ಜಿಬಿಎ ಚುನಾವಣೆಗಾಗಿ ರಸ್ತೆಗಳಿಗೆ ಟಾರ್ ಭಾಗ್ಯ

KannadaprabhaNewsNetwork |  
Published : Jul 03, 2026, 02:00 AM IST
ಚಿಕ್ಕಪೇಟೆ ವ್ಯಾಪ್ತಿಯ ರಸ್ತೆಗಳಲ್ಲಿ ಲೇನ್ ಮಾರ್ಕಿಂಗ್. | Kannada Prabha

ಸಾರಾಂಶ

ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಚುನಾವಣೆಗೆ ಕೆಲವೇ ವಾರಗಳು ಬಾಕಿ ಇರುವ ಹಿನ್ನೆಲೆಯಲ್ಲಿ ನಗರದ ರಸ್ತೆಗಳನ್ನು ಡಾಂಬರೀಕರಣ ಮಾಡಿ ರಿಪೇರಿ ಮಾಡುವ ಪ್ರಕ್ರಿಯೆಗೆ ವೇಗ ನೀಡಲಾಗಿದ್ದು, ನಗರದ ಅನೇಕ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚುವ ಕಾರ್ಯವೂ ಚುರುಕು ಪಡೆದಿದೆ.

ವಿಶೇಷ ವರದಿ

ಕನ್ನಡಪ್ರಭ ವಾರ್ತೆ ಬೆಂಗಳೂರು

ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಚುನಾವಣೆಗೆ ಕೆಲವೇ ವಾರಗಳು ಬಾಕಿ ಇರುವ ಹಿನ್ನೆಲೆಯಲ್ಲಿ ನಗರದ ರಸ್ತೆಗಳನ್ನು ಡಾಂಬರೀಕರಣ ಮಾಡಿ ರಿಪೇರಿ ಮಾಡುವ ಪ್ರಕ್ರಿಯೆಗೆ ವೇಗ ನೀಡಲಾಗಿದ್ದು, ನಗರದ ಅನೇಕ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚುವ ಕಾರ್ಯವೂ ಚುರುಕು ಪಡೆದಿದೆ.

ಇದಕ್ಕೆ ಪೂರಕವಾಗಿ ನಗರದ ರಸ್ತೆಗಳ ರಿಪೇರಿಗಾಗಿ ರಾಜ್ಯ ಸರ್ಕಾರ ₹2,000 ಕೋಟಿ ವಿಶೇಷ ಅನುದಾನವನ್ನು ಬಿಡುಗಡೆ ಮಾಡಿರುವುದಾಗಿ ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಕೆಲ ದಿನಗಳ ಹಿಂದಷ್ಟೇ ಘೋಷಿಸಿದ್ದಾರೆ. ಹದಗೆಟ್ಟ ರಸ್ತೆಗಳಿಗೆ ಕಾಯಕಲ್ಪ ನೀಡಿ 6 ತಿಂಗಳ ಒಳಗೆ ಕಾಮಗಾರಿ ಮುಗಿಸಲು ಅಲ್ಪಾವಧಿ ಟೆಂಡರ್ ಕರೆಯುವುದಾಗಿ ಹೇಳಿದ್ದಾರೆ.

ಆಗಸ್ಟ್ 31ರ ಒಳಗೆ ಜಿಬಿಎ ಪಾಲಿಕೆಗಳಿಗೆ ಚುನಾವಣೆ ನಡೆಸಲು ಸುಪ್ರೀಂಕೋರ್ಟ್ ಅಂತಿಮ ಗಡುವು ನೀಡಿದೆ. ಬರೋಬ್ಬರಿ 11 ವರ್ಷಗಳ ಬಳಿಕ ಬೆಂಗಳೂರು ನಗರದ ವಾರ್ಡ್‌ಗಳು ಜನಪ್ರತಿನಿಧಿಗಳನ್ನು ಕಾಣುವ ನಿರೀಕ್ಷೆ ಇದೆ. ಜಿಬಿಎ ರಚನೆ ಬಳಿಕ ಐದು ಪಾಲಿಕೆಗಳು ಆಗಿರುವುದರಿಂದ ಜನಪ್ರತಿನಿಧಿಗಳ ಸಂಖ್ಯೆ (369 ವಾರ್ಡ್) ದೊಡ್ಡದಿದೆ. ಚುನಾವಣೆ ಸಂದರ್ಭದಲ್ಲಿ ಮತ ಕೇಳಲು ಹೋಗುವಾಗ ಹದಗೆಟ್ಟಿರುವ, ಗುಂಡಿ ಬಿದ್ದಿರುವ ರಸ್ತೆಗಳ ಕುರಿತು ಜನರು ಪ್ರಶ್ನೆಗಳನ್ನು ಕೇಳಲು ಸಜ್ಜಾಗಿದ್ದಾರೆ. ಈ ಹಿನ್ನೆಲೆಯಲ್ಲಿ ನಗರದ ರಸ್ತೆಗಳನ್ನು ರಿಪೇರಿ ಮಾಡುವ ಕಾರ್ಯ ಐದು ಪಾಲಿಕೆಗಳ ವ್ಯಾಪ್ತಿಯಲ್ಲಿ ಚುರುಕು ಪಡೆದಿದೆ.

