ಕನ್ನಡಪ್ರಭ ವಾರ್ತೆ ಗೌರಿಬಿದನೂರು
ಶಾಲೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ ಹಾಗೂ ವಿದ್ಯಾರ್ಥಿಗಳಿಂದ ಸ್ವಚ್ಛತಾ ಕೆಲಸಗಳನ್ನು ಮಾಡಿಸುತ್ತಿರುವ ವಿಚಾರಕ್ಕೆ ಪಾಲಕರು ಮತ್ತು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಾಲೆಯ ಆವರಣದಲ್ಲಿರುವ ನೀರಿನ ಸಂಪ್ (ಸಂಗ್ರಹ ಟ್ಯಾಂಕ್) ಒಳಗೆ ವಿದ್ಯಾರ್ಥಿಗಳನ್ನು ಇಳಿಸಿ ನೀರನ್ನು ಮೇಲಕ್ಕೆ ತೆಗೆಯುವ ಕೆಲಸ ಮಾಡಿಸಲಾಗುತ್ತಿದೆ. ಈ ಕುರಿತು ಮಾತನಾಡಿದ ಹೆಸರೇಳಲು ಇಚ್ಛಿಸದ ವಿದ್ಯಾರ್ಥಿಯೊಬ್ಬ, ಶಿಕ್ಷಕಿ ಹೇಳಿದ್ದರಿಂದ ನಾನು ನೀರಿನ ಸಂಪ್ ಒಳಗೆ ಇಳಿದು ನೀರನ್ನು ಮೇಲಕ್ಕೆ ತೆಗೆಯುತ್ತಿದ್ದೇನೆ ಎಂದು ತಿಳಿಸಿದ್ದಾನೆ.ಇದೇ ವೇಳೆ ಮಧ್ಯಾಹ್ನದ ಬಿಸಿಯೂಟದ ನಂತರ ವಿದ್ಯಾರ್ಥಿಗಳು ಕೈ ಮತ್ತು ಊಟದ ತಟ್ಟೆಗಳನ್ನು ತೊಳೆಯಲು ಸಾಕಷ್ಟು ನೀರಿನ ವ್ಯವಸ್ಥೆ ಇಲ್ಲದ ಕಾರಣ, ನೀರು ತರಿಸುವ ಕೆಲಸವನ್ನೂ ವಿದ್ಯಾರ್ಥಿಗಳಿಂದಲೇ ಮಾಡಿಸಲಾಗುತ್ತಿದೆ . ಅಲ್ಲದೆ ಶಾಲೆಯ ಸ್ವಚ್ಛತೆ ಸೇರಿದಂತೆ ಇನ್ನಿತರ ಕೆಲಸಗಳಿಗೂ ಮಕ್ಕಳನ್ನೇ ಬಳಸಿಕೊಳ್ಳಲಾಗುತ್ತಿರುವುದರಿಂದ ವಿದ್ಯಾರ್ಥಿಗಳ ಭವಿಷ್ಯ ಪ್ರಶ್ನಾರ್ಥಕವಾಗಿದೆ.
ನಗರಗೆರೆ ಸರ್ಕಾರಿ ಶಾಲೆಯ ತೊಟ್ಟಿಯನ್ನು ಕೆಲವು ವಿದ್ಯಾರ್ಥಿಗಳು ಸ್ವಚ್ಛಗೊಳಿಸುತ್ತಿರುವ ವಿಡಿಯೋ ವೈರಲ್ ಆಗಿತ್ತು. ಓರ್ವ ವಿದ್ಯಾರ್ಥಿ ಸ್ವಚ್ಛತೆ ಮಾಡಿ ತೊಟ್ಟಿಯಲಿರುವ ಕಸವನ್ನು ಕೊಂಡೊಯ್ಯುತ್ತಿದ್ದಾನೆ, ಮತ್ತೊಬ್ಬ ವಿದ್ಯಾರ್ಥಿ ಸಂಪ್ ತೊಟ್ಟಿಯನ್ನು ಸ್ವಚ್ಛಗೊಳಿಸಿ ಹೊರಗೆ ಬರುತ್ತಿರುವುದು ವಿಡಿಯೋದಲ್ಲಿ ಕಂಡು ಬಂದಿತ್ತು.
ಈ ಘಟನೆ ಕುರಿತು ಸಂಬಂಧಪಟ್ಟ ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ವಾಸ್ತವಾಂಶವನ್ನು ಬಹಿರಂಗಪಡಿಸಬೇಕು ಹಾಗೂ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಮತ್ತು ಪಾಲಕರು ಒತ್ತಾಯಿಸಿದ್ದಾರೆ.
ಮಕ್ಕಳ ಕೈಯಲ್ಲಿ ಈ ರೀತಿಯ ಕಾರ್ಯಗಳನ್ನು ಮಾಡಿಸುವುದು ಮಹಾಪರಾಧ. ಈ ವಿಷಯ ತಿಳಿದ ಕೂಡಲೇ ಮುಖ್ಯ ಶಿಕ್ಷಕರಿಗೆ ನೋಟಿಸ್ ನೀಡಲಾಗಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು. ಮುಂದೆಂದೂ ತಾಲೂಕಿನಲ್ಲಿ ಇಂತಹ ಘಟನೆಗಳು ನಡೆಯದಂತೆ ನಿಗಾ ವಹಿಸಲಾಗುವುದು.
-----
ಶಿವಕುಮಾರ್, ಶಾಲಾ ಮುಖ್ಯೋಪಾಧ್ಯಾಯ