ಶಾಲಾ ಮಕ್ಕಳಿಗಾಗಿ ಕಾರು ಖರೀದಿಸಿದ ಸರ್ಕಾರಿ ಶಾಲಾ ಶಿಕ್ಷಕರು

KannadaprabhaNewsNetwork |  
Published : Jun 27, 2026, 12:30 AM IST
 ಅಪರೂಪದ ಕಾರ್ಯಕ್ರಮ | Kannada Prabha

ಸಾರಾಂಶ

ಸರ್ಕಾರಿ ಶಾಲೆಗೆ ಮಕ್ಕಳ ದಾಖಲಾತಿ ಕಡಿಮೆಯಾಗಿ ಮುಚ್ಚುವ ಪರಿಸ್ಥಿತಿ ಎದುರಾಗಿರುವ ಸಂದರ್ಭದಲ್ಲಿ, ಶಾಲೆಯನ್ನು ಉಳಿಸುವ ಹಾಗೂ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಶಿಕ್ಷಕರು ಕೈಗೊಂಡಿರುವ ಈ ಕಾರ್ಯ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ. ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆಯುವಂತೆ ಸರ್ಕಾರಿ ಶಾಲೆಗೆ ಮಕ್ಕಳನ್ನು ಸೆಳೆಯುವ ಹೊಸ ಪ್ರಯತ್ನ ಇದಾಗಿದೆ. ಶಿಕ್ಷಕರ ಈ ಸಾಮಾಜಿಕ ಕಾಳಜಿಗೆ ಗ್ರಾಮಸ್ಥರು, ಎಸ್‌ಡಿಎಂಸಿ ಸದಸ್ಯರು, ಸ್ತ್ರೀ ಶಕ್ತಿ ಸಂಘದ ಮಹಿಳೆಯರು, ಗ್ರಾಮದ ದಾನಿಗಳು ಹಾಗೂ ಎಸ್ಟೇಟ್ ಮಾಲೀಕರು ಸಹಕಾರ ನೀಡುವುದಾಗಿ ಭರವಸೆ ನೀಡಿದ್ದು, ಶಿಕ್ಷಕರ ಸೇವಾ ಮನೋಭಾವವನ್ನು ಅಭಿನಂದಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಸಕಲೇಶಪುರ

ಸರ್ಕಾರಿ ಶಾಲೆಯನ್ನು ಉಳಿಸುವ ಹಾಗೂ ಗ್ರಾಮೀಣ ಭಾಗದ ಬಡ ಮಕ್ಕಳಿಗೆ ಶಿಕ್ಷಣದ ಅವಕಾಶ ಕಲ್ಪಿಸುವ ಅಪರೂಪದ ಕಾರ್ಯವೊಂದನ್ನು ತಾಲೂಕಿನ ಇಬ್ಬರು ಸರ್ಕಾರಿ ಶಾಲಾ ಶಿಕ್ಷಕರು ಮಾಡಿ ಮಾದರಿಯಾಗಿದ್ದಾರೆ.

ತಾಲೂಕಿನ ಕುಣಿಗನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ, ಆನೆಪೀಡಿತ ಹಾಗೂ ಡಾಂಬರ್‌ ರಸ್ತೆ ಸೌಲಭ್ಯವಿಲ್ಲದ ಹಳಕೆರೆ ಎಂಬ ಪುಟ್ಟ ಗ್ರಾಮದಲ್ಲಿರುವ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 16 ವಿದ್ಯಾರ್ಥಿಗಳಿದ್ದು, ಇಬ್ಬರು ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಈ ಶಾಲೆಗೆ ಸಮೀಪದ ಕೆಂಪಿನಾಲ್ ಗ್ರಾಮದಿಂದ ಮಕ್ಕಳು ಪ್ರತಿನಿತ್ಯ ಬರಬೇಕಾಗಿದ್ದು, ಸಾರಿಗೆ ವ್ಯವಸ್ಥೆ ಇಲ್ಲದ ಕಾರಣ ಮಕ್ಕಳು ಶಾಲೆಗೆ ಬರಲು ತೀವ್ರ ತೊಂದರೆ ಅನುಭವಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಕಳೆದ ವರ್ಷ ಶಿಕ್ಷಕರು ತಮ್ಮ ಸ್ವಂತ ವೆಚ್ಚದಲ್ಲಿ ಖಾಸಗಿ ವಾಹನದ ವ್ಯವಸ್ಥೆ ಮಾಡಿದ್ದರು. ಆದರೆ ಅದು ಸಮರ್ಪಕವಾಗಿ ಕಾರ್ಯನಿರ್ವಹಿಸದ ಕಾರಣ, ಈ ವರ್ಷ ಶಾಲೆಯ ಶಿಕ್ಷಕರಾದ ಲೋಕೇಶ್ ಹಾಗೂ ತಮ್ಮಣ್ಣ ಶೆಟ್ಟಿ ವೈ.ಎಸ್. ಅವರು ತಮ್ಮ ಸಂಬಳದ ಹಣದಲ್ಲೇ ಕಾರು ಖರೀದಿಸಿ ಶಾಲಾ ಮಕ್ಕಳನ್ನು ಕರೆತಂದು ಬಿಡುವ ವ್ಯವಸ್ಥೆ ಮಾಡಿದ್ದಾರೆ.