ಮುಖ್ಯ ರಸ್ತೆಗಳ ಡಾಂಬರೀಕರಣ:

ಬನ್ನೇರುಘಟ್ಟ ಮುಖ್ಯರಸ್ತೆಯ ಐಐಎಂಬಿ ಗೇಟ್ ಬಳಿ ತೀರಾ ಅದ್ವಾನವಾಗಿದ್ದ ರಸ್ತೆಗೆ ಕೆಲ ದಿನಗಳ ಹಿಂದಷ್ಟೇ ಡಾಂಬರು ಹಾಕಿ ಸರಿಪಡಿಸಲಾಗಿದೆ. ಈ ರಸ್ತೆ ಅದ್ವಾನವಾಗಿರುವ ಕುರಿತು ಸಾರ್ವಜನಿಕರು ಹಾಗೂ ನಗರದ ಗಣ್ಯ ಉದ್ಯಮಗಳು ಪಾಲಿಕೆಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದರು. ಇನ್ನು ಮೈಸೂರು ರಸ್ತೆ, ಕನಕಪುರ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳನ್ನು ಕೂಡ ಡಾಂಬರೀಕರಣ ಮಾಡಲಾಗಿದೆ. ವಾರ್ಡ್‌ ಪ್ರದೇಶಗಳಲ್ಲಿನ ಆರ್ಟಿರಿಯಲ್ ಮತ್ತು ಸಬ್ ಆರ್ಟಿರಿಯಲ್ ರಸ್ತೆಗಳಿಗೂ ಡಾಂಬರೀಕರಣ ಮಾಡಲಾಗುತ್ತಿದೆ.

ಗುಂಡಿ ಮುಚ್ಚುವ ಪ್ರಕ್ರಿಯೆ ಚುರುಕು:

ನಗರದಲ್ಲಿ ಕಳೆದ ಕೆಲವು ದಿನಗಳಿಂದ ಗುಂಡಿ ಮುಚ್ಚುವ ಪ್ರಕ್ರಿಯೆಯು ಭರದಿಂದ ಸಾಗಿದೆ. ಮಳೆಗಾಲ ಹಿನ್ನೆಲೆಯಲ್ಲಿ ಗುಂಡಿ ಮುಚ್ಚುವ ಪ್ರಕ್ರಿಯೆಗೆ ತಾತ್ಕಾಲಿಕವಾಗಿ ನಿಧಾನಗೊಳಿಸಲಾಗಿತ್ತು. ಆದರೆ, ಮುಂಗಾರು ದುರ್ಬಲಗೊಂಡು ನಗರದಲ್ಲಿ ಮಳೆಯಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಗುಂಡಿ ಮುಚ್ಚುವ ಕಾರ್ಯಕ್ಕೆ ಮರು ಚಾಲನೆ ನೀಡಲಾಗಿದೆ. ಚುನಾವಣೆಗೆ ದಿನಾಂಕ ನಿಗದಿಪಡಿಸುವ ಮೊದಲೇ ಸಾಧ್ಯವಾದಷ್ಟು ರಸ್ತೆ ರಿಪೇರಿ ಮತ್ತು ಗುಂಡಿ ಮುಚ್ಚುವ ಪ್ರಕ್ರಿಯೆಯನ್ನು ಮುಗಿಸಬೇಕು ಎನ್ನುವ ಗುರಿಯೊಂದಿಗೆ ಪಾಲಿಕೆಗಳು ಕಾರ್ಯ ನಿರ್ವಹಿಸುತ್ತಿವೆ.

ಲೈನ್ ಮಾರ್ಕಿಂಗ್

ರಸ್ತೆಗಳ ರಿಪೇರಿ, ಡಾಂಬರೀಕರಣದ ಜೊತೆಗೆ ಲೈನ್ ಮಾರ್ಕಿಂಗ್ ಕೂಡ ಮಾಡಲಾಗುತ್ತಿದೆ. ರಿಫ್ಲೆಕ್ಟರ್‌ಗಳನ್ನು ಅಳವಡಿಸಿ, ವಿಭಜಕಗಳು, ತಡೆ ಗೋಡೆಗಳಿಗೆ ಪೇಟಿಂಗ್ ಮಾಡಲಾಗುತ್ತಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೇಂದ್ರ ಸರ್ಕಾರದ ಜನಪರ ಯೋಜನೆ ಜನರಿಗೆ ತಲುಪಿಸಿ
ಭವಿಷ್ಯದ ಪೀಳಿಗೆ ಆರೋಗ್ಯ ಕಾಪಾಡಲು ಪೋಲಿಯೋ ಲಸಿಕೆ ಹಾಕಿಸಿ: ಶಾಸಕ ಸಿ.ಎನ್.ಬಾಲಕೃಷ್ಣ ಕರೆ