ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿರಬೇಕೆಂದು ಅನೇಕ ಬಾರಿ ಸೂಚನೆ ನೀಡಿದರೂ ಪ್ರಯೋಜವಾಗುತ್ತಿಲ್ಲ ಎಂದು ಶಾಸಕಿ ಕರೆಮ್ಮ ಜಿ.ನಾಯಕ ತಿಳಿಸಿದರು.
ಕಂದಾಯ, ಪುರಸಭೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಆರೋಗ್ಯ,ತಾ.ಪಂ ಸೇರಿದಂತೆ ವಿವಿಧ ಇಲಾಖೆಗಳು ಏರ್ಪಡಿಸಿದ್ದ ಅರ್ಜಿ ಆಹ್ವಾನ ವ್ಯವಸ್ಥೆಯನ್ನು ಶಾಸಕರು ಪರಿಶೀಲಿಸಿದರು.ತಹಸೀಲ್ದಾರ್ ನಾಗಮ್ಮ ಎಂ.ಕಟ್ಟೀಮನಿ, ಬಿಆರ್‌ಸಿ ಶಿವರಾಜ ಪೂಜಾರಿ, ಕೃಷಿ ಸಹಾಯಕ ನಿರ್ದೇಶಕ ಶ್ರೀನಿವಾಸ ನಾಯಕ, ಸಿಡಿಪಿಓ ಮಹೇಶ ನಾಯಕ, ಪಿಐ ಮಂಜುನಾಥ ಶಿಲವೇರಿ ಹಾಗೂ ಇತರೆ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
ತಾಪಂ ಇಒ ರಾಜೇಂದ್ರಕುಮಾರ, ಸಮಾಜ ಕಲ್ಯಾಣಧಿಕಾರಿ ರಾಜಕುಮಾರ ಡೋಣಿ, ಎಆರ್‌ಸಿ ಮನೋಹರ ಶಾಸ್ತೀ ನಿರೂಪಿಸಿದರು.