ಸರ್ಕಾರಿ ಶಾಲೆಗೆ ಮಕ್ಕಳ ದಾಖಲಾತಿ ಕಡಿಮೆಯಾಗಿ ಮುಚ್ಚುವ ಪರಿಸ್ಥಿತಿ ಎದುರಾಗಿರುವ ಸಂದರ್ಭದಲ್ಲಿ, ಶಾಲೆಯನ್ನು ಉಳಿಸುವ ಹಾಗೂ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಶಿಕ್ಷಕರು ಕೈಗೊಂಡಿರುವ ಈ ಕಾರ್ಯ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ. ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆಯುವಂತೆ ಸರ್ಕಾರಿ ಶಾಲೆಗೆ ಮಕ್ಕಳನ್ನು ಸೆಳೆಯುವ ಹೊಸ ಪ್ರಯತ್ನ ಇದಾಗಿದೆ. ಶಿಕ್ಷಕರ ಈ ಸಾಮಾಜಿಕ ಕಾಳಜಿಗೆ ಗ್ರಾಮಸ್ಥರು, ಎಸ್‌ಡಿಎಂಸಿ ಸದಸ್ಯರು, ಸ್ತ್ರೀ ಶಕ್ತಿ ಸಂಘದ ಮಹಿಳೆಯರು, ಗ್ರಾಮದ ದಾನಿಗಳು ಹಾಗೂ ಎಸ್ಟೇಟ್ ಮಾಲೀಕರು ಸಹಕಾರ ನೀಡುವುದಾಗಿ ಭರವಸೆ ನೀಡಿದ್ದು, ಶಿಕ್ಷಕರ ಸೇವಾ ಮನೋಭಾವವನ್ನು ಅಭಿನಂದಿಸಿದ್ದಾರೆ.

ಕಾರ್ಯಕ್ರಮಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ಪುಷ್ಪ ಎಸ್. ಚಾಲನೆ ನೀಡಿ ಮಾತನಾಡಿ, ಶಿಕ್ಷಕರು ತಮ್ಮ ಸ್ವಂತ ಹಣದಲ್ಲಿ ವಾಹನ ಖರೀದಿಸಿ ಸರ್ಕಾರಿ ಶಾಲೆಯ ಉಳಿವಿಗಾಗಿ ಪ್ರಯತ್ನಿಸುತ್ತಿರುವುದು ರಾಜ್ಯದಲ್ಲೇ ಪ್ರಥಮ ಎಂದು ಇಲಾಖೆಯ ಪರವಾಗಿ ಇಬ್ಬರು ಶಿಕ್ಷಕರಿಗೂ ಅಭಿನಂದಿಸಿದರು.

ಕಾರ್ಯಕ್ರಮದಲ್ಲಿ ಇಲಾಖೆಯ ಅಧಿಕಾರಿಗಳಾದ ಗಂಗಾಧರ್, ಕುಶವಂತ್, ನಿರಂಜನ್, ಗ್ರಾಮದ ಪೋಷಕರು, ಎಸ್‌ಡಿಎಂಸಿ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆಗಸ್ಟ್‌ 22, 23ರಂದು ಧಾರವಾಡದಲ್ಲಿ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ
ಮೊಹರಂ: ಇರಾನಿಗಳ ಮೈಯಿಂದ ಚೆಲ್ಲಿದ ರಕ್ತ