ಬೆಂಗಳೂರು ದಕ್ಷಿಣ ಜಿಲ್ಲೆಯ ಮಾದಪಟ್ಟಣದ ಕ್ವಾರಿಯಲ್ಲಿ ಬಂಡೆ ಬಿದ್ದು ಏಳು ಕಾರ್ಮಿಕರು ಮೃತಪಟ್ಟಿರುವುದಕ್ಕೆ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿರುವ ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್, ಮೃತರ ಕುಟುಂಬಗಳಿಗೆ ಸರ್ಕಾರದಿಂದ ತಲಾ 50 ಲಕ್ಷ ರು. ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಬೆಂಗಳೂರು ದಕ್ಷಿಣ ಜಿಲ್ಲೆಯ ಮಾದಪಟ್ಟಣದ ಕ್ವಾರಿಯಲ್ಲಿ ಬಂಡೆ ಬಿದ್ದು ಏಳು ಕಾರ್ಮಿಕರು ಮೃತಪಟ್ಟಿರುವುದಕ್ಕೆ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿರುವ ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್, ಮೃತರ ಕುಟುಂಬಗಳಿಗೆ ಸರ್ಕಾರದಿಂದ ತಲಾ 50 ಲಕ್ಷ ರು. ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.ಗುರುವಾರ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳಿಂದ ಮಾಹಿತಿ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಘಟನೆಯಲ್ಲಿ ಗುರುತು ಸಿಗಲಾರದ ಮಟ್ಟಿಗೆ ದೇಹಗಳು ಛಿದ್ರಗೊಂಡಿವೆ. ನಾನು ವೈದ್ಯರನ್ನು ಭೇಟಿ ಮಾಡಿ ತಕ್ಷಣ ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡಲು ಸೂಚಿಸಿದ್ದೇನೆ. ರಾಜ್ಯದಲ್ಲಿ ಅನೇಕ ಕಡೆ ಕ್ವಾರಿ ದಂಧೆ ನಡೆಯುತ್ತಿದೆ. ರಾಜಕಾರಣಿಗಳ ಹೆಸರು ಹೇಳಿಕೊಂಡು ಲೈಸೆನ್ಸ್ ಇಲ್ಲದೆಯೇ ಅನಧಿಕೃತವಾಗಿ ಕ್ವಾರಿ ಗಣಿ ನಡೆಯುತ್ತಿದೆ. ಬೆಂಗಳೂರಿಗೆ 15 ಕಿ.ಮೀ. ದೂರದ ಕ್ವಾರಿಯಲ್ಲಿ ಪರಿಶೀಲನೆ ಮಾಡುವ ಯೋಗ್ಯತೆ ಇಲ್ಲದೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನಿಜಕ್ಕೂ ಸತ್ತುಹೋಗಿದೆ ಎಂದು ಕಿಡಿಕಾರಿದರು.
ಈ ಘಟನೆಗೆ ಕಾರಣರಾದ ತಪ್ಪಿಸ್ಥರನ್ನು ಬಂಧಿಸಬೇಕು. ಕಾರ್ಮಿಕರ ಕುಟುಂಬಕ್ಕೆ ತಲಾ 50 ಲಕ್ಷ ರು. ಪರಿಹಾರ ನೀಡಬೇಕು. ಗಾಯಾಳುಗಳು ಚೇತರಿಸಿಕೊಳ್ಳಲು ಬಹಳ ಕಾಲ ಬೇಕಾಗುತ್ತದೆ. ಆದ್ದರಿಂದ ಪ್ರತಿಯೊಬ್ಬ ಗಾಯಾಳುಗಳಿಗೂ 10 ಲಕ್ಷ ರೂ. ಸಹಾಯ ನೀಡಬೇಕು ಎಂದು ಆಗ್ರಹಿಸಿದರು.
ಕೂಲಿಗಾಗಿ ಬೇರೆ ರಾಜ್ಯದಿಂದ ಬಂದ ಕಾರ್ಮಿಕರು ಮೃತಪಟ್ಟಿದ್ದಾರೆ. ಸರ್ಕಾರ ಅನಧಿಕೃತ ಕ್ವಾರಿ ಗಣಿಗಾರಿಕೆಗೆ ಅವಕಾಶ ನೀಡುವುದು ಸರಿಯಲ್ಲ. ಇದಕ್ಕೆ ಹಿಂದೆಯೂ ಇಂತಹ ಘಟನೆ ನಡೆದಿದ್ದರೂ ಕ್ರಮ ವಹಿಸಿಲ್ಲ. ವಿರೋಧಿಗಳಿದ್ದರೆ ಪೊಲೀಸರು ಹುಡುಕಿಕೊಂಡು ಹೋಗುತ್ತಿದ್ದರು. ಆದರೆ ಇಷ್ಟು ಸಮಯವಾದರೂ ಒಬ್ಬರನ್ನೂ ಬಂಧಿಸಿಲ್ಲ. ಜಿಲ್ಲಾಧಿಕಾರಿಗೆ ಕರೆ ಮಾಡಿದರೆ ಫೋನ್ ಕರೆ ಸ್ವೀಕರಿಸುತ್ತಿಲ್ಲ. ಸಚಿವರು ಕೂಡ ಈ ಕಡೆ ಬಂದಿಲ್ಲ. ನಾನು ಸ್ಥಳಕ್ಕೆ ಬಂದು ಕ್ರಮ ವಹಿಸಿ ಎಂದು ಹೇಳುವ ಸ್ಥಿತಿ ಬಂದಿದೆ. ಈ ಸರ್ಕಾರದ ನಿರ್ಲಕ್ಷ್ಯದಿಂದಲೇ ಈ ದುರಂತ ನಡೆದಿದೆ ಎಂದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.