ಕನ್ನಡಪ್ರಭ ವಾರ್ತೆ ಲಿಂಗಸುಗೂರು
ಜನರ ಸಮಸ್ಯೆಗಳಿಗೆ ಪ್ರಚಾರದ ಬದಲು ಪರಿಹಾರ ನೀಡುವುದು ಆಡಳಿತದ ಉದ್ದೇಶವಾಗಿದೆ, ಸಾರ್ವಜನಿಕರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಪ್ರಜಾಸೇವಾ ಆಂದೋಲನ ಸಹಕಾರಿಯಾಗಿದೆ ಎಂದು ಸಹಾಯಕ ಆಯುಕ್ತ ಬಸವಣೆಪ್ಪ ಕಲಶೆಟ್ಟಿ ತಿಳಿಸಿದರು.ಪಟ್ಟಣದ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪ್ರಜಾಸೇವಾ ಇಲಾಖೆ ಆಂದೋಲನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಮಾತನಾಡಿದ ಅವರು, ಸರ್ಕಾರ ಆಡಳಿತ ಜನರ ಮನೆ ಬಾಗಿಲಿಗೆ ತೆಗೆದುಕೊಂಡು ಹೋಗುವ ಜೊತೆಗೆ ಸಮಸ್ಯೆಗಳ ಪರಿಹಾರಕ್ಕೆ ಆಂದೋಲನ ಹಮ್ಮಿಕೊಂಡಿದೆ. ಇಲ್ಲಿ ಅರ್ಜಿ ಆಯಾ ಇಲಾಖೆಗಳ ಪ್ರತ್ಯೇಕ ಕೌಂಟರ್ ಆರಂಭಿಸಿ ಅಲ್ಲಿ ಅರ್ಜಿ ಸಲ್ಲಿಸಿದರೆ ತಾಲೂಕು ಆಡಳಿತ ತಮ್ಮ ಸಮಸ್ಯೆ ಇತ್ಯರ್ಥ ಮಾಡುತ್ತದೆ ಎಂದರು.
ಕಂದಾಯ, ತಾಲೂಕು ಪಂಚಾಯಿತಿ, ಆರೋಗ್ಯ, ಕೃಷಿ, ವಿದ್ಯುತ್, ಸಮಾಜ ಕಲ್ಯಾಣ, ಅರಣ್ಯ ಇಲಾಖೆ, ಸಿಡಿಪಿಓ, ಅಬಕಾರಿ, ಪಶು ಇಲಾಖೆ, ಶಿಕ್ಷಣ, ಪುರಸಭೆ, ಪಟ್ಟಣ ಪಂಚಾಯಿತಿ, ಉನ್ನತ ಶಿಕ್ಷಣ, ಪರಿಶಿಷ್ಟ ಪಂಗಡ, ಕಾರ್ಮಿಕ ಇಲಾಖೆ ಸೇರಿದಂತೆ ಇಲಾಖೆಗಳ ಅಧಿಕಾರಿ ಸಿಬ್ಬಂದಿಗಳು ಒಳಗೊಂಡು ಸಾರ್ವಜನಿಕರ ಅಹವಾಲು ಸ್ವೀಕಾರಕ್ಕೆ ಪ್ರತ್ಯೇಕ ಕೌಂಟರ್ ತೆರೆಯಲಾಗಿದೆ.ಬೆಳೆ ವಿಮೆ, ವಿದ್ಯುತ್, ಆಸ್ತಿ ಸೇರಿದಂತೆ ರೈತರ ಸಮಸ್ಯೆಗಳ ಕುರಿತು ಅತೀ ಹೆಚ್ಚು ಅಹವಾಲುಗಳು ಆಂದೋಲನದಲ್ಲಿ ಸಾರ್ವಜನಿಕರು ಆಯಾ ಇಲಾಖೆ ಸಂಬಂಧಿಸಿ ಪ್ರತ್ಯೇಕ ಅರ್ಜಿ ಸಲ್ಲಿಸಿದರು.
ಈ ವೇಳೆ ತಾಲೂಕು ಆರೋಗ್ಯಾಧಿಕಾರಿ ಡಾ.ಹನುಮಂತ ತಳ್ಳಳ್ಳಿ, ಕೃಷಿ ಸಹಾಯಕ ನಿರ್ದೇಶಕ ವಿಜಯಾ ಮೂರ್ತಿ, ಬಿಇಓ ಸುಜಾತ ಹೂನೂರು, ಅರಣ್ಯಾಧಿಕಾರಿ ಸುಭಾಶ್ವಂದ್ರ ನಾಯಕ, ಪುರಸಭೆ ಮುಖ್ಯಾಧಿಕಾರಿ ನಟರಾಜ, ಪ್ರವೀಣ, ಸಿಡಿಪಿಓ ನಾಗರತ್ನ ನಾಯಕ, ಜೆಸ್ಕಾಂ ಎಇಇ ಬನ್ನೆಪ್ಪ ಕರಿಬಂಟನಾಳ, ಅಬಕಾರಿ ಲಕ್ಷ್ಮೀದೇವಿ, ತೋಟಗಾರಿಕೆ ಸಹಾಯಕ ನಿರ್ದೇಶಕ ಬಿಸಿಎಂ ರಮೇಶ ರಾಠೋಡ್, ಪಿಡಬ್ಲ್ಯೂಡಿ ಎಇಇ ಪ್ರಕಾಶ ಜ್ಯೋತಿ, ಪಶು ವೈದ್ಯಾಧಿಕಾರಿ ಡಾ.ಅಮರೇಗೌಡ, ನಿರೀಕ್ಷಕ ರಾಮಕೃಷ್ಣ ನಾಯಕ, ಪ್ರಾಚಾರ್ಯ ವೆಂಕಟನಾರಾಯಣ, ಅಲ್ಪಸಂಖ್ಯಾತ ಇಲಾಖೆ ಅಧಿಕಾರಿ ಷಡಕ್ಷರಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.
-
ಪ್ರಜಾಸೇವಾ ಆಂದೋಲನದಲ್ಲಿ ಪುರಸಭೆ 12, ಕಂದಾಯ 08, ಜೆಸ್ಕಾಂ 04, ಕೃಷ್ಣಾ ಭಾಗ್ಯ ಜಲ ನಿಗಮ 01, ಗ್ರಾಮೀಣ ಕುಡಿಯುವ ನೀರು 01, ಕುಡಿಯುವ ನೀರು ಸರಬರಾಜು 01, ಒಟ್ಟು 27 ಅರ್ಜಿಗಳು ಬಂದಿವೆ. ಪರಿಶೀಲನೆ ಮಾಡಿ ಸಮಸ್ಯೆ ಪರಿಹಾರ ಮಾಡಲಾಗುವುದು.ಸತ್ಯಮ್ಮ, ತಹಸೀಲ್ದಾರರು, ಲಿಂಗಸುಗೂರು